
ಕಳಪೆ ಗುಣಮಟ್ಟದ ಔಷಧಿ ಪತ್ತೆಯಾದರೆ ವಾಪಸಾತಿಗೆ ಎರಡೇ ದಿನ ಗಡುವು: ಆರೋಗ್ಯ ಇಲಾಖೆ ನಿರ್ಧಾರ
ಈ ಹಿಂದೆ ಕಳಪೆ ಅಥವಾ ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕನಿಷ್ಠ 30 ದಿನ ವಾಗುತ್ತಿತ್ತು. ಈಗ ಆ ವ್ಯವಸ್ಥೆ ಬದಲಾಗಿದೆ.
ಕಳಪೆ ಅಥವಾ ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಹಿಂದೆ ಕಳಪೆ ಅಥವಾ ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಕನಿಷ್ಠ 30 ದಿನ ವಾಗುತ್ತಿತ್ತು. ಈಗ ಆ ವ್ಯವಸ್ಥೆ ಬದಲಾಗಿದೆ. ಪ್ರಯೋಗಾಲಯದಲ್ಲಿ ಕಡಿಮೆ ಗುಣಮಟ್ಟದ ಔಷಧಿಗಳ ಬಗ್ಗೆ ವರದಿ ಬಂದ ತಕ್ಷಣ ಇ-ಸಹಿ ಮಾಡಿ ಆ್ಯಪ್‌ನಲ್ಲಿ ವರದಿ ಹಾಕಲಾಗುತ್ತದೆ. ಬಳಿಕ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಆ ವರದಿಯನ್ನು ಔಷಧ ವಿತರಕರಿಗೆ ರವಾನಿಸುತ್ತಾರೆ. ಇದರಿಂದ ಕಡಿಮೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತಿದೆ. ರಾಜ್ಯಾದ್ಯಂತ ಜುಲೈ ತಿಂಗಳಲ್ಲಿ ಸುಮಾರು 40.48 ಲಕ್ಷ ರೂ. ಮೌಲ್ಯದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಒಟ್ಟು 1,433 ಔಷಧಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 59 ಔಷಧಿಗಳಲ್ಲಿ ಕಳಪೆ ಅಥವಾ ಗುಣಮಟ್ಟ ಕಂಡು ಬಂದಿದೆ. ಹೀಗಾಗಿ ಈ ನೂತನ ವ್ಯವಸ್ಥೆ ಮುಖಾಂತರ 40.48 ಲಕ್ಷ ರೂ. ಮೌಲ್ಯದ ನಿರ್ದಿಷ್ಟ ಬ್ಯಾಚ್‌ನ ಕಳಪೆ ಗುಣಮಟ್ಟದ ಔಷಧಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿದೆ. ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಕಳೆದ ಜೂ.24 ಮತ್ತು 25ರಂದು ಮಾದಕವಸ್ತುಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 279 ಔಷಧಿ ಮಳಿಗೆಗಳನ್ನು ತಪಾಸಣೆ ನಡೆಸಿದ್ದಾರೆ. ಈ ಪೈಕಿ ನಿಯಮ ಉಲ್ಲಂಘಿಸಿದ 231 ಔಷಧಿ ಮಳಿಗೆಗಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದ್ದಾರೆ. ಅಂತೆಯೆ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಉಲ್ಲಂಘಿಸಿದ ಔಷಧಿ ಅಂಗಡಿಗಳ ವಿರುದ್ಧ 29 ಪ್ರಕರಣ ದಾಖಲಿಸಿದ್ದಾರೆ ಎಂದರು.
ಸಕಾಲದಡಿ 26 ಔಷಧ ಆಡಳಿತ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಜುಲೈ ತಿಂಗಳಲ್ಲಿ ಒಟ್ಟು 1686 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 905 ಅರ್ಜಿಗಳು ವಿಲೇವಾರಿಯಾಗಿವೆ. ಕಳೆದ ಜೂನ್ ತಿಂಗಳಲ್ಲಿ ಔಷಧ ಆಡಳಿತದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 279 ವಿಶೇಷ ಪರಿವೀಕ್ಷಣೆಯನ್ನು ಕೈಗೊಳ್ಳಲಾಗಿದ್ದು ಉಲ್ಲಂಘನೆ ಕಂಡು ಬಂದ ಪ್ರಕರಣಗಳಲ್ಲಿ ಒಟ್ಟು 231 ಶೋಕಾಸ್ ನೊಟೀಸ್ ನೀಡಲಾಗಿದೆ ಎಂದು ಹೇಳಿದರು.