
ರಾಜಧಾನಿ ಬೆಂಗಳೂರಿನಲ್ಲಿ ತಗ್ಗಿದ ಪಟಾಕಿ ಮಾಲಿನ್ಯ ಪ್ರಮಾಣ: ಕಾರಣಗಳೇನು?
ಈ ಬಾರಿ ಒಟ್ಟಾರೆ ವಾಯು ಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ. ಮಳೆ ಬಂದ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಿನಲ್ಲಿದ್ದ ಬಹುತೇಕ ಜನ ತಮ್ಮ ಊರುಗಳಿಗೆ ತೆರಳಿದ್ದ ಕಾರಣಗಳು ಮಾಲಿನ್ಯ ಪ್ರಮಾಣ ಕಡಿಮೆಗೆ ಕಾರಣವೇ?
ಬೆಳಕಿನ ಹಬ್ಬ ದೀಪಾವಳಿ ವೇಳೆ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಸಾಮಾನ್ಯವಾಗಿ ಏರಿಕೆ ಕಂಡು ಬರುತ್ತದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಈ ಬಾರಿ ಒಟ್ಟಾರೆ ವಾಯು ಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ. ಮಳೆ ಬಂದ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರಿನಲ್ಲಿದ್ದ ಬಹುತೇಕ ಜನ ತಮ್ಮ ಊರುಗಳಿಗೆ ತೆರಳಿದ್ದ ಕಾರಣದಿಂದಾಗಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿರುವ ಬೆಂಗಳೂರಿನ 11 ಕೇಂದ್ರಗಳಲ್ಲಿ ಎಕ್ಯೂಐ ದಾಖಲಿಸಲಾಗಿದೆ. ಮೊದಲ ದಿನ ಸರಾಸರಿ ಶೇ 7ರಷ್ಟು ಕಡಿಮೆ ವಾಯು ಮಾಲಿನ್ಯ ದಾಖಲಾಗಿದೆ. 2024 ದೀಪಾವಳಿಯ ಮೊದಲ ದಿನಕ್ಕೆ ಹೋಲಿಸಿದರೆ ಶೇ 98ರಷ್ಟು ಕಡಿಮೆ ಮಾಲಿನ್ಯ ದಾಖಲಾಗಿದೆ. ಅದೇ ರೀತಿ ಹೆಬ್ಬಾಳದಲ್ಲಿ 74, ನಿಮ್ಹಾನ್ಸ್ ಪ್ರದೇಶದಲ್ಲಿ 44, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 73, ಪೀಣ್ಯದಲ್ಲಿ 94 ಎಕ್ಯೂಐ ದಾಖಲಾಗಿದೆ. ನಗರದ ಒಂದೆರಡುಪ್ರದೇಶಗಳು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ವಾಯುಮಾಲಿನ್ಯ ಕಡಿಮೆಯಾಗಿದೆ. ಇನ್ನು, ಪೀಣ್ಯದಲ್ಲಿ ಶೇ 52ರಷ್ಟು (ಎಕ್ಯೂಐ–62), ಕಸ್ತೂರಿನಗರದಲ್ಲಿ ಶೇ 14 (ಎಕ್ಯೂಐ–72), ನಗರ ರೈಲ್ವೆ ನಿಲ್ದಾಣದಲ್ಲಿ ಶೇ 6ರಷ್ಟು (ಎಕ್ಯೂಐ– 104) ವಾಯು ಮಾಲಿನ್ಯ ಸಾಮಾನ್ಯ ದಿನಕ್ಕಿಂತ ಹೆಚ್ಚಾಗಿದೆ.
ವಾಯುಮಾಲಿನ್ಯ ತಗ್ಗಲು ಕಾರಣವೇನು?
ದೀಪಾವಳಿ ವೇಳೆ ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಲು ಕಡಿಮೆ ಸಂಖ್ಯೆಯ ವಾಹನಗಳ ಸಂಚಾರ ಪ್ರಮುಖ ಕಾರಣವಾಗಿದೆ. ಹಬ್ಬಕ್ಕೆ ಬಹುತೇಕ ಜನರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ರಜೆ ಇರುವ ಕಾರಣ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗಿದೆ. ಅದರ ಜತೆಗೆ ಮಳೆ ಕೂಡ ಬರುತ್ತಿರುವುದು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೆಂಗಳೂರಲ್ಲಿ ಎರಡನೇ ದಿನದ ಅಂಕಿ-ಅಂಶ
ದೀಪಾವಳಿಯ ಮೊದಲ ದಿನ ವಾಯು ಮಾಲಿನ್ಯ ಕಡಿಮೆ ಇದ್ದರೆ, ಎರಡನೇ ದಿನ ಕೆಲವೆಡೆ ಏರಿಕೆ ಕಂಡಿದೆ. ನಗರ ರೈಲ್ವೆ ನಿಲ್ದಾಣ, ಹೆಬ್ಬಾಳ, ಜಯನಗರ, ನಿಮ್ಹಾನ್ಸ್, ಸಿಲ್ಕ್‌ಬೋರ್ಡ್ ಸೇರಿದಂತೆ 11 ಕಡೆ ವಾಯು ಮಾಲಿನ್ಯ ಪ್ರಮಾಣದ ಮಾಹಿತಿ ಪಡೆದುಕೊಳ್ಳಲಾಗಿದೆ. ನಗರ ರೈಲ್ವೆ ನಿಲ್ದಾಣದಲ್ಲಿ ಮೊದಲ ದಿನ 104 ಎಐಕ್ಯೂ ಇದ್ದರೆ, ಎರಡನೇ ದಿನ 112 ಎಐಕ್ಯೂ ದಾಖಲಾಗಿದೆ. ಸಾಣೇಗುರುವನಹಳ್ಳಿಯಲ್ಲಿ ಮೊದಲ ದಿನ 71 ಎಐಕ್ಯೂ ಇದ್ದರೆ, ಎರಡನೇ ದಿನ 93 ಎಐಕ್ಯೂ ಹೆಚ್ಚಳವಾಗಿದೆ. ಜಯನಗರದಲ್ಲಿ 77 ಎಐಕ್ಯೂ ಇದ್ದು, ಎರಡನೇ ದಿನ 84ಕ್ಕೆ ಹೆಚ್ಚಳವಾಗಿದೆ. ಸಿಲ್ಕ್ ಬೋರ್ಡ್‌ನಲ್ಲಿ ಮೊದಲ ದಿನ 73 ಎಐಕ್ಯೂ ಇದ್ದು, ಎರಡನೇ ದಿನ 106 ಎಐಕ್ಯೂ ದಾಖಲಾಗಿದೆ. ಪೀಣ್ಯದಲ್ಲಿ ಮೊದಲ ದಿನ 94 ಇದ್ದು, ಎರಡನೇ ದಿನ 145ಕ್ಕೆ ಅಧಿಕವಾಗಿದೆ. ಕಸ್ತೂರಿನಗರದಲ್ಲಿ ಮೊದಲ ದಿನ ಎಐಕ್ಯೂ ದಾಖಲಾಗಿದ್ದರೆ, ಎರಡನೇ ದಿನ 141 ಎಐಕ್ಯೂ ದಾಖಲಾಗಿದೆ. ಹೆಬ್ಬಾಳದಲ್ಲಿ ಮೊದಲದಿನಕ್ಕಿಂತ ಎರಡನೇ ದಿನ ತಗ್ಗಿದ್ದು, ಮೊದಲ ದಿನ ೭೪ ಎಐಕ್ಯೂ ಇದ್ದರೆ, ಎರಡನೇ ದಿನ 42 ಎಐಕ್ಯೂ ದಾಖಲಾಗಿದೆ ಎಂದು ಅಂಕಿ-ಅಂಶಗಳು ಹೇಳಿವೆ.
ಈ ವರ್ಷ ಸಿಲ್ಕ್‌ಬೋರ್ಡ್ ಮಾತ್ರ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಹೆಚ್ಚಳವಾಗಿದೆ. ಕಳೆದ ವರ್ಷದ ದೀಪಾವಳಿಯ ಎರಡನೇ ದಿನಕ್ಕೆ ನಗರ ರೈಲ್ವೆ ನಿಲ್ದಾಣದಲ್ಲಿ 131 ಎಐಕ್ಯೂ ದಾಖಲಾಗಿದ್ದರೆ, ಈ ವರ್ಷದ ಎರಡನೇ ದಿನಕ್ಕೆ 112 ಎಐಕ್ಯೂ ದಾಖಲಾಗಿದೆ. ಹೆಬ್ಬಾಳದಲ್ಲಿ ಕಳೆದ ವರ್ಷ 227 ಎಐಕ್ಯೂ ಇದ್ದು, ಈ ವರ್ಷ 42 ಎಐಕ್ಯೂಗೆ ಇಳಿಕೆಯಾಗಿದೆ. ನಿಮ್ಹಾನ್ಸ್‌ನಲ್ಲಿ 84 ಎಐಕ್ಯೂ ಇದ್ದರೆ, 46 ಎಐಕ್ಯೂ ದಾಖಲಾಗಿದೆ. ಸಿಲ್ಕ್‌ಬೋರ್ಡ್‌ನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಳವಾಗಿದ್ದು, ಕಳೆದ ವರ್ಷ 86 ಎಐಕ್ಯೂ ಇದ್ದು, ಈ ವರ್ಷ 106 ಎಐಕ್ಯೂಗೆ ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಇನ್ನು, ಶಬ್ದ ಮಾಲಿನ್ಯ ಸಾಮಾನ್ಯ ದಿನ ಹಾಗೂ ದೀಪಾವಳಿಯ ಮೊದಲ ದಿನ ಕಳೆದ ದೀಪಾವಳಿಯ ಮೊದಲ ದಿನಕ್ಕಿಂತ ರಾಜ್ಯದಲ್ಲಿ ಸರಾಸರಿ ಶೇ 5ರಷ್ಟು ಹೆಚ್ಚಾಗಿದೆ. ಶಬ್ದ ಮಾಲಿನ್ಯದ ಸಾಮಾನ್ಯ ಮಾಪನ 75 ಡೆಸಿಬಲ್ ಆಗಿದ್ದು, ದೀಪಾವಳಿಯ ವೇಳೆ 77.73 ಡೆಸಿಬಲ್ ದಾಖಲಾಗಿದೆ.
ಜಾಗೃತಿ ಮೂಡಿಸುವ ಪ್ರಯತ್ನ
ದೀಪಾವಳಿ ವೇಳೆ ಪರಿಸರ ಮಾಲಿನ್ಯ ಕಡಿಮೆಯಾಗಿರುವ ಕುರಿತು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಪರಿಸರ ಅಧಿಕಾರಿ ಯತೀಶ್, ಪರಿಸರ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಜನರ ಭಾಗಿಯಾಗುವಿಕೆ ಅಗತ್ಯ ಇರುತ್ತದೆ. ಅವರ ಸಹಕಾರದಿಂದ ಮಾತ್ರ ಮಾಲಿನ್ಯ ತಗ್ಗಿಸಲು ಸಾಧ್ಯ. ಬೆಂಗಳೂರಿನಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಜನರು ಮಾಲಿನ್ಯದ ಕುರಿತು ಜಾಗೃತಿಯಾಗುತ್ತಿರುವುದು ಇದಕ್ಕೆ ಪೂರಕವಾಗಿದೆ. ಮಾಪನಗಳನ್ನು ಅಳವಡಿಕೆ ಮಾಡಿರುವ ಸ್ಥಳಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಹಬ್ಬ ಕಳೆದ ಬಳಿಕ ಮೂರು ದಿನಗಳ ಒಟ್ಟಾರೆ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ರಾಜ್ಯದ ಇತರೆಡೆ ಪಟಾಕಿ ಮಾಲಿನ್ಯ ಹೇಗಿದೆ?
ಈ ವರ್ಷ ದೀಪಾವಳಿ ಹಬ್ಬದ ಮೊದಲ ದಿನ ಮಾಲಿನ್ಯ ಇಳಿಕೆಯಾದರೂ ಎರಡನೇ ದಿನ ಹೆಚ್ಚಳವಾಗಿದೆ. ಬೀದರ್‌ನಲ್ಲಿ ಅತಿಹೆಚ್ಚು ವಾಯು ಮಾಲಿನ್ಯವಾಗಿದ್ದು, ವಾಯು ಗುಣಮಟ್ಟ ಇಂಡೆಕ್ಸ್‌ನಲ್ಲಿ (ಎಕ್ಯೂಐ) ಈ ಬಗ್ಗೆ ದಾಖಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 42ರಷ್ಟು ಹೆಚ್ಚಾಗಿದೆ. ಬೀದರ್‌ನಲ್ಲಿ ವಾಯುಮಾಲಿನ್ಯದಲ್ಲಿ ಹೆಚ್ಚಾದರೆ, ಧಾರವಾಡ, ಶಿವಮೊಗ್ಗ, ಬೆಳಗಾವಿ ನಂತರದ ಸ್ಥಾನದಲ್ಲಿವೆ. ಯಾದಗಿರಿ ಜಿಲ್ಲೆಯಲ್ಲಿ ವಾಯು ಮಾಲಿನ್ಯ (24 ಎಐಕ್ಯೂ) ಅತ್ಯಂತ ಕಡಿಮೆಯಾಗಿದೆ. ಉತ್ತರ ಕನ್ನಡ, ರಾಮನಗರ, ಗದಗ, ದಾವಣಗೆರೆ, ಮೈಸೂರು, ಕೊಡಗು ಜಿಲ್ಲೆಯಲ್ಲಿಯೂ ಕಡಿಮೆ ವಾಯುವ ಮಾಲಿನ್ಯವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಶಿ-ಅಂಶಗಳು ಹೇಳಿವೆ.
ದೀಪಾವಳಿಯ ಎರಡನೇ ದಿನದ ಅಂಕಿ-ಅಂಶ
ಕಳೆದ ವರ್ಷಕ್ಕೆ ಹೋಲಿಸಿದರೆ ದೀಪಾವಳಿಯ ಹಬ್ಬದ ಮೊದಲ ದಿನ ರಾಜ್ಯದ ನಾಲ್ಕು ಜಿಲ್ಲೆಯಲ್ಲಿ ಅಧಿಕ ಮಾಲಿನ್ಯವಾಗಿದ್ದರೆ, ಎರಡನೇ ದಿನ ಮೂರು ಜಿಲ್ಲೆಯಲ್ಲಿ ಅಧಿಕ ಮಾಲಿನ್ಯ ವಾಗಿದೆ. ಬೀದರ್, ಗದಗ ಮತ್ತು ಕಲಬುರಗಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. ಕಳೆದ ವರ್ಷದ ಗದಗ ಜಿಲ್ಲೆಯಲ್ಲಿ ಮಾಲಿನ್ಯ ಪ್ರಮಾಣವು ಎಐಕ್ಯೂ 41 ಇದ್ದರೆ ಈ ಬಾರಿ 60 ಎಐಕ್ಯೂ ದಾಖಲಾಗಿದೆ. ಬೀದರ್‌ನಲ್ಲಿ ಕಳೆದ ವರ್ಷ 73 ಎಐಕ್ಯೂ ಇದ್ದರೆ, ಈ ಬಾರಿ 122 ಎಐಕ್ಯೂ ಆಗಿದೆ. ಇನ್ನು, ಕಲಬುರಗಿಯಲ್ಲಿ ಕಳೆದ ವರ್ಷದ 53 ಎಐಕ್ಯೂ ಇದ್ದು, ಈಬಾರಿ 56 ಎಐಕ್ಯೂ ದಾಖಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶ ಹೇಳಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತಿ ಕಡಿಮೆ ಮಾಲಿನ್ಯವಾಗಿದ್ದು, ಶೇ.೨೧೭ರಷ್ಟು ಮಾಲಿನ್ಯ ಪ್ರಮಾಣ ತಗ್ಗಿದೆ. ಕಳೆದ ವರ್ಷದ ದೀಪಾವಳಿಯ ಎರಡನೇ ದಿನದಂದು 76 ಎಐಕ್ಯೂ ಆಗಿದ್ದರೆ, ಈ ವರ್ಷದ ಎರಡನೇ ದಿನದಂದು 24 ಎಐಕ್ಯೂ ದಾಖಲಾಗಿದೆ. ನಂತರ ಉತ್ತರ ಕನ್ನಡ ಜಿಲ್ಲೆ ಇದ್ದು, ಶೇ.163ರಷ್ಟು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ 79 ಎಐಕ್ಯೂ ಇದ್ದರೆ, ಈ ವರ್ಷ 30 ಎಐಕ್ಯೂ ಇದೆ. ಕೊಪ್ಪಳ ಜಿಲ್ಲೆಯೂ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಕಳೆದ ವರ್ಷ 36 ಏಐಕ್ಯೂ ಇದ್ದು, ಅದೇ ಪ್ರಮಾಣವು ಈ ವರ್ಷವು ದಾಖಲಾಗಿದೆ ಎಂದು ತಿಳಿಸಿದೆ.