
ಗವರ್ನರ್ v/s ಸರ್ಕಾರ| ರಾಜ್ಯಪಾಲರ ವಿರುದ್ಧ ʼಗೋಬ್ಯಾಕ್ ಅಭಿಯಾನʼಕ್ಕೆ ಕರ್ನಾಟಕ ಸಜ್ಜು
ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ಕೂಡ ಹೊಸ ವಿಚಾರವಲ್ಲ. ಆದರೆ,ಚುನಾಯಿತ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷದಿಂದ ರಾಜ್ಯಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವುದು ಸತ್ಯ.
ಕರ್ನಾಟಕದಲ್ಲಿ ಚುನಾಯಿತ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗೋ ಬ್ಯಾಕ್ ಅಭಿಯಾನ ಆರಂಭಿಸಲು ಸಜ್ಜಾಗಿದೆ.
ಕರ್ನಾಟಕ ಸರ್ಕಾರ ಈ ಗಟ್ಟಿ ನಿರ್ಧಾರವೇ ದಕ್ಷಿಣ ಭಾರತದ ರಾಜ್ಯಗಳಿಗೂ ಪ್ರೇರಣೆಯಾಗಿ, ಕೇಂದ್ರದ ವಿರುದ್ಧ ಒಗ್ಗಟ್ಟಿನ ಮಂತ್ರ ಪಠಿಸಲು ಕಾರಣವಾಗುತ್ತಿದೆ.ಇದಕ್ಕೆ ಇಂಬು ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿರುವುದು ರಾಜ್ಯಪಾಲರ ವಿರುದ್ಧದ ಗೋ ಬ್ಯಾಕ್ ಅಭಿಯಾನದ ಮೊದಲ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕದಂತೆ ತಮಿಳುನಾಡಿನಲ್ಲೂ ರಾಜ್ಯಪಾಲರು ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳಿರುವ ಕಾರಣ ನೀಡಿ ಸರ್ಕಾರದ ಭಾಷಣ ಓದುವುದರಿಂದ ಹಿಂದೆ ಸರಿದಿದ್ದರು. ಸಚಿವ ಸಂಪುಟ ಸಭೆ ಅನುಮೋದಿಸಿದ ಭಾಷಣ ಓದದ ರಾಜ್ಯಪಾಲರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈಗ ಇದೇ ಆಕ್ರೋಶ ರಾಜ್ಯಪಾಲರ ವಿರುದ್ಧದ ಗೋ ಬ್ಯಾಕ್ ಅಭಿಯಾನಕ್ಕೆ ಬುನಾದಿಯಾಗಿದೆ.
ಕೇರಳದಲ್ಲೂ ಸರ್ಕಾರ ಸಿದ್ದಪಡಿಸಿದ ಭಾಷಣದ ಅಂಶಗಳನ್ನು ರಾಜ್ಯಪಾಲರು ಕೈ ಬಿಟ್ಟಿದ್ದರು. ಸಿಎಂ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
"ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ತಪ್ಪು. ಸಂವಿಧಾನದ ಪ್ರಕಾರ ಸಚಿವ ಸಂಪುಟ ತಯಾರಿಸಿದ ಭಾಷಣವನ್ನು ರಾಜ್ಯಪಾಲರು ಓದಬೇಕು. ಆದರೆ, ಅಧಿವೇಶನದಲ್ಲಿ ಎರಡು-ಮೂರು ನಿಮಿಷ ಓದಿ ರಾಷ್ಟ್ರಗೀತೆಗೂ ನಿಲ್ಲದೇ ಹೊರಟು ಹೋದರು. ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯನ್ನು ನಾವು ಖಂಡಿಸಿದ್ದೇವೆ. ಯಾವುದೇ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಾರದು. ಆ ನಿಟ್ಟಿನಲ್ಲಿ ರಾಜ್ಯಪಾಲರ ಭಾಷಣದ ಅನಿವಾರ್ಯತೆ ಬಗ್ಗೆ ಚರ್ಚೆಗಳು ಆರಂಭವಾಗಲಿವೆ ಎಂದು ಶಾಸಕ ಅಜಯಸಿಂಗ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ರಾಜ್ಯದ ಹಿತದೃಷ್ಟಿ ಕಾಪಾಡುವ ಬದಲು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗವರ್ನರ್ ಹಠಾವೋ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಪಾಲರ ಹುದ್ದೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ರಾಜ್ಯಪಾಲರು ಕೇವಲ ಭಾಷಣವಷ್ಟೇ ಅಲ್ಲ, ಮಸೂದೆಗಳನ್ನು ವರ್ಷಗಟ್ಟಲೇ ಇಟ್ಟುಕೊಂಡು ಅಂಕಿತ ಹಾಕದೇ ಕಳುಹಿಸಿದ್ದಾರೆ. ಸರ್ಕಾರದ ಕಾರ್ಯವೈಖರಿ ತಡೆಯಾಗುತ್ತಿದ್ದಾರೆ. ರಾಜ್ಯಪಾಲರ ಭಾಷಣ, ವರ್ತನೆ, ಬಿಜೆಪಿಯೇತರ ರಾಜ್ಯಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೇಗೆ ಪ್ರಚೋದಿಸುತ್ತಿದೆ ಎಂಬ ಎಲ್ಲಾ ವಿಚಾರಗಳು ಚರ್ಚೆಯಾಗಬೇಕು ಎಂದು ಹೇಳಿದರು.
ಸರ್ಕಾರ-ರಾಜ್ಯಪಾಲರ ಸಂಘರ್ಷ ಸಾಮಾನ್ಯ
ದಕ್ಷಿಣ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟ ಹೊಸದೇನಲ್ಲ.
ಅನುದಾನ, ತೆರಿಗೆ ಹಂಚಿಕೆ ತಾರತಮ್ಯ, ಮಲತಾಯಿ ಧೋರಣೆ, ಇನ್ನಿತರ ಕಾರಣಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಸಾಮಾನ್ಯವಾಗಿದೆ. ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ಕೂಡ ಹೊಸ ವಿಚಾರವಲ್ಲ. ಆದರೆ,ಚುನಾಯಿತ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷದಿಂದ ರಾಜ್ಯಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿರುವುದು ಸತ್ಯ.
ಪ್ರಸ್ತುತ, ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದ ಬಳಿಕ ಕೇಂದ್ರ ಹಾಗೂ ರಾಜ್ಯಗಳ ಮಧ್ಯೆ ತಿಕ್ಕಾಟ ಹೆಚ್ಚಾಗಿದೆ.
ರಾಜ್ಯಗಳ ಅಭಿಪ್ರಾಯ ಆಲಿಸದೇ ಕಾಯ್ದೆ ಜಾರಿ ಮಾಡಿರುವ ಕೇಂದ್ರದ ನಿರ್ಧಾರವನ್ನು ಖಂಡಿಸಿ ನಿರ್ಣಯ ಕೈಗೊಳ್ಳುವ ರಾಜ್ಯ ಸರ್ಕಾರದ ಉಲ್ಲೇಖವನ್ನು ರಾಜ್ಯಪಾಲರು ಓದದೇ ಮೊದಲ ಹಾಗೂ ಕೊನೆಯ ಪ್ಯಾರಾ ಓದಿ, ಹೊರ ನಡೆದ ಪ್ರಸಂಗ ಹೊಸ ಚರ್ಚೆಗೆ ನಾಂದಿ ಹಾಡಿತ್ತು.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ನೀಡಿದ್ದ ಭಾಷಣದಲ್ಲಿ ತಪ್ಪುಗಳಿವೆ, ಕೇಂದ್ರದ ವಿರುದ್ಧವಾದ ಅಂಶಗಳಿವೆ. ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆ ಎಂಬ ಕಾರಣ ಕೊಟ್ಟು ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ, ರಾಜ್ಯಪಾಲರ ಭಾಷಣವೇ ಅನಗತ್ಯ, ಸಂವಿಧಾನದ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡಲು ಇಂತಹ ಅಂಶಗಳೇ ಪ್ರೇರಕವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರದ ಆಣತಿಯಂತೆ ವರ್ತಿಸುವ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಲು ರಾಷ್ಟ್ರಪತಿಗಳ ಅಂಗಳ ಪ್ರವೇಶಕ್ಕೆ ದಕ್ಷಿಣ ರಾಜ್ಯಗಳು ಸಿದ್ಧತೆ ಆರಂಭಿಸುತ್ತಿವೆ. ರಾಜ್ಯಪಾಲರ ವಿರುದ್ಧ ಕರ್ನಾಟಕದ ಗೋಬ್ಯಾಕ್ ಅಭಿಯಾನವನ್ನೇ ಅನುಸರಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಗೋಬ್ಯಾಕ್ ಅಭಿಯಾನದ ಕುರಿತು ಚರ್ಚಿಸಲು ನಿರ್ಧಾರ
ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ದಪಡಿಸಿದ ಭಾಷಣ ಓದದ ರಾಜ್ಯಪಾಲರ ನಡೆಗೆ ಆಡಳಿತ ರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೆಂಡಾಮಂಡಲವಾಗಿದೆ. ರಾಜ್ಯಪಾಲರ ವರ್ತನೆ ಖಂಡಿಸಿ ಗೋಬ್ಯಾಕ್ ಅಭಿಯಾನ ನಡೆಸಲು ಚಿಂತನೆ ನಡೆಸಿದ್ದು, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ತೀರ್ಮಾನಿಸಿದೆ.
ಕೇಂದ್ರದ ವಿರುದ್ಧದ ಅಂಶಗಳನ್ನು ಓದದೇ ನಿರ್ಗಮಿಸಿದ ವಿಚಾರವನ್ನೇ ಬಳಸಿಕೊಂಡು ಕೇಂದ್ರದ ಮೇಲೆ ಒತ್ತಡ ಹೇರುವುದು, ಉಭಯ ಸದನಗಳ ಒಳ- ಹೊರಗೂ ಹೋರಾಟ ನಡೆಸಲು ತಂತ್ರಗಾರಿಗೆ ಹೆಣೆಯುತ್ತಿದೆ. ಮನರೇಗಾ ವಿಚಾರವಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ, ರಾಷ್ಟ್ರಮಟ್ಟದಲ್ಲಿ ಈಗಾಗಲೇ ಹೋರಾಟ ಆರಂಭಿಸಿದೆ. ಈಗ ಕರ್ನಾಟಕ ರಾಜ್ಯಪಾಲರು ಭಾಷಣ ಕೈ ಬಿಟ್ಟ ಪ್ರಕರಣವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ಮಾಡಿದ ಅಪಚಾರ. ಪೂರ್ಣ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಕಾನೂನು ತಜ್ಞರ ಜೊತೆ ಚರ್ಚಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಖಂಡನಾ ನಿರ್ಣಯಕ್ಕೆ ಚಿಂತನೆ
ರಾಜ್ಯ ಸರ್ಕಾರದ ಭಾಷಣ ಓದದೇ ಸಂವಿಧಾನದ ವಿಧಿವ ಉಲ್ಲಂಘಿಸಿದ ಹಾಗೂ ರಾಷ್ಟ್ರಗೀತೆ ಅಪಮಾನ ಮಾಡಿದ ಆರೋಪದ ಮೇಲೆ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಸದನದಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಖಂಡನಾ ನಿರ್ಣಯ ಕಳುಹಿಸಲಾಗುವುದು, ಅಧಿವೇಶನದಲ್ಲಿ ಖಂಡನಾ ನಿರ್ಣಯ ಮಂಡಿಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದೇ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮವು ಸರ್ಕಾರ ಹಾಗೂ ಲೋಕಭವನದ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.
ಕರ್ನಾಟಕ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಸೂದೆ, ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ, ಗ್ರೇಟರ್ ಬೆಂಗಳೂರು ಸೇರಿದಂತೆ ಹಲವು ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಮಾಡಿದ್ದರು.
ತಮಿಳುನಾಡು, ಕೇರಳದಲ್ಲಿ ಸಂಘರ್ಷಕ್ಕಿಲ್ಲ ಕೊನೆ
ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ ಕೇರಳ, ತಮಿಳುನಾಡಿನಲ್ಲಿ ಕೊನೆ ಕಾಣದಂತಾಗಿದೆ.
ತಮಿಳುನಾಡಿನಲ್ಲಿ 2023 ರ ಜಂಟಿ ಅಧಿವೇಶನದ ಸಂದರ್ಭ ʼದ್ರಾವಿಡ ಆಡಳಿತ ಮಾದರಿʼ ಎಂಬ ಉಲ್ಲೇಖವನ್ನು ರಾಜ್ಯಪಾಲ ಆರ್.ಎನ್. ರವಿ ಅವರು ಭಾಷಣದಲ್ಲಿ ಓದದೇ ಕೈ ಬಿಟ್ಟಿದ್ದರು.
2024 ರಲ್ಲಿ ಆರಂಭಿಕ ಪ್ಯಾರಾ ಮಾತ್ರ ಓದಿದ್ದರು. 2025 ಜನವರಿಯಲ್ಲಿ ʼಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವʼ ಎಂದು ಉಲ್ಲೇಖಿಸಿ ಭಾಷಣವನ್ನು ಮೊಟಕುಗೊಳಿಸಿದ್ದರು. ಇನ್ನು ವಿಧೇಯಕರಿಗೆ ಸಹಿ ಹಾಕುವುದರಲ್ಲೂ ದೀರ್ಘ ವಿಳಂಬ ಮಾಡಿದ್ದ ಹಿನ್ನೆಲೆ ಪ್ರಕರಣವು ಸುಪ್ರೀಂಕೋರ್ಟ್ ವರೆಗೂ ಸಾಗಿತ್ತು.
ಈಗ ಮತ್ತೆ ಸಂಘರ್ಷ ಸೃಷ್ಟಿಯಾಗಿರುವ ಹಿನ್ನೆಲೆ ಹಾಗೂ ಕೇರಳ, ಕರ್ನಾಟಕದಲ್ಲಿ ಯಥಾಸ್ಥಿತಿಯ ಪರಿಸ್ಥಿತಿ ಉದ್ಭವಿಸಿರುವ ಕಾರಣ ಒಗ್ಗಟ್ಟಿನ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ.
ಕರ್ನಾಟಕದಲ್ಲಿ ರಾಜ್ಯಪಾಲರ ವರ್ತನೆ ಗಮನಿಸಿದ ಬಳಿಕ ಖುದ್ದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರೇ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿರುವುದು ಇಂತಹದ್ದೊಂದು ಸಾಧ್ಯತೆಗೆ ಪುಷ್ಠಿ ನೀಡಿದೆ.
ಕೇರಳದಲ್ಲೂ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಘರ್ಷಣೆಗಳು ಸಾಕಷ್ಟು ನಡೆದಿವೆ. 2024 ರಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು 61 ಪುಟಗಳ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರಾ ಮಾತ್ರ ಓದಿದ್ದರು.
ಪಶ್ಚಿಮ ಬಂಗಾಳದಲ್ಲಿ ಸರ್ಕಾರ-ರಾಜ್ಯಪಾಲರ ಘರ್ಷಣೆ
ಪಶ್ಚಿಮ ಬಂಗಾಳದಲ್ಲಿ 2021 ಹಾಗೂ 2022 ರ ನಡುವೆ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ವಿಧಾನಸಭೆಯಲ್ಲಿ ಪದೇ ಪದೇ ಭಾಷಣ ಮೊಟಕುಗೊಳಿಸಿದ್ದರು. ಒಮ್ಮೆ 25 ಪುಟಗಳ ಭಾಷಣದ ಬದಲಿಗೆ ಒಂದೇ ವಾಕ್ಯ ಓದಿದ್ದರು.
1965 ರಲ್ಲಿ ರಾಜ್ಯಪಾಲರಾದ ಪದ್ಮಜಾ ನಾಯ್ಡು ಅವರು ವಿಧಾನಸಭೆಯಿಂದ ಹೊರನಡೆದಿದ್ದರು. 1967 ರಲ್ಲಿ ರಾಜ್ಯಪಾಲ ಧರಮ್ ವೀರ ಅವರು ಸರ್ಕಾರ ನೀಡಿದ್ದ ಭಾಷಣದಲ್ಲಿ ಕೆಲ ಭಾಗಗಳನ್ನು ಬಿಟ್ಟುಬಿಟ್ಟಿದ್ದರು.
ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷದಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಒಟ್ಟಾರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದೇ ತಿಂಗಳು ನಡೆದ ಮೂರು ಘಟನೆಗಳು ರಾಜ್ಯಪಾಲರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಕದನವಾಗಿ ಮಾರ್ಪಟ್ಟಿವೆ.
ಸಂವಿಧಾನ ನಿಯಮ ಹೇಳುವುದೇನು?
ಸಂವಿಧಾನದ 176 ನೇ ವಿಧಿಯು ರಾಜ್ಯಪಾಲರು ಪ್ರತಿ ವರ್ಷ ಮೊದಲ ಅಧಿವೇಶನ ಹಾಗೂ ಚುನಾವಣೆ ನಂತರ ಜಂಟಿ ಸದನ ಉದ್ದೇಶಿಸಿ ಮಾತನಾಡಬೇಕು. ಅದೇ ರೀತಿ 163 ನೇ ವಿಧಿಯನ್ವಯ ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸುವುದು ಎಂದು ಹೇಳಿದೆ.
175 ನೇ ವಿಧಿಯನ್ವಯ ಚುನಾಯಿತ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದಬೇಕು. ಈ ಭಾಷಣದಲ್ಲಿ ಯಾವುದೇ ವೈಯಕ್ತಿಕ ಅಭಿಪ್ರಾಯ ಸೇರಿಸುವುದಾಗಲಿ, ಕೈ ಬಿಡುವುದಾಗಲಿ ಮಾಡುವಂತಿಲ್ಲ ಎಂದು ಹೇಳುತ್ತದೆ.
2016 ರಲ್ಲಿ ಸುಪ್ರೀಂಕೋರ್ಟ್ ನಬಮ್ ರೆಬಿಯಾ ಪ್ರಕರಣದಲ್ಲಿ ಚುನಾಯಿತ ಸರ್ಕಾರಗಳನ್ನು ಅತಿಕ್ರಮಿಸಲು ರಾಜ್ಯಪಾಲರು ಸಾಂವಿಧಾನಿಕ ಕಾರ್ಯ ಬಳಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ರಾಜ್ಯಪಾಲರು ತಮ್ಮ ವಿವೇಚನೆ ಬಳಸುವಂತಿಲ್ಲ. ಕೇವಲ ಮಂತ್ರಿಮಂಡಲದ ಸಹಾಯ ಮತ್ತು ಸಲಹೆ ಮೇರೆಗೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿತ್ತು.

