ಲಂಚಾವತಾರ| ಸಿಎಂಗೆ ದೂರು ಕೊಟ್ಟರೂ ಕ್ರಮವಿಲ್ಲ; ರಾಹುಲ್‌ಗೆ ದೂರು ಸಲ್ಲಿಸಲು ಮದ್ಯ ಮಾರಾಟಗಾರರ ತೀರ್ಮಾನ
x

ಲಂಚಾವತಾರ| ಸಿಎಂಗೆ ದೂರು ಕೊಟ್ಟರೂ ಕ್ರಮವಿಲ್ಲ; ರಾಹುಲ್‌ಗೆ ದೂರು ಸಲ್ಲಿಸಲು ಮದ್ಯ ಮಾರಾಟಗಾರರ ತೀರ್ಮಾನ

ಸರ್ಕಾರ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಹೈಕಮಾಂಡ್ ಗೆ ದೂರು ನೀಡಲು ಸಂಘದ ವತಿಯಿಂದ ನಿರ್ಧರಿಸಿದ್ದೇವೆ. ಶೀಘ್ರವೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ದೂರು ನೀಡುತ್ತೇವೆ ಎಂದು ಗುರುಸ್ವಾಮಿ ಹೇಳಿದ್ದಾರೆ.


ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಹಾಗೂ ಭ್ರಷ್ಟಾಚಾರದ ಆರೋಪಗಳು ಪ್ರತಿಧ್ವನಿಸುತ್ತಿವೆ. 2024 ರಲ್ಲಿ ರಾಜ್ಯ ಸರ್ಕಾರವನ್ನು ತೀವ್ರ ಟೀಕೆಗೆ ಗುರಿ ಮಾಡಿದ್ದ ʼ18 ಕೋಟಿ ರೂ. ಹಫ್ತಾ ವಸೂಲಿ ಆರೋಪʼದ ನಂತರ ಇದೀಗ ಇಲಾಖೆಯಲ್ಲಿ ಪರವಾನಗಿ ವಿತರಣೆಯಲ್ಲಿ 2500 ಕೋಟಿ ರೂ. ಲಂಚದ ಸುದ್ದಿ ಸದ್ದು ಮಾಡುತ್ತಿದೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಲಂಚಗುಳಿತದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಮುಗಿಬಿದ್ದಿವೆ. ಅಬಕಾರಿ ಸಚಿವರ ರಾಜೀನಾಮೆ ಒತ್ತಾಯಿಸಿ ಕೋಲಾಹಲ ಸೃಷ್ಟಿಸಿವೆ. ಈ ಮಧ್ಯೆ, ರಾಜ್ಯ ಮದ್ಯ ಮಾರಾಟಗಾರರ ಸಂಘವು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಅಬಕಾರಿ ಇಲಾಖೆಯಲ್ಲಿ ಲಂಚದ ಹಾವಳಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಲಂಚಾವತಾರದ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಎಸ್. ಗುರುಸ್ವಾಮಿ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.

ಅಬಕಾರಿ ಇಲಾಖೆ ಲಂಚದ ಬಗ್ಗೆ ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ಜೋರು ಚರ್ಚೆಯಾಗಿದೆ. ಪ್ರತಿ ಪಕ್ಷಗಳು ಮಾಡುತ್ತಿರುವ ಎಲ್ಲ ಆರೋಪಗಳು ಸತ್ಯವಾಗಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ, ಅಬಕಾರಿ ಇಲಾಖೆಯಲ್ಲಿ ಲಂಚದ ಹಾವಳಿ ವಿಪರೀತವಾಗಿದೆ. ಲಂಚ ಕೊಡದಿದ್ದರೆ ಅಧಿಕಾರಿಗಳು ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದರು.

1 ಕೋಟಿಯವರೆಗೂ ನೀಡಬೇಕು ಲಂಚ

CL -7 ಪರವಾನಗಿಗೆ 1 ಕೋಟಿಯವರೆಗೂ ಲಂಚ ಕೊಡಬೇಕು. ಲೈಸೆನ್ಸ್ ವರ್ಗಾವಣೆ, ಹೆಸರು ಬದಲಾವಣೆ ಮಾಡುವಾಗಲೂ ಲಂಚ ನೀಡಬೇಕು. ಲಂಚ ನೀಡದಿದ್ದರೆ ಕೆಲಸ ಆಗುವುದಿಲ್ಲ, ಕಡತಗಳನ್ನು ಹಾಗೆಯೇ ಉಳಿಯಲಿವೆ. ಇದರಲ್ಲಿ ಸಚಿವರಿಗೂ ಲಂಚ ಹೋಗುತ್ತದೆ. ಬೇಲಿನೇ ಎದ್ದು ಹೊಲ ಮೇಯ್ದರೆ ಹೇಗೆ?, ಸಚಿವರಿಗೂ ಲಂಚ ನೀಡಬೇಕು ಎಂದು ಅಧಿಕಾರಿಗಳು ನೇರವಾಗಿಯೇ ಹೇಳುತ್ತಾರೆ. ಇದಕ್ಕೆ ಕಡಿವಾಣ ಹಾಕುವವರೂ ಯಾರು ಎಂದು ಪ್ರಶ್ನಿಸಿದರು.

ಸಿಎಂಗೆ ದೂರು ನೀಡಿದರೂ ಪ್ರಯೋಜನವಿಲ್ಲ

ಅಬಕಾರಿ ಇಲಾಖೆಯ ಲಂಚದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ನಮ್ಮ ಪಕ್ಕದ ತಾಲ್ಲೂಕಿನವರು. ನಮಗೆ ಮೊದಲಿನಿಂದಲೂ ಆಪ್ತರು. ಅಬಕಾರಿ ಇಲಾಖೆಯಲ್ಲಿ ಲಂಚದ ಹಾವಳಿ ಹೆಚ್ಚಿದೆ, ಇದಕ್ಕೆ ಕಡಿವಾಣ ಹಾಕಿ ಎಂದು ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಇತ್ತೀಚೆಗೆ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು 2.5 ಕೋಟಿ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ, ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ‌ಪ್ರಶ್ನಿಸಿದ ಅವರು, ಅಬಕಾರಿ ಇಲಾಖೆಯ ಲಂಚಕ್ಕೆ ಕಡಿವಾಣ ಹಾಕದಿದ್ದರೆ ಮುಖ್ಯಮಂತ್ರಿಗಳಿಗೂ ಕೆಟ್ಟ ಹೆಸರು ಬರುವುದು ನಿಶ್ಚಿತ ಎಂದು ಎಚ್ಚರಿಸಿದರು.

ರಾಹುಲ್ ಗಾಂಧಿಗೆ ದೂರು

ಅಬಕಾರಿ ಇಲಾಖೆಯ ಲಂಚಾವತಾರದ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಹೈಕಮಾಂಡ್ ಗೆ ದೂರು ನೀಡಲು ಸಂಘದ ವತಿಯಿಂದ ನಿರ್ಧರಿಸಿದ್ದೇವೆ. ಶೀಘ್ರವೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ದೂರು ನೀಡುತ್ತೇವೆ. ಲಂಚದ ಹಾವಳಿಗೆ ಕಡಿವಾಣ ಹಾಕದಿದ್ದದರೆ ಪಕ್ಷ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು. ಇದಾದ ಬಳಿಕ ಅಧಿಕೃತವಾಗಿ ಲೋಕಾಯುಕ್ತ ಹಾಗೂ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದು ಗುರುಸ್ವಾಮಿ ಹೇಳಿದರು.

ಮದ್ಯ ಖರೀದಿಗೆ ಟಾರ್ಗೆಟ್ ಫಿಕ್ಸ್

ಮದ್ಯ ಖರೀದಿ ಮಾಡುವಂತೆ ಸರ್ಕಾರದಿಂದ ಗುರಿ ನಿಗದಿಪಡಿಸಲಾಗುತ್ತಿದೆ. ಮದ್ಯದ ದರ ಹೆಚ್ಚಳದಿಂದ ಮಾರಾಟ ಕುಸಿತವಾಗಿದೆ. ನಾವು ಮಾರಾಟಕ್ಕೆ ತಕ್ಕಂತೆ ಖರೀದಿ ಮಾಡುತ್ತೇವೆ. ಖರೀದಿ‌ ಮಾಡಲು ಕಡಿಮೆ ಇಂಡೆಂಟ್ ಹಾಕಿದಾಗ, ಹೆಚ್ಚು ಇಂಡೆಂಟ್ ಹಾಕಿ ಎಂದು ಒತ್ತಾಯ ಮಾಡಲಾಗುತ್ತಿದೆ. ಉದಾಹರಣೆಗೆ ನಮಗೆ 50 ಬಾಕ್ಸ್ ಸಾಕು ಎಂದು ಹೇಳಿದರೆ, ಅಬಕಾರಿ ಇಲಾಖೆ ಅಧಿಕಾರಿಗಳು 100 ಬಾಕ್ಸ್ ಖರೀದಿ ಮಾಡಿ ಎಂದು ಒತ್ತಾಯಿಸುತ್ತಾರೆ. ಅವರು ಹೇಳಿದಷ್ಟು ಖರೀದಿ ಮಾಡದಿದ್ದರೆ ಅನವಶ್ಯಕವಾಗಿ ಪ್ರಕರಣ ದಾಖಲಿಸಿ ಬೆದರಿಸುತ್ತಾರೆ ಎಂದು ಗುರುಸ್ವಾಮಿ ಆರೋಪಿಸಿದರು.

ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಹಗರಣ ನಡೆದಿದ್ದು, ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆ ಪಡೆಯಬೇಕು ಎಂದು ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದರು. ಮದ್ಯ ಪರವಾನಗಿ ಹಂಚಿಕೆ ಮೂಲಕ ಸಂಗ್ರಹಿಸಿದ ಲಂಚದ ಹಣವನ್ನು ಅಸ್ಸಾಂ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಗಂಭೀರತ ಆರೋಪ ಮಾಡಿದ್ದರು.

ನಿಯಮ ಉಲ್ಲಂಘಿಸಿ ಮದ್ಯ ಪರವಾನಗಿಗಳನ್ನು ಹರಾಜು ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಸಚಿವರಿಗೂ ಲಂಚ ನೀಡಬೇಕು ಎಂದು ಹೇಳಿರುವ ಆಡಿಯೋ ಬಹಿರಂಗವಾಗಿದೆ. ಹಾಗಾಗಿ, ಇದು ಬೃಹತ್‌ ಹಗರಣವಾಗಿದ್ದು, ಕೂಡಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ನಡುವೆ ಲಕ್ಷ್ಮಿನಾರಾಯಣ ಎಂಬುವರು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

Read More
Next Story