Why is the CM reluctant to hand over the Bellary shootout case to the CBI? MLA Janardhana Reddy
x

ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ ಶೂಟೌಟ್ ಕೇಸ್ ಸಿಬಿಐಗೆ ನೀಡಲು ಸಿಎಂ ಹಿಂದೇಟೇಕೆ? ಶಾಸಕ ಜನಾರ್ದನ ರೆಡ್ಡಿ ಪ್ರಶ್ನೆ

ಕಾಂಗ್ರೆಸ್‌ ಶಾಸಕನೇ ಕೊಲೆ ಮಾಡಿಸಿದ್ದೆಂದು ನಿಮಗೆ ಈಗಾಗಲೇ ಗೊತ್ತಾಗಿದೆ. ಇದರಿಂದ ನಿಮ್ಮ ಪಕ್ಷಕ್ಕೆ ಈಗಾಗಲೇ ಮುಜುಗರವಾಗಿದೆ. ಕೇವಲ ಮೂವರು ಖಾಸಗಿ ಗನ್‍ಮೆನ್‍ಗಳನ್ನು ಬಂಧಿಸಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.


Click the Play button to hear this message in audio format

ತಮ್ಮನ್ನು ತಾವು ಕಾನೂನಿನ ರಕ್ಷಕ ಮತ್ತು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸಿಕೊಳ್ಳಲು ಏಳು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಶಾಸಕ ಜನಾರ್ದನ ರೆಡ್ಡಿ ನೇರ ಸವಾಲು ಹಾಕಿದ್ದಾರೆ. "ತಮ್ಮ ಆಡಳಿತಾವಧಿಯಲ್ಲಿ ಕಾನೂನು ರಕ್ಷಿಸಲು ಕಂಕಣಬದ್ಧನಾಗಿದ್ದೇನೆ ಎನ್ನುವ ಸಿಎಂ, ಬಳ್ಳಾರಿಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ?" ಎಂದು ಪ್ರಶ್ನಿಸುವ ಮೂಲಕ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ.

ಬಿಜೆಪಿಯವರು ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದಾರೆ ಎಂಬ ಸಿಎಂ ಅವರ ಪ್ರಶ್ನೆಯು ಮುಖ್ಯವಲ್ಲ, ಬದಲಿಗೆ ಸರ್ಕಾರದ ನೈತಿಕ ಹೊಣೆಗಾರಿಕೆ ಮುಖ್ಯ ಎಂದು ಹೇಳುವ ಮೂಲಕ ರೆಡ್ಡಿ ಅವರು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಜನಾರ್ದನ ರೆಡ್ಡಿ ಹೇಳಿದ್ದೇನು?

"ಕಾಂಗ್ರೆಸ್‌ ಶಾಸಕನೇ ಕೊಲೆ ಮಾಡಿಸಿದ್ದೆಂದು ನಿಮಗೆ ಈಗಾಗಲೇ ಗೊತ್ತಾಗಿದೆ. ಇದರಿಂದ ನಿಮ್ಮ ಪಕ್ಷಕ್ಕೆ ಈಗಾಗಲೇ ಮುಜುಗರವಾಗಿದೆ. ಕೇವಲ ಮೂವರು ಖಾಸಗಿ ಗನ್‍ಮೆನ್‍ಗಳನ್ನು ಬಂಧಿಸಿ, ಸಿಐಡಿಗೆ ಕೊಡುವ ಮೂಲಕ ಇದನ್ನು ಜನರು ಮರೆಯುವಂತೆ ಮಾಡಬೇಕು. ಶಾಸಕರ ಬಂಧನ ಮಾಡಬಾರದೆಂಬ ನಿಮ್ಮ ಕೆಟ್ಟ ಯೋಚನೆ ಇದರಿಂದ ಬಹಿರಂಗ ಆಗುತ್ತಿದೆ. ಏಳು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ ಎಂದು ಎದೆ ತಟ್ಟಿಕೊಳ್ಳುವ ಸಿದ್ದರಾಮಯ್ಯನವರು, ಈ ಪ್ರಕರಣವನ್ನೂ ಸಿಬಿಐಗೆ ಕೊಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂದು ರಾಜ್ಯದ ಜನರಿಗೆ ತಿಳಿಸಬೇಕು" ಎಂದು ಆಗ್ರಹಿಸಿದರು.

ಬಳ್ಳಾರಿಯಿಂದ ಪಾದಯಾತ್ರೆ

ವಾಲ್ಮೀಕಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಒಬ್ಬ ಅಮಾಯಕ ಪ್ರಾಣ ಕಳೆದುಕೊಂಡ. ಅದೇ ವಾಲ್ಮೀಕಿ ಬ್ಯಾನರ್ ಹೆಸರಿನಲ್ಲಿ ಜನಾರ್ದನ ರೆಡ್ಡಿ ಕೊಲೆ ಪ್ರಯತ್ನ ಮಾಡುತ್ತೀರಿ. ಬ್ಯಾನರ್ ಹೆಸರಿನಲ್ಲಿ ರಾತ್ರಿ 9 ಗಂಟೆಗೆ ಒಬ್ಬ ಶಾಸಕ ಐದಾರು ಸಾವಿರ ಜನರನ್ನು ಕರೆದುಕೊಂಡು ಬಂದು ಮನೆ ಮೇಲೆ ಫೈರಿಂಗ್ ಮಾಡಿ, ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದಾರೆ. ಅವರ ಕಾರ್ಯಕರ್ತನನ್ನೇ ಅವರ ಖಾಸಗಿ ಗನ್‍ಮೆನ್‍ಗಳು ಹತ್ಯೆಮಾಡಿದ್ದಾರೆ. ಅದನ್ನು ನಮ್ಮ ಮೇಲೆ ಹಾಕಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ವಾಲ್ಮೀಕಿ ಹೆಸರಿನಲ್ಲಿ ಇನ್ನೆಷ್ಟು ಅಮಾಯಕರ ಪ್ರಾಣ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತೀರಿ? ಅನ್ನುವ ವಿಚಾರದಲ್ಲಿ ಶ್ರೀರಾಮುಲು ಅವರು ಆ ಜನಾಂಗದ ಒಬ್ಬ ದೊಡ್ಡ ನಾಯಕನಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಬಯಕೆ ಅವರಲ್ಲಿದೆ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ

ಹೊಟ್ಟೆ ಕಿಚ್ಚಿನಿಂದ ಪಾದಯಾತ್ರೆ ಮಾಡಬೇಕೆಂಬ ಯೋಚನೆ ಯಾವತ್ತೂ ಇರಲಿಲ್ಲ. ಸಾಕ್ಷಾತ್ ರಾಮಾಯಣವನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಹೆಸರು ಹೇಳಿಕೊಂಡು ಆ ಜನಾಂಗಕ್ಕೆ ನೀವು ಮಾಡಿದ್ದು ಏನೂ ಇಲ್ಲ. ಆದರೆ, ವಾಲ್ಮೀಕಿ ಹೆಸರಿನಲ್ಲಿ ಇನ್ನೆಷ್ಟು ಮಂದಿ ಕೊಲೆ ಮಾಡುತ್ತೀರಿ? ಇನ್ನೆಷ್ಟು ಪ್ರಾಣ ತೆಗೆಯುತ್ತೀರಿ ಎಂದು ಕೇಳುವ ಉದ್ದೇಶದಂದ ಶ್ರೀರಾಮುಲು ಅವರು ಪಾದಯಾತ್ರೆ ಮಾಡುವ ತೀರ್ಮಾನ ಮಾಡಿದ್ದರು. ಅದನ್ನು ಪಕ್ಷದ ಗಮನಕ್ಕೂ ತರಲಾಗಿತ್ತು ಎಂದರು.

Read More
Next Story