Mine is the one that helps people, yours is the one that loots: HDK Tong to Congress!
x

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ

ನನ್ನದು ಜನರಿಗೆ ಸಹಾಯ ಮಾಡುವ ಚಪಲ, ನಿಮ್ಮದು ಲೂಟಿ ಮಾಡುವ ಚಪಲ: ಕಾಂಗ್ರೆಸ್‌ಗೆ ಎಚ್‌ಡಿಕೆ ಟಾಂಗ್!

ಕಷ್ಟ ಬಂದಾಗ ಜಾತಿ ಎನ್ನುತ್ತಾರೆ. ಆದರೆ ಅವರು ಪ್ರತಿನಿಧಿಸುವ ಜಾತಿಗೆ ಏನಾದರೂ ಮಾಡಿದ್ದಾರ ? ದಿನಪೂರ್ತಿ ಹಣ ಹೊಡೆಯಬೇಕು ಎಂದು ಬಯಸುತ್ತಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ ವಿರುದ್ದ ಕೇಂದ್ರ ಸಚಿವ ಎಚ್‌ಡಿಕೆ ವಾಗ್ದಾಳಿ ನಡೆಸಿದರು.


Click the Play button to hear this message in audio format

ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ಶುಕ್ರವಾರ(ಜ.16) ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇತ್ತೀಚೆಗೆ ಕಾಂಗ್ರೆಸ್‌ನ ಮುಖಂಡರೊಬ್ಬರು ಹೇಳಿದ ಮಾತಿ ಪ್ರತಿಕ್ರಿಯಿಸಿ, ನಿಮ್ಮದೊಂದು ರೀತಿ‌ ಚಪಲ, ನನ್ನದೊಂದು ರೀತಿ ಚಪಲ. ನಿಮ್ಮದು ಹಣ ಮಾಡುವ ಚಪಲ. ನನ್ನದು ಜನರಿಗೆ ಸ್ಪಂದಿಸಿ ಅವರ ಬೆಂಬಲ ಪಡೆಯುವ ಚಪಲ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಟಾಂಗ್ ಕೊಟ್ಟರು.

ಸ್ವಜಾತಿಯವರಿಂದಲೇ‌ ಅನ್ಯಾಯವಾಗುತ್ತಿದೆ ಎಂಬ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕಷ್ಟ ಬಂದಾಗ ಜಾತಿ ಎನ್ನುತ್ತಾರೆ. ಆದರೆ ಅವರು ಪ್ರತಿನಿಧಿಸುವ ಜಾತಿಗೆ ಏನಾದರೂ ಮಾಡಿದ್ದಾರ ? ದಿನಪೂರ್ತಿ ಹಣ ಹೊಡೆಯಬೇಕು ಎಂದು ಬಯಸುತ್ತಾರೆ. ಜನರ ಬೆಂಬಲ ಯಾವ ರೀತಿ ಪಡೆಯಬೇಕು ಎನ್ನುವುದಕ್ಕಿಂತ ಕ್ಷಣ ಕ್ಷಣವೂ ರಾಜ್ಯದ ಲೂಟಿ ಮಾಡಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಜಾತಿ ಹೆಸರಿನಲ್ಲಿ ಬೆಂಬಲ ಕೊಡ್ತಾರಾ? ಎಂದು ಟೀಕಿಸಿದರು.

ನಾನು ಬಾಯಿ ಚಪಲಕ್ಕೆ ಮಾತನಾಡುವುದಿಲ್ಲ. ಇವರು ನಡೆಸುವ ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಕೊಡುತ್ತಿದ್ದೇನೆ ಅಷ್ಟೇ. ನಾನು ಮಾತನಾಡುವುದು ನನ್ನ ಮತ್ತು ಜನತೆಯ ಸಂಬಂಧ ಬೆಳೆಸಿಕೊಳ್ಳಲು. ಈ ಅಣ್ಣ ತಮ್ಮಂದಿರನ್ನು ಕಟ್ಟಿಕೊಂಡು ನನಗೇನಾಗಬೇಕು? ದಿನ ಬೆಳಗಾದರೆ ಯಾರ ತಲೆ ಒಡೆಯಬೇಕು? ಯಾರ ಜಮೀನಿಗೆ ಬೇಲಿ ಹಾಕಬೇಕು? ಯಾವ ರೀತಿ ಅಕ್ರಮವಾಗಿ ಸಂಪಾದನೆ ಮಾಡಬೇಕು ಎನ್ನುವವರಿಗೆ ಜಾತಿ ಹೆಸರು ಹೇಳಿದಾಕ್ಷಣ ಬೆಂಬಲ ಕೊಡುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಿಯಾಂಕ್‌ಗೆ ತಿರುಗೇಟು

ಜೆಡಿಎಸ್ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, "ನಮ್ಮ ಪಕ್ಷದ್ದು ಹಾಗಿರಲಿ. ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷವು ಬಿಹಾರ, ಮಹಾರಾಷ್ಟ್ರದಲ್ಲಿ ಯಾವ ಹಂತಕ್ಕೆ ಬಂದಿದೆ ಎಂಬುದನ್ನು ಮೊದಲು ನೋಡಿಕೊಳ್ಳಿ" ಎಂದು ತಿರುಗೇಟು ಕೊಟ್ಟರು.

ಸಿಎಂ ಸೇರಿದಂತೆ ಹಲವು ಸಚಿವರ ಮೂಲ ಯಾವುದು ?

ಜೆಡಿಎಸ್ ಬಗ್ಗೆ ಚರ್ಚೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಯಾರು? ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಮಂತ್ರಿಗಳು ಎಷ್ಟು ಜನ ಜೆಡಿಎಸ್‌ನಿಂದ ಗುತ್ತಿಗೆ ಮೇಲೆ ಹೋಗಿದ್ದಾರೆ ಎನ್ನುವುದನ್ನು ಮೊದಲು ಅವರಪ್ಪನನ್ನು ಕೇಳಿ ತಿಳಿದುಕೊಳ್ಳಲಿ. ಮುಖ್ಯಮಂತ್ರಿಗಳಾದಿಯಾಗಿ ಎಷ್ಟು ಜನ ಮಂತ್ರಿಗಳು ಜೆಡಿಎಸ್ ಮೂಲದವರು ಎಂದು ಗೊತ್ತಿದೆಯಾ? ಎಂದು ಕಿಡಿಕಾರಿದರು.

ಪಕ್ಷದ ಬಗ್ಗೆ ಚಿಂತಿಸಿ

ಮಿಸ್ಟರ್ ಖರ್ಗೆ ಅವರೇ, ಮೊದಲು ನಿಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳಿ. ನಿಮ್ಮ ಪಕ್ಷದಲ್ಲಿ ಸದ್ಯಕ್ಕೆ ಒಬ್ಬರ 'ಗುತ್ತಿಗೆ ಅವಧಿ ಮುಗಿದಿದೆ. ನನ್ನನ್ನು ಗುತ್ತಿಗೆ ಮೇಲೆ ಮುಖ್ಯಮಂತ್ರಿ ಮಾಡಿ' ಎಂದು ಇನ್ನೊಬ್ಬರು ಟವೆಲ್ ಹಾಕಿದ್ದಾರೆ. ಅವರು ನೋಡಿದರೆ ನನ್ನ ಅವಧಿ ಇನ್ನೂ ಮುಗಿದಿಲ್ಲ. ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಹೇಳುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಹಣೆಬರಹ ನೋಡಿಕೊಳ್ಳಿ. ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದರು.

ಕಲಬುರಗಿಗೆ ಕೊಡೆಗೆ ಏನು ?

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದೆ. ಕಾಂಗ್ರೆಸ್ ಎಷ್ಟು ಕಡೆ ಗೆದ್ದಿದೆ. ದುರಾಹಂಕಾರ ಬೆಳೆಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಪಕ್ಷದ ರಾಜ್ಯದ ಫಲಿತಾಂಶವೇ ಸಾಕ್ಷಿ. ಇಂಥ ವಿಷಯಗಳ ಬಗ್ಗೆ ಮಾತಾಡುವುದು ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ. ನಿಮ್ಮ ಹಾಗೂ ನಿಮ್ಮ ತಂದೆಯವರು ಪ್ರತಿನಿಧಿಸಿರುವ ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಹೇಳಿ. ಮೈಸೂರು, ಕನಕಪುರ ಮತ್ತು ರಾಮನಗರದಲ್ಲಿ ಆಗಿರುವ ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯೇ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 40 ವರ್ಷಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿದ್ದಾರೆ. ನೀವು ಕಳೆದ 9 ವರ್ಷದಿಂದ ಮಂತ್ರಿ ಆಗಿದ್ದೀರಿ. ಏನು ಸಾಧನೆ ನಿಮ್ಮದು? ಪಟ್ಟಿ ಕೊಡಿ ನೋಡೋಣ ಎಂದು ಆಗ್ರಹಿಸಿದರು.

ಜೆಡಿಎಸ್‌- ಬಿಜೆಪಿ ಮೈತ್ರಿ ಕಾರಣಕ್ಕೆ ನಿಮಗೆ ನಿದ್ದೆ ಬರುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯಿಂದ ನಿಮ್ಮ ಹಣೆಬರಹ 9 ಸೀಟುಗಳಿಗೆ ಬಂದಿದೆ. ನಮ್ಮ ಕೆಲ ದೋಷಗಳಿಂದ ನೀವು 9 ಸೀಟು ಗೆದ್ದಿದ್ದೀರಿ. ಇಲ್ಲದಿದ್ದರೆ ರಾಜ್ಯದಲ್ಲಿ ಅಧಿಕಾರ ಇದ್ದರೂ ಕಾಂಗ್ರೆಸ್‌ 3 ಅಥವಾ 4 ಸೀಟುಗಳಿಗೆ ಇಳಿಯುತ್ತಿತ್ತು. ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಥವಾ ಕಾಂಗ್ರೆಸ್ ಪಕ್ಷ ನಾಶ ಆಗುತ್ತಿದೆಯೋ ಹೇಳುವಿರಾ ಎಂದು ಪ್ರಶ್ನಿಸಿದರು.

Read More
Next Story