
ಜೆಡಿಎಸ್ ಸಮಾವೇಶ: ಕುಟುಂಬದ ಪರ ದೇವೇಗೌಡರ ವಕಾಲತ್ತು; ಹಾಸನ ಪಾರುಪತ್ಯಕ್ಕೆ ಒತ್ತು
ದೇವೇಗೌಡರದು ಇಳಿವಯಸ್ಸಿನಲ್ಲೂ ಕುಂದದ ರಾಜಕೀಯ ಹುಮ್ಮಸ್ಸು. ತವರು ಜಿಲ್ಲೆ ಹಾಸನದಲ್ಲಿ ಮತ್ತೆ ತಮ್ಮ ಪಕ್ಷದ ಬಾವುಟ ಹಾರಿಸಲು ಪ್ರಯತ್ನ... ಇವು ಹಾಸನ ಸಮಾವೇಶದಲ್ಲಿ ಕಂಡ ದೃಶ್ಯ.
ತೊಂಬತ್ತರ ಹರೆಯದಲ್ಲೂ ಕುಂದದ ರಾಜಕೀಯ ಹುಮ್ಮಸ್ಸು. ತಮ್ಮ ತವರು ಜಿಲ್ಲೆ ಹಾಗೂ ಜೆಡಿಎಸ್ ಪಕ್ಷದ ಭದ್ರನೆಲೆ ಹಾಸನದಲ್ಲಿ ಹಾರುತ್ತಿರುವ ಕಾಂಗ್ರೆಸ್ ಬಾವುಟವನ್ನು ಕಿತ್ತು ತಮ್ಮ ಪಕ್ಷದ ಬಾವುಟ ಹಾರಿಸಲು ಪ್ರಯತ್ನ.. ಹಾಸನ ಜಿಲ್ಲೆಯಲ್ಲಿ ತಮ್ಮ ಕುಟುಂಬದ ಪಾರಮ್ಯವನ್ನು ಮತ್ತೆ ಮೆರೆಯಬೇಕೆಂಬ ಹುಮ್ಮಸ್ಸು...
ಇದು ಶನಿವಾರ ಹಾಸನದಲ್ಲಿ ಕಂಡುಬಂದ ದೃಶ್ಯ! ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ಪರಮೋಚ್ಚ ನಾಯಕ ಎಚ್.ಡಿ. ದೇವೇಗೌಡರ ಕುಗ್ಗದ ಉತ್ಸಾಹ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಂಡುಬಂತು. ತಮ್ಮ ಮಕ್ಕಳಾದ ಎಚ್.ಡಿ. ರೇವಣ್ಣ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಜತೆ ಸಮಾವೇಶದ ವೇದಿಕೆ ಹಂಚಿಕೊಂಡ ದೇವೇಗೌಡರು ಹಾಸನವನ್ನು ಮತ್ತೆ ತಮ್ಮ ಪಾರಮ್ಯಕ್ಕೆ ಪಡೆಯುವ ಪ್ರತಿಜ್ಞೆ ಮಾಡಿದರು.
"ಈ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋಕೆ ಪ್ರಯತ್ನ ಪಟ್ಟರು, ರಾಜ್ಯದ ಆಡಳಿತ ನಡೆಸೋರಿಗೆ ನಿಮ್ಮ ಆಟ ನಡೆಯಲ್ಲ ಅಂತ ತೋರಿಸಿದ್ದಾರೆ. ಕಾಲ ಬರುತ್ತೆ, ಕಾಲ ಬರುತ್ತೆ ಸ್ವಲ್ಪ ಕಾಯಿರಿ," ಎಂದು ಕಾರ್ಯಕರ್ತರನ್ನು ದೇವೇಗೌಡರು ಹುರಿದುಂಬಿಸಿದರು.
ದೇವೇಗೌಡರ ಈ ಮಾತುಗಳು ಹಾಸನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೇಳಿಬಂದವು.
ರೇವಣ್ಣ ಕುಟುಂಬ ಮುಗಿಸಿದವರಿಗೆ ಉಡುಗೊರೆ ಕೊಟ್ಟಿದ್ದಾರೆ
ತಮ್ಮ ಪುತ್ರ ಎಚ್.ಡಿ. ರೇವಣ್ಣ ಅವರ ಬಗ್ಗೆ ಒತ್ತುಕೊಟ್ಟು ಮಾತನಾಡಿದ ದೇವೇಗೌಡರು, " ರೇವಣ್ಣ ಅವರ ಕೇಸ್ ತನಿಖಾ ತಂಡಕ್ಕೆ ಸರ್ಕಾರ ಬಹುಮಾನ ಘೋಷಿಸಿದೆ. ಈ ಜಿಲ್ಲೆಗೆ ರೇವಣ್ಣ ಹಗಲು ರಾತ್ರಿ ಶ್ರಮಿಸಿ ಅಭಿವೃದ್ಧಿ ಮಾಡಿದ್ದಾರೆ, ರೇವಣ್ಣನನ್ನು ತುಳಿಬೇಕು ಅಂತ ಏನೆಲ್ಲ ಮಾಡಿದ್ದಾರೆ? ಪೊಲೀಸರು ಬಂದು ರೇವಣ್ಣನನ್ನು ಅರೆಸ್ಟ್ ಮಾಡಿದ್ದೇವೆ ಬನ್ನಿ ಅಂದಿದ್ದರು, ಅಂದು ಅರೆಸ್ಟ್ ಮಾಡಿದ ಅಧಿಕಾರಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ. ರೇವಣ್ಣ ಕುಟುಂಬ ಮುಗಿಸಿದ್ದೇವೆ ಅಂತ ಎಸ್ಐಟಿ ಅಧಿಕಾರಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪ್ರಬಲವಾದಂತಹ ಪಕ್ಷ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಅಭಿವೃದ್ಧಿಗಾಗಿ ಶ್ರಮವಿಸುತ್ತಿದ್ದಾರೆ. ಅಂತಹ ಒಬ್ಬ ನನ್ನ ಮಗನನ್ನ ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಎರಡನೇ ಮಗಳು ಶೈಲಜಾ ಮನೆಯಲ್ಲಿ ರೇವಣ್ಣ ಬಂದಾಗ, ಎಸ್ಐಟಿಯವರು ಬಂದು ಅವರನ್ನು ಬಂಧನ ಮಾಡುತ್ತಾರೆ. ರೇವಣ್ಣನವರನ್ನು ಮತ್ತು ಅವರ ಕುಟುಂಬವನ್ನು ಮುಗಿಸಲೇಬೇಕು ಎಂದು ಎಸ್ಐಟಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲವರು ಉಡುಗೊರೆ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋಕೆ ಪ್ರಯತ್ನ ಪಟ್ಟರು
"ನಾನು ಹಿಂದೆ ಇಲ್ಲೇ ಸೋತಿದ್ದೇನೆ, ಯಾವ ದೇವೇಗೌಡರನ್ನು ಸೋಲಿಸಿದರು, ಅದೇ ಜನ 1991ರಲ್ಲಿ ಗೆಲ್ಲಿಸಿದರು, ನನ್ನ ತುಳಿಬೇಕು ಅಂತ ಪ್ರಯತ್ನ ಮಾಡಿದರು, ಕೇಸ್ಗಳನ್ನು ಹಾಕಿದರು, ಅಂತವರ ಮುಂದೆ ನಾನು ಗೆದ್ದು ತೋರಿಸಿದೆ, ಕುಮಾರಸ್ವಾಮಿ ದುಡ್ಡು ಕೊಟ್ಟು ಜಮೀನು ತಗೊಂಡ್ರೆ ಅದಕ್ಕೂ ಕೇಸ್ ಹಾಕೋದು, ಇದೆಲ್ಲ ಮಾಡಿದ್ದಾರೆ," ಎಂದು ಕಾಂಗ್ರೆಸ್ ವಿರುದ್ಧ ಅರೋಪಿಸಿದರು.
ಕಾಲ ಬರುತ್ತೆ, ಸ್ವಲ್ಪ ಕಾಯಿರಿ
ಮುಂದುವರಿದು ಮಾತನಾಡಿದ ಹೆಚ್ಡಿಡಿ, ಈ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋಕೆ ಪ್ರಯತ್ನ ಪಟ್ಟರು, ರಾಜ್ಯದ ಆಡಳಿತ ನಡೆಸೋರಿಗೆ ನಿಮ್ಮ ಆಟ ನಡೆಯಲ್ಲ ಅಂತ ತೋರಿಸಿದ್ದಾರೆ. ಕಾಲ ಬರುತ್ತೆ, ಕಾಲ ಬರುತ್ತೆ ಸ್ವಲ್ಪ ಕಾಯಿರಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಹಾಸನ ಜೆಡಿಎಸ್ ರ್ಯಾಲಿಯಲ್ಲಿ ಆ ಪಕ್ಷದ ಕಾರ್ಯಕರ್ತರು
"ನನ್ನನ್ನ ಈ ಜಿಲ್ಲೆಯಲ್ಲಿ ಒಮ್ಮೆ ಸೋಲಿಸಿದ್ದರು. ಒಂದು ಸಿನಿಮಾ ಥಿಯೇಟರ್ ನಿರ್ಮಾಣ ಮಾಡಿದೆ ಎಂಬ ಕಾರಣಕ್ಕೆ ನನ್ನನ್ನು ಸೋಲಿಸಿದರು. ಬಳಿಕ 1991ರಲ್ಲಿ ಅದೇ ಜನ ನನ್ನನ್ನ ಗೆಲ್ಲಿಸಿದ್ದರು. ಅವರಿಗೆ ನಾನು ಕೈಮುಗಿದು ನಮಿಸುತ್ತೇನೆ," ಎಂದ ಗೌಡರು, "ಕುಮಾರಸ್ವಾಮಿ ಅವರು 25 ವರ್ಷಗಳ ಹಿಂದೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ದರು, ಆದರೆ ಈ ಸರ್ಕಾರ ಅದು ಗೋಮಾಳ ಅಂತ ಅವರ ಮೇಲೆ ಆರೋಪ ಮಾಡಿ, ತನಿಖೆ ಮಾಡುತ್ತಾರೆ," ಎಂದು ವಾಗ್ದಾಳಿ ಮಾಡಿದರು.
"ಇನ್ನು ಹಾಸನ ಜಿಲ್ಲೆಯಲ್ಲಿರುವ ಕೆಲವು ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಹಿಡಿತದಲ್ಲಿದ್ದರೂ ಕೂಡ ಎಲ್ಲಾ ಜನಾಂಗದವರಿಗೂ ಅಧಿಕಾರವನ್ನು ನೀಡಿದೆ. ಕಾರಣ ಜೆಡಿಎಸ್ ಕೇವಲ ನನ್ನ ಪಕ್ಷ ಅಲ್ಲ ಇದು ಜನರ ಪಕ್ಷ. ಇವತ್ತು ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಒಂದು ಸಂದೇಶ ನೀಡುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಆಟ ನಡೆಯುವುದಿಲ್ಲ ನಾವಿನ್ನು ಬದುಕಿದ್ದೇವೆ," ಎಂದು ಹೇಳಿದರು.
ಬಿಜೆಪಿಯನ್ನು ಹಾಡಿ ಹೊಗಳಿದ ಗೌಡರು
"ಹಾಸನ ಜಿಲ್ಲೆಗೆ ಕುಮಾರಸ್ವಾಮಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೀಡಿದ್ದಾರೆ. ಹಾಸನಕ್ಕೆ ವಿಮಾನ ನಿಲ್ದಾಣ ಶಂಕು ಸ್ಥಾಪನೆ ಆಯಿತು ಇವತ್ತಿನ ಪರಿಸ್ಥಿತಿ ಏನಾಗಿದೆ. ಐಐಟಿ ತರಬೇಕೆಂದು ಜಮೀನನ್ನ ಮೀಸಲಿಟ್ಟಿದ್ದೇವೆ ಆದರೆ ಅದರ ಪರಿಸ್ಥಿತಿ ಏನಾಗಿದೆ. ಎಲ್ಲಾ ಅಭಿವೃದ್ಧಿಯನ್ನು ಈ ಸರ್ಕಾರ ಕುಂಠಿತ ಮಾಡಿದೆ. ಅವತ್ತು ಬಿಜೆಪಿ ಜೊತೆ ಹೋದಾಗ ನಮ್ಮನ್ನ ಭೇಟಿಗೆಂದು ಕರೆದರು. ಇವತ್ತು ಬಿಜೆಪಿ ನನಗೆ ಅಧಿಕಾರ ಕೊಡುವ ಜೊತೆಗೆ ನಮ್ಮನ್ನು ಗೌರವಹಿತವಾಗಿ ನಡೆಸಿಕೊಂಡಿದೆ," ಇಂದು ಮೋದಿ ಸರ್ಕಾರವನ್ನು ಹಾಡಿ ಹೊಗಳಿದರು.
ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ
"ನಮ್ಮ ಪಕ್ಷ ಕೇವಲ ಒಂದೇ ಜನಾಂಗವನ್ನು ಒಲಿಸಿಲ್ಲ ಪ್ರತಿ ಸಮಾಜಕ್ಕೂ ಅಧಿಕಾರವನ್ನ ಹಂಚಿಕೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದೇವೆ. ಒಳ ಮೀಸಲಾತಿಯನ್ನು ಹೇಗೆ ವಿಂಗಡನೆ ಮಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇನ್ನು ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ದಲಿತರಿಗೆ 23% ಮೀಸಲಾತಿಯನ್ನು ನೀಡಬೇಕು ಎಂದು ಧ್ವನಿ ಎತ್ತಿದ್ದು ನಾನು. ಈಗಾಗಲೇ ಕಾಂಗ್ರೆಸ್ ಪಕ್ಷ ಹಾಸನ ಜಿಲ್ಲೆಯಲ್ಲಿ ಎರಡು ಸಮಾವೇಶವನ್ನು ನಡೆಸಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸಲೇಬೇಕು ಎಂದು ಕರೆ ಕೊಟ್ಟಿದ್ದಾರೆ. ಆದರೆ ಇಂದಿನ ಸಮಾವೇಶದ ಮೂಲಕ ಆ ಎರಡು ಸಮಾವೇಶಕ್ಕೂ ನೀವುಗಳು ಉತ್ತರ ಕೊಟ್ಟಿದ್ದೀರಿ," ಎಂದು ಕಾರ್ಯಕರ್ತರನ್ನು ಶ್ಲಾಘಿಸಿದರು.
"ಇನ್ನು ಮುಂದಿನ ದಿನಗಳಲ್ಲಿ ರಾಜ್ಯದ ಬಿಜೆಪಿ 18 ಎಂಪಿ ಗಳನ್ನ ಒಂದೇ ವೇದಿಕೆಯಲ್ಲಿ ಕೂರಿಸಿ, ಹಾಸನ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಮತ್ತು ಐಐಟಿ ಯೋಜನೆಗಳನ್ನ ಮತ್ತೆ ಪುನರ್ಜರಿ ಮಾಡುವ ಯೋಜನೆಯನ್ನು ಸಂಕಲ್ಪವನ್ನು ಮಾಡಿದ್ದೇನೆ ಶೀಘ್ರದಲ್ಲಿ ಅದನ್ನ ಮಾಡುತ್ತೇನೆ," ಎಂದು ಕಾಂಗ್ರೆಸ್ ಪಕ್ಷಕ್ಕೆ ಸಂದೇಶ ರವಾನಿಸಿದರು.

