Raj Bhavan Chalo tomorrow for the survival of MNREGA: DK Shivakumar thunders against the Center
x

ಡಿಸಿಎಂ ಡಿ.ಕೆ. ಶಿವಕುಮಾರ್‌

ನಾಳೆ 'ರಾಜಭವನ ಚಲೋ': ಕೇಂದ್ರದ ವಿರುದ್ಧ ಡಿ.ಕೆ. ಶಿವಕುಮಾರ್ ಗುಡುಗು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ ಜಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶಾದ್ಯಂತ ಹೋರಾಟ ನಡೆಯಲಿದೆ.


Click the Play button to hear this message in audio format

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ಕೇಂದ್ರದ ವಿರುದ್ಧ ಬೃಹತ್ ಹೋರಾಟಕ್ಕೆ ನಾಂದಿ ಹಾಡಿದೆ. ಈ ಕುರಿತು ಕೆಪಿಸಿಸಿ ಕಚೇರಿ ಬಳಿ ಮಾಹಿತಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಡವರ ಸಾಂವಿಧಾನಿಕ ಹಕ್ಕನ್ನು ರಕ್ಷಿಸಲು ಜನವರಿ 27ರ ಮಂಗಳವಾರದಂದು 'ರಾಜಭವನ ಚಲೋ' ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.

ಮನರೇಗಾ ಉಳಿಸುವ ಸಲುವಾಗಿ ಮಂಗಳವಾರ(ಜ.27) ರಾಜಭವನ ಚಲೋ ನಡೆಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದು, ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿ ಬಳಿ ಸೋಮವಾರ(ಜ.26) ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, "20 ವರ್ಷಗಳ ಹಿಂದೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ ನಾಯಕತ್ವದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಜಾರಿಗೆ ತಂದಿದ್ದ, ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ನಮಗೆಲ್ಲಾ ಆಶ್ಚರ್ಯ ಉಂಟು ಮಾಡಿದೆ. ಮಹಾತ್ಮಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದ ಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾಗಿದೆ" ಎಂದರು.

ವಿಧಾನಸಭೆಯಲ್ಲಿ ನಿರ್ಣಯಕ್ಕೆ ತೀರ್ಮಾನ

"ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಮನರೇಗಾ ಯೋಜನೆಯಡಿ ನಡೆಯುತ್ತಿದ್ದವು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ವಿಧಾನಸಭೆಯಲ್ಲೂ ಇದರ ಬಗ್ಗೆ ಪ್ರತಿಭಟನೆ ಹಾಗೂ ನಿರ್ಣಯ ತೆಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ" ಎಂದು ಹೇಳಿದರು.

ವಿಬಿ ಜಿ ರಾಮ್‌ ಜಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ

ಮನರೇಗಾ ಮರು ಸ್ಥಾಪಿಸುವವರೆಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು, ಕೃಷಿ ಕರಾಳ ಕಾಯ್ದೆ ಹಿಂಪಡೆದಂತೆ ಕೇಂದ್ರದ ನೂತನ ʼವಿಬಿ ಜಿ ರಾಮ್‌ ಜಿʼ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ ಮಾಡಲಾಗುವುದು ಎಂದರು.

ನೂತನ ಕಾಯ್ದೆ ಅನುಷ್ಠಾನ ಅಸಾಧ್ಯ

ಜೆಡಿಎಸ್ ಮನರೇಗಾ ಬದಲಾವಣೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಹ ಬಾಯಿ ಬಿಡುತ್ತಿಲ್ಲ. ಹೊಸ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನಪ್ರತಿನಿಧಿಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಇದರ ಅನುಷ್ಠಾನ ಅಸಾಧ್ಯ. ಈ ಯೋಜನೆಗೆ ಅನುದಾನ ಒಗಗಿಸಿ ಕೊಡುವವರು ಯಾರು? ಕೇಂದ್ರವೇ ಅನುದಾನ ಒದಗಿಸಿಕೊಡಲಿ. ಕೆಲವು ನಾಯಕರು ಚರ್ಚೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ನಾವು ಸದನದಲ್ಲಿ ಅವರ ಚರ್ಚೆಗೆ ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ದೇಶದ ಹಿತಕ್ಕೆ ರಾಜಕಾರಣ, ಕುಟುಂಬಕ್ಕಲ್ಲ

ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, "ನಾವು ಸೇವೆ ಮಾಡುತ್ತಿರುವುದು ನಾಡಿನ ಜನತೆಗಾಗಿ. ಕುಟುಂಬಕ್ಕಾಗಿಯಲ್ಲ. ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನತೆಯ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ" ಎಂದರು‌.

ಎಲ್ಲರಿಗೂ ಒಂದೇ ಕಾನೂನು

ಹಾಸನ ಜಿಡಿಎಸ್ ಸಮಾವೇಶದ ಉದ್ದಕ್ಕೂ ರಾಜ್ಯ ಸರ್ಕಾರವನ್ನು ನೆನಪಿಸಿಕೊಂಡಿದ್ದರ ಬಗ್ಗೆ ಮಾತನಾಡಿ, "ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ, ಜೀವ ಹಾಗೂ ಧೈರ್ಯ ಬರುವುದಿಲ್ಲ. ಅದಕ್ಕೆ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಈ ದೇಶದಲ್ಲಿ ಏನೇನು ಕಾನೂನು ಇದೆಯೋ ಅದೆಲ್ಲವೂ ಎಲ್ಲರಿಗೂ ಒಂದೇ ಎಂದು ಹೇಳಿದರು.

"ದೇಶದ ಹಾಗೂ ನಾಡಿನ ಸಮಸ್ತ ಜನತೆಗೆ 77 ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಅವರು, ಈ ದೇಶದ ಸಂವಿಧಾನವನ್ನು ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವಂತೆ ಮಾಡಲಾಗಿದೆ. ಈ ಮೂಲಕ ಹೊಸ ಪೀಳಿಗೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಸಂವಿಧಾನದ ರಕ್ಷಣೆಗೆ ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಬದ್ದವಾಗಿ ಕೆಲಸ ಮಾಡುತ್ತಿದೆ" ಎಂದರು.

Read More
Next Story