
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಸಚಿವರ ವಜಾಕ್ಕೆ ಸಿ.ಟಿ. ರವಿ ಆಗ್ರಹ
ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಹತ್ತು ವರ್ಷಕ್ಕೆ 81,791 ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆತಿತ್ತು. ಇದೀಗ ಪ್ರಧಾನಿ ಮೋದಿಯವರ ಕಾಲದಲ್ಲಿ ಹತ್ತು ವರ್ಷಕ್ಕೆ 3,21,974 ಕೋಟಿ ರೂ. ಅನುದಾನ ದೊರೆತಿದೆ ಎಂದು ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ವಿಚಾರ ಬಹಿರಂಗವಾದಾಗಲೇ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ವಜಾ ಮಾಡಬೇಕಿತ್ತು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಬುಧವಾರ(ಜ.21) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಸಿಎಂ ಕೂಡಾ ಇನ್ನೆಷ್ಟು ದಿನ ಇರುತ್ತೇನೊ ಎಂದು ಚೀಲ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗುರವಾರದಿಂದ ಆರಂಭವಾಗುವ ಜಂಟಿ ಅಧಿವೇಶನದಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ನಾವೂ ಚರ್ಚೆ ಮಾಡುತ್ತೇವೆ. ವಿಪಕ್ಷಗಳು ಗಾಂಧಿ ಹೆಸರು ತೆಗೆದಿದ್ದಕ್ಕೆ ತಗಾದೆ ತೆಗೆಯುತ್ತಿದ್ದಾರೆ. ಯೋಜನೆಗೆ ರಾಮನ ಹೆಸರು ಇಡಲಾಗಿದ್ದು, ಗಾಂಧೀಜಿಗೆ ರಾಮನೇ ಪ್ರೇರಣೆ ಎಂದರು.
ಸರ್ಕಾರದ ವಿರುದ್ಧ ಜನಾಭಿಪ್ರಾಯ
ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದುತ್ತಾರೆ. ಆದರೆ ಈ ಸರ್ಕಾರಕ್ಕೆ ನೈತಿಕತೆಯಿಲ್ಲ. ಜನರ ವಿಶ್ವಾಸ ಕಳೆದುಕೊಂಡಿದೆ. ಎಡಪಂಥೀಯರ ಚಾಳಿ ಸಿಎಂ ಸಿದ್ದರಾಮಯ್ಯನವರಿಗೂ ಬಂದಿದೆ. ಸರ್ಕಾರ ರಾಜ್ಯಪಾಲರಿಂದ ಏನೇ ಹೇಳಿಸಬಹುದು, ಆದರೆ ಸರ್ಕಾರದ ವಿರುದ್ಧ ಜನಾಭಿಪ್ರಾಯವಿದೆ. ಆ ಜನಾಭಿಪ್ರಾಯವನ್ನು ಈ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ. ಸರ್ಕಾರ ಜನರ ವಿಶ್ವಾಸ ಗೆಲ್ಲುವ ಯಾವ ಕೆಲಸವನ್ನೂ ಕಳೆದ ಎರಡೂವರೆ ವರ್ಷದಲ್ಲಿ ಮಾಡಿಲ್ಲ ಎಂದು ತಿಳಿಸಿದರು.
ಉಡುಪಿ ಡಿಸಿ ನೆಡೆಗೆ ಸಮರ್ಥನೆ
ಭಗವಾಧ್ವಜ ಹಿಡಿದುಕೊಳ್ಳೋದು ಅಪರಾಧವಲ್ಲ. ಕಾಂಗ್ರೆಸ್‌ನವರಿಗೆ ಹಿಂದೂ ವಿರೋಧಿ ಮಾನಸಿಕತೆ ಬಂದಿದೆ, ಅದೊಂದು ಕಾಯಿಲೆ. ಉಡುಪಿ ಜಿಲ್ಲಾಧಿಕಾರಿಯವರು ಭಗವಾಧ್ವಜ ಕೈಯಲ್ಲಿ ಹಿಡಿದರೆ ತಪ್ಪಾ? ಅಪರಾಧವಾ? ಎಂದು ಜಿಲ್ಲಾಧಿಕಾರಿಗಳ ನಡೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿ ಅವಧಿಯಲ್ಲೇ ಹೆಚ್ಚು ಅನುದಾನ
ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಹತ್ತು ವರ್ಷಕ್ಕೆ 81,791 ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆತಿತ್ತು. ಇದೀಗ ಪ್ರಧಾನಿ ಮೋದಿಯವರ ಕಾಲದಲ್ಲಿ ಹತ್ತು ವರ್ಷಕ್ಕೆ 3,21,974 ಕೋಟಿ ರೂ. ಅನುದಾನ ದೊರೆತಿದೆ. ಇದರಲ್ಲಿ ಯಾವುದು ಹೆಚ್ಚು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಲಿ. ಈ ವರ್ಷ 57,876 ಕೋಟಿ ರೂ. ತೆರಿಗೆ ಹಂಚಿಕೆಯಾಗಿದೆ. 34,154 ಕೋಟಿ ರೂ. ಬಿಡುಗಡೆಯಾಗಿದೆ. ತೆರಿಗೆ ವಿಚಾರವಾಗಿ ಸಿಎಂ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದರು.
ಕೇಂದ್ರ ಕೃಷಿ ಸಚಿವರಿಂದ ಸ್ಪಷ್ಟನೆ
ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಸತ್ಯ ಏನು ಎಂದು ತಿಳಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ(ಜ.22) ರಾಜ್ಯಕ್ಕೆ ಆಗಮಸಿ ಕಾರ್ಯಾಗಾರ ನಡೆಸಿ ಸ್ಪಷ್ಟನೆ ನೀಡಲಿದ್ದಾರೆ ಎಂದರು.
ಪುನೀತ್ ಕೆರೆಹಳ್ಳಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಹಚ್ಚಿದ್ದಾರೆ. ನುಸುಳುಕೋರರನ್ನು ಪತ್ತೆ ಮಾಡಿದವನ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಪ್ರಕರಣ ದಾಖಲಿಸಬೇಕಾಗಿರುವುದು ಅವರಿಗೆ ಒಂದೂವರೆ ಸಾವಿರ ರೂ. ಪಡೆದು ಆಧಾರ್ ಮಾಡಿಕೊಟ್ಟವರ ಮೇಲೆ. ದೇಶದ್ರೋಹಿಗಳ ಪರ ಇದ್ದು ಕಾಂಗ್ರೆಸ್‌ನವರೂ ದೇಶದ್ರೋಹಿಗಳಾಗಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

