
ಶಿಡ್ಲಘಟ್ಟ ಪೌರಾಯುಕ್ತೆಗೆ ಧಮಕಿ; ಕೊನೆಗೂ ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ
ಬ್ಯಾನರ್ ವಿಚಾರವಾಗಿ ಪೌರಾಯುಕ್ತರನ್ನು ನಿಂದಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತಗೊಂಡಿದ್ದ ಆರೋಪಿ ರಾಜೀವ್ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿಡ್ಲಘಟ್ಟ ಪೌರಯುಕ್ತೆಗೆ ಧಮಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತರಾಗಿದ್ದ ರಾಜೀವ್ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ರೈಲು ನಿಲ್ದಾಣದಲ್ಲಿ ಕಾರು ನಿಲ್ಲಿಸಿ ಕೇರಳ ಮೂಲಕ ಗೋವಾಕ್ಕೆ ಪಲಾಯನ ಮಾಡಲು ಉದ್ದೇಶಿಸಿದ್ದ ರಾಜೀವ್ ಗೌಡನನ್ನು ಕೇರಳದ ಗಡಿಯಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಸೋಮವಾರ (ಜ.26) ಬಂಧಿಸಿ ಶಿಡ್ಲಘಟ್ಟಕ್ಕೆ ಕರೆತರುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜೀವ್ ಗೌಡ ಬಂಧನಕ್ಕಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಕೌಶಲ್ ಚೌಕ್ಸೆ ಅವರು ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಸೂರ್ಯಪ್ರಕಾಶ್ ಮತ್ತು ಶಿಡ್ಲಘಟ್ಟ ಇನ್ಸ್ಪೆಕ್ಟರ್ ಆನಂದ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡವೇ ರಾಜೀವ್ ಗೌಡನನ್ನು ಬಂಧಿಸಿದೆ.
ಏನಿದು ಪ್ರಕರಣ ?
ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅಭಿನಯದ 'ಕಲ್ಟ್' (Cult) ಚಿತ್ರದ ಪ್ರಚಾರಕ್ಕಾಗಿ ಶಿಡ್ಲಘಟ್ಟ ನಗರದ ವಿವಿಧೆಡೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಈ ಬ್ಯಾನರ್‌ಗಳನ್ನು ರಸ್ತೆ ಮಧ್ಯೆ ಮತ್ತು ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರು ಅವುಗಳನ್ನು ತೆರವುಗೊಳಿಸಲು ಆದೇಶಿಸಿದ್ದರು.
ಬ್ಯಾನರ್ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರಾಜೀವ್ ಗೌಡ ಅವರು ಜನವರಿ 12 ರಂದು ಪೌರಾಯುಕ್ತರಿಗೆ ಫೋನ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿ, "ನಗರಸಭೆಗೆ ಬೆಂಕಿ ಹಚ್ಚುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ" ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಕುರಿತು ಪೌರಾಯುಕ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.
ಶಿಡ್ಲಘಟ್ಟ ಇನ್ಸ್ಪೆಕ್ಟರ್ ಆನಂದ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಜೀವ್ ಗೌಡ ಅವರ ನಿವಾಸಕ್ಕೆ ತೆರಳಿ ಸತತ ಹುಡುಕಾಟ ನಡೆಸಿತ್ತು. ಮನೆಯಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದ್ದರೂ, ಅವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಪಕ್ಷದಿಂದ ಉಚ್ಚಾಟನೆ
ರಾಜೀವ್ ಗೌಡ ಅವರ ವರ್ತನೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಒಂದು ವಾರದೊಳಗೆ ಸೂಕ್ತ ಸಮಜಾಯಿಷಿ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಸೂಕ್ತ ಸಮಯದಲ್ಲಿ ಉತ್ತರ ನೀಡದ ಕಾರಣ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು.

