
ಇತ್ತೀಚೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದ ಅಲೆಮಾರಿ ಸಮುದಾಯ
ಒಳ ಮೀಸಲಾತಿ ವಿವಾದ: ಅಲೆಮಾರಿ ಸಮುದಾಯದ ಮನವೊಲಿಸಲು ಸರ್ಕಾರದಿಂದ 100 ಕೋಟಿ ರೂ. ಅನುಮೋದನೆ
ಒಳ ಮೀಸಲಾತಿಯಿಂದ ಅನ್ಯಾಯವಾಗಿರುವ ಕುಟುಂಬಕ್ಕೆ ʼಮೀಸಲುʼ ನ್ಯಾಯ ನೀಡುವ ಬದಲು ಆರ್ಥಿಕವಾಗಿ ಸಹಾಯ ಮಾಡಿ ಹೋರಾಟಗಾರರ ಬಾಯಿ ಮುಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಅಲೆಮಾರಿ ಸಮುದಾಯದ ಮುಂಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಅಂಗೀಕರಿಸಿರುವ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯವರಿಗೆ ವಸತಿ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಸರ್ಕಾರದ ವಿರುದ್ಧ ಎದ್ದಿರುವ ಅಸಮಾಧಾನವನ್ನು ಶಮನ ಮಾಡಲು ಮುಂದಾಗಿದೆ.
ಗುರುವಾರ(ಜ.22) ಸಿಎಂ ಸಿದ್ದರಾಮಯ್ಯ ನೇತೃತ್ವಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ಒಳ ಮೀಸಲಾತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಮುದಾಯಕ್ಕೆ ಆರ್ಥಿಕ ನೆರವಿನ ಭರವಸೆ ಕೊಟ್ಟಿದೆ. ಇದು ಹೋರಾಟಗಾರರ ಬಾಯಿ ಮುಚ್ಚಿಸುವ ಯತ್ನ ಎಂಬುದಾಗಿ ಅಲೆಮಾರಿ ಸಮುದಾಯದ ಮುಂಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದವರು 1200 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ 600 ಚದರ ಅಡಿಗಳ ವಿಸ್ತೀರ್ಣದ ಮನೆಯನ್ನು ಮೂಲಭೂತ ಸೌಕರ್ಯ ಒಳಗೊಂಡಂತೆ ಮನೆ ನಿರ್ಮಿಸಲು 100 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ಸರ್ಕಾರ ಅಲೆಮಾರಿ ಸಮುದಾಯದ ಪರವಾಗಿದೆ ಎಂಬ ಸಂದೇಶ ನೀಡಿದೆ.
ಹೆಚ್ಚಳವಾಗದ ಒಟ್ಟು ಮೀಸಲಾತಿ
ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಮೀಸಲಾತಿಯನ್ನು ಶೇ.17 ರಿಂದ 18 ಕ್ಕೆ ಹೆಚ್ಚಿಸಿ ಶೇ.1 ಮೀಸಲಾತಿಯನ್ನು ಅಲೆಮಾರಿಗಳಿಗೆ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಹೈಕೋರ್ಟ್‌ನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಒಟ್ಟು ಮೀಸಲಾತಿ ಏರಿಕೆಗೆ ತಡೆ ಇರುವ ಹಿನ್ನೆಲೆಯಲ್ಲಿ ಪ್ರಸ್ತಾಪ ಕೈ ಬಿಟ್ಟು ಈಗಿರುವ ಶೇ.17 ರಷ್ಟು ಮೀಸಲಾತಿಯಲ್ಲೇ ಅಲೆಮಾರಿಗಳಿಗೆ ನ್ಯಾಯ ಒದಗಿಸುವ ಕಸರತ್ತು ನಡೆಸಿದೆ.
ಮೂಗಿಗೆ ತುಪ್ಪ ಸವರುವ ಕೆಲಸ
ಅಲೆಮಾರಿಗಳಿಗೆ ಐದು ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಮೀಸಲಿಡಲು ಪ್ರಸ್ತಾಪಿಸಿರುವ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕವು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ. ಈಗಾಗಲೇ ರೋಸ್ಟರ್ ಬಿಂದುಗಳನ್ನು ನೀಡಲಾಗಿದೆ. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಗೆ ಅನುಗುಣವಾಗಿ ಹುದ್ದೆ ಹಂಚಿಕೆ ಮಾಡುವಾಗ ನಾಲ್ಕು ಹಂತಗಳನ್ನು ದಾಟಿ ಐದನೇ ಹಂತದಲ್ಲಿ ಅಲೆಮಾರಿಗಳಿಗೆ ಬರಲಾಗುತ್ತಿದೆ. ಉದಾಹರಣೆಗೆ ನೇಮಕಾತಿಯಲ್ಲಿ 100 ಹುದ್ದೆಗಳ ಪರಿಶಿಷ್ಟ ಜಾತಿಗಳಿಗೆ ಮೀಸಲಾದರೆ ನಾಲ್ಕು ಹಂತಗಳಲ್ಲಿ ವರ್ಗೀಕರಣವಾಗಿ ಉಳಿದರೆ ಅಲೆಮಾರಿಗಳಿಗೆ ಸಿಗುತ್ತದೆ. ಆಗೊಮ್ಮೆ ಸಿಕ್ಕರೂ ಒಂದೆರಡು ಹುದ್ದೆ ಮಾತ್ರ ಸಿಗಲಿದೆ. ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಸಿಗುವುದಿಲ್ಲ. ಹಾಗಾಗಿ ಸರ್ಕಾರದ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಅಲೆಮಾರಿ ಸಮುದಾಯದ ಮುಖಂಡರು ತಿಳಿಸಿದ್ದರು.
ʼಹಿಂದʼ ಮಠಗಳಿಗೆ ಜಾಗ ಮಂಜೂರು
ರಾಜ್ಯದ ಅಹಿಂದ ಮತಗಳು ಸದಾ ಕಾಂಗ್ರೆಸ್ ಸರ್ಕಾರದ ಪರವಾಗಿವೆ. ಈ ಮತಗಳು ಕೈತಪ್ಪಬಾರದು ಎಂಬ ಉದ್ದೇಶದಿಂದ ರಾಜ್ಯದ 22 ಹಿಂದುಳಿದ ಹಾಗೂ ದಲಿತ ಮಠಗಳಿಗೆ ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೇ 57 ಮತ್ತು 58 ರಲ್ಲಿರುವ ಸರ್ಕಾರಿ ಜಮೀನನ್ನು ದಲಿತ ಹಾಗೂ ಹಿಂದುಳಿದ ವರ್ಗಗಳ 22 ಮಠಗಳಿಗೆ ಮಂಜೂರು ಮಾಡಲು ಸಮ್ಮತಿ ನೀಡಲಾಗಿದೆ.

