Mangalore News | ಕಾಮಗಾರಿ ಉದ್ಘಾಟನೆಯಲ್ಲಿ ರಾಜಕೀಯ ಪಕ್ಷಗಳ ಮೇಲಾಟ
x
ಮಂಗಳೂರಿನಲ್ಲಿ ವಿವಿಧ ಕಾಮಗಾರಿಗಳನ್ನು ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದರು

Mangalore News | ಕಾಮಗಾರಿ ಉದ್ಘಾಟನೆಯಲ್ಲಿ ರಾಜಕೀಯ ಪಕ್ಷಗಳ ಮೇಲಾಟ

ಬಿಜೆಪಿ ನಾಯಕರಿಂದ ಉದ್ಘಾಟನೆಗೊಂಡಿದ್ದ ಇದೇ ಕಾಮಗಾರಿಗಳನ್ನು ಶನಿವಾರ (ಫೆ.15) ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಅಧಿಕಾರಿಗಳು ಮತ್ತೊಮ್ಮೆ ಉದ್ಘಾಟನೆ ನೆರವೇರಿಸಿ ಬಿಜೆಪಿ ನಾಯಕರಿಗೆ ಠಕ್ಕರ್‌ ನೀಡಿದ್ದಾರೆ.


ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಡಿ ನಿರ್ಮಾಣಗೊಂಡಿರುವ ಹಲವು ಕಾಮಗಾರಿಗಳು ರಾಜಕೀಯ ಪಕ್ಷಗಳ ಮೇಲಾಟದಿಂದ ಎರಡೆರಡು ಬಾರಿ ಉದ್ಘಾಟನೆ ಭಾಗ್ಯ ಕಂಡಿವೆ.

ಜಪ್ಪಿನಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, ಕಾರ್ಪೊರೇಷನ್ ಕ್ವಾಟರ್ಸ್ ಮತ್ತು ಬಸ್‍ ಬೇ ಸೇರಿ ಇತರೆ ಕಾಮಗಾರಿಗಳನ್ನು ಫೆ.9ರಂದು ಬಿಜೆಪಿ ಮುಖಂಡರೇ ಸೇರಿ ಉದ್ಘಾಟನೆ ನೆರವೇರಿಸಿದ್ದರು. ಅಂದು ಬಿಜೆಪಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮುಂದಾಳತ್ವದಲ್ಲಿ ಕಾಮಗಾರಿಗಳ ಉದ್ಘಾಟನೆ ನೆರವೇರಿತ್ತು. ಆದರೆ, ಅಂದಿನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಸೇರಿ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿರಲಿಲ್ಲ. ಕಾಮಗಾರಿಗಳ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದರು.

ಯಾವುದೇ ಮಾಹಿತಿ ನೀಡದೇ ಶಿಷ್ಟಾಚಾರ ಉಲ್ಲಂಘಿಸಿ ಕಾಮಗಾರಿ ಉದ್ಘಾಟಿಸಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದರು.

ಮತ್ತೊಮ್ಮೆ ಉದ್ಘಾಟನೆ ಭಾಗ್ಯ

ಬಿಜೆಪಿ ನಾಯಕರಿಂದ ಉದ್ಘಾಟನೆಗೊಂಡಿದ್ದ ಇದೇ ಕಾಮಗಾರಿಗಳನ್ನು ಶನಿವಾರ (ಫೆ.15) ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಅಧಿಕಾರಿಗಳು ಮತ್ತೊಮ್ಮೆ ಉದ್ಘಾಟನೆ ನೆರವೇರಿಸಿ ಬಿಜೆಪಿ ನಾಯಕರಿಗೆ ಠಕ್ಕರ್‌ ನೀಡಿದ್ದಾರೆ.

ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಬಿಜೆಪಿಯವರು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಸರಿಯಲ್ಲ. ಸರ್ಕಾರದ ಆಸ್ತಿ, ಸರ್ಕಾರದ ದುಡ್ಡಿನಿಂದ ಆಗಿರುವುದನ್ನು ಎಲ್ಲರೂ ಸೇರಿ ಒಗ್ಗಟ್ಟಾಗಿ ಉದ್ಘಾಟಿಸಬೇಕು. ಅಭಿವೃದ್ಧಿ ಒಬ್ಬರಿಗೆ ಸೇರಿದ್ದಲ್ಲ,‌ ಕೀಳುಮಟ್ಟದ ರಾಜಕೀಯ ನಾಗರಿಕ ವರ್ತನೆಯಲ್ಲ ಎಂದು ಟೀಕಿಸಿದ್ದಾರೆ.

ಶಂಕುಸ್ಥಾಪನೆಯ ಫಲಕಗಳಲ್ಲಿ ಬಿಜೆಪಿಯವರ ಹೆಸರು ಮಾತ್ರ ಹಾಕಲಾಗಿದೆ. ಇಷ್ಟೆಲ್ಲ ಆಗುವಾಗ ಅಧಿಕಾರಿಗಳು ಯಾಕೆ ಸುಮ್ಮನಿದ್ದರು. ಈ ವಿಚಾರವನ್ನು ಯಾಕೆ ನನ್ನ ಗಮನಕ್ಕೆ ತಂದಿಲ್ಲ ಎಂದು ವೇದಿಕೆ ಮೇಲೆಯೇ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಈ ಲೋಪಕ್ಕೆ ಕಾರಣರಾದವರ ಕುರಿತು ವರದಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರಿಗೆ ಸಚಿವರು ಸೂಚಿಸಿದ್ದಾರೆ.

ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ರಾಜಕೀಯ ಸಣ್ಣತನ ತೋರಿಸಿದ್ದಾರೆ. ಇಂದು ಕೂಡ ಉದ್ಘಾಟನೆಗೆ ಆಹ್ವಾನ ನೀಡಿದ್ದೆವು. ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ಹಾಕಲಾಗಿದೆ. ಆದರೆ ಶಾಸಕರು ಮಾತ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿಲ್ಲ, ಇದೇನಾ ಇವರು ಸರ್ಕಾರಿ ಕಾರ್ಯಕ್ರಮಕ್ಕೆ ಕೊಡುವ ಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಷ್ಟಾಚಾರ ಉಲ್ಲಂಘಿಸಿಲ್ಲ; ಸ್ಪಷ್ಟನೆ

ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಲಿಕೆ ಮೇಯ‌ರ್ ಮನೋಜ್ ಕುಮಾರ್ ಕೋಡಿಕಲ್ ಅವರು, ಸರ್ಕಾರಿ ಕಟ್ಟಡಗಳ ಉದ್ಘಾಟನೆಯಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘಿಸಿಲ್ಲ. ಉದ್ಘಾಟನೆಗೆ 10ದಿನಗಳ ಮೊದಲೇ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮಾಹಿತಿ ನೀಡಿದ್ದೇವೆ. ರಾಜ್ಯ ಸರ್ಕಾರದ ಪ್ರತಿನಿಧಿಗಳು, ಶಾಸಕರು ಹಾಗೂ ನಾಯಕರಿಗೆ ಆಹ್ವಾನ ನೀಡುವ ಕೆಲಸ ಜಿಲ್ಲಾಧಿಕಾರಿ ಕಡೆಯಿಂದ ಆಗಬೇಕು. ಮತ್ತೊಮ್ಮೆ ಉದ್ಘಾಟನೆ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಈಗಾಗಲೇ ಉದ್ಘಾಟನೆಗೊಂಡ ಕಾಮಗಾರಿಗಳ ಮತ್ತೆ ಉದ್ಘಾಟಿಸಿದರೆ ಅದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

Read More
Next Story