ಪೊಲೀಸ್ ಕಾಳಜಿ | ಕೆರೆಗೆ ಹಾರಿ ಗುತ್ತಿಗೆದಾರನ ಜೀವ ಉಳಿಸಿದ ಪೊಲೀಸ್
ಕೆರೆ ಸಮೀಪ ನಿಂತಿದ್ದ ಕಾರಿನ ಸುಳಿವಿನ ಆಧಾರದಲ್ಲಿ ಕೆರೆ ಪರಿಶೀಲಿಸಿದಾಗ ಗುತ್ತಿಗೆದಾರ ರಮೇಶ್ ನೀರಿನಲ್ಲಿ ಮುಳುಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೆ ಕೆರೆಗೆ ಹಾರಿದ ರಾಮಪ್ಪ ಹಾಗೂ ಲೋಕೇಶ್ ಗುತ್ತಿಗೆದಾರರ ಜೀವ ಉಳಿಸಿದ್ದಾರೆ.
ಪೊಲೀಸರು ಜೀವ ಪಣಕ್ಕಿಟ್ಟು ಕೆರೆಗೆ ಹಾರಿ ಹರಸಾಹಸ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಗುತ್ತಿಗೆದಾರರೊಬ್ಬರ ಜೀವ ಉಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಅರಳಾಪುರ ಗ್ರಾಮದ ಗುತ್ತಿಗೆದಾರ ರಮೇಶ್ ಎಂಬುವರು ಯಡೇಹಳ್ಳಿಯ ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳವಾರ ರಾತ್ರಿ 11ಕ್ಕೆ ಪೋಲಿಸ್ ಠಾಣೆಗೆ ಬಂದ ಕರೆಯಿಂದ ತಕ್ಷಣ ಕಾರ್ಯಪ್ರವೃತ್ತರಾದ 112 ವಾಹನದ ಕರ್ತವ್ಯನಿರತ ಸಿಬ್ಬಂದಿ ರಾಮಪ್ಪ ಹಾಗೂ ಲೋಕೇಶ್ ಕ್ಷಿಪ್ರಗತಿಯಲ್ಲಿ ಯಡೇಹಳ್ಳಿ ಕೆರೆ ಬಳಿಗೆ ತೆರಳಿದ್ದರು.
ಕೆರೆ ಸಮೀಪ ನಿಂತಿದ್ದ ಕಾರಿನ ಸುಳಿವಿನ ಆಧಾರದಲ್ಲಿ ಕೆರೆ ಪರಿಶೀಲಿಸಿದಾಗ ರಮೇಶ್ ಅವರು ನೀರಿನಲ್ಲಿ ಮುಳುಗುತ್ತಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ರಾತ್ರಿಯ ಕತ್ತಲೆಯನ್ನೂ ಲೆಕ್ಕಿಸದೆ ಜೀವ ಪಣಕ್ಕಿಟ್ಟು ಕೆರೆಗೆ ಹಾರಿದ ರಾಮಪ್ಪ ಹಾಗೂ ಲೋಕೇಶ್ ಹರಸಾಹಸ ಮಾಡಿ ಗುತ್ತಿಗೆದಾರ ರಮೇಶ್ ಅವರನ್ನು ರಕ್ಷಿಸಿ, ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಗುತ್ತಿಗೆದಾರ ರಮೇಶ್ ಸಾಲದ ಸುಳಿಗೆ ಸಿಲುಕಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದರು. ಜೀವದ ಹಂಗು ತೊರೆದು ಕೆರೆಗೆ ಜಿಗಿದು ರಮೇಶ್ ಅವರನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.