ಬೆಳ್ಳಂಬೆಳಿಗ್ಗೆ ಸದ್ದು ಮಾಡಿದ ಬೆಂಗಳೂರು ಪೊಲೀಸ್ ರಿವಾಲ್ವರ್: ರೌಡಿಶೀಟರ್ ಕಾಲಿಗೆ ಗುಂಡೇಟು
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಬಳಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಬಂಧಿಸಲು ಹೋದಾಗ ತಮ್ಮ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರಿಂದ ಪೊಲೀಸರು, ಆತನ ಕಾಲಿಗೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ನಡೆದಿದೆ.
ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಮೇಲೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಬಳಿ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರೌಡಿಶೀಟರ್ ಮನೋಜ್ ಮೇಲೆ ಲೋಕಿ ಅಂಡ್ ಗ್ಯಾಂಗ್ ದಾಳಿ ನಡೆಸಿತ್ತು. ಈ ಘಟನೆ ಬಳಿಕ ಗ್ಯಾಂಗ್‌ನ ಸದಸ್ಯರೆಲ್ಲ ತಲೆಮರೆಸಿಕೊಂಡಿದ್ದರು. ಈ ದಾಳಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದರು.
ಆರೋಪಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಇರುವಿಕೆಯನ್ನು ಖಚಿತಪಡಿಸಿಕೊಂಡು ಮಾಯಸಂದ್ರಕ್ಕೆ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡ ತೆರಳಿತ್ತು. ಪೊಲೀಸರು ತನ್ನ ಬಂಧನಕ್ಕೆ ಬರುತ್ತಿರುವುದನ್ನು ಗಮನಿಸಿದ ಲೋಕಿ, ಅವರ ಮೇಲೆಯೇ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಆಗ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಅವರು ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಲೋಕಿಯನ್ನು ವಶಕ್ಕೆ ಪಡೆದು, ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.