ದರ್ಶನ್ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿದ್ದ ಗನ್ ವಶಕ್ಕೆ ಪಡೆದ ಪೊಲೀಸರು
ಹೊಸಕೆರೆಹಳ್ಳಿ ಸಮೀಪವಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಫ್ಲ್ಯಾಟ್‌ನಲ್ಲಿದ್ದ ಗನ್ ವಶಪಡಿಸಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್ ಅವರು ಜಾಮೀನಿನ ಮೂಲಕ ಹೊರಬಂದಿದ್ದು, ಸದ್ಯ ನಟನ ಬಳಿ ಇರುವ ಗನ್ ಲೈಸೆನ್ಸ್ ಪರವಾನಗಿ ಅಮಾನತುಪಡಿಸಿ ಪೊಲೀಸರು ಗನ್ ಜಪ್ತಿ ಮಾಡಿದ್ದಾರೆ.
ಬಂದೂಕು ಪರವಾನಗಿ ರದ್ದುಗೊಳಿಸುವ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರೇಟ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಜ.7ರಂದು ದರ್ಶನ್‌ಗೆ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಉತ್ತರಿಸಿರುವ ದರ್ಶನ್ 'ನಾನು ಸೆಲೆಬ್ರಿಟಿ ಆಗಿರುವುದರಿಂದ ಹೋದ ಕಡೆಗಳಲ್ಲೆಲ್ಲ ಹೆಚ್ಚಿನ ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದರೂ ವೈಯಕ್ತಿಕ ರಕ್ಷಣೆಗಾಗಿ ಬಂದೂಕು ಪರವಾನಗಿ ಅವಶ್ಯಕತೆಯಿದೆ. ಹೀಗಾಗಿ, ಬಂದೂಕು ಪರವಾನಗಿ ರದ್ದು ಮಾಡಬಾರದು' ಎಂದು ದರ್ಶನ್ ಮನವಿ ಮಾಡಿಕೊಂಡಿದ್ದರು.
ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ದರ್ಶನ್ ಬೆದರಿಕೆ ಹಾಕಬಹುದು. ಅಲ್ಲದೆ, ಶಸ್ತ್ರಾಸ್ತ್ರ ಪರವಾನಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ಪೊಲೀಸರು ದರ್ಶನ್ ಮನವಿಗೆ ಒಪ್ಪದೆ ಶಸ್ತ್ರಾಸ್ತ್ರ ಪರವಾನಗಿ ಅಮಾನತುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಶಿಫಾರಸು ಮಾಡಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಆಯುಕ್ತರು ದರ್ಶನ್‌ರ ಶಸ್ತ್ರಾಸ್ತ್ರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿ ಆದೇಶ ಹೊರಡಿಸಿದ್ದರು.
ಪೊಲೀಸ್ ಆಯುಕ್ತರ ಆದೇಶದ ಅನ್ವಯ ಆರ್.ಆರ್. ನಗರ ಠಾಣೆ ಪೊಲೀಸರು, ರಾಜರಾಜೇಶ್ವರಿ ನಗರದಲ್ಲಿನ ದರ್ಶನ್ ಮನೆಗೆ ನೋಟಿಸ್ ಜಾರಿ ಮಾಡಿ ತಮ್ಮ ಗನ್ ಅನ್ನು ಠಾಣೆಯಲ್ಲಿ ಠೇವಣಿ ಇಡುವಂತೆ ಸೂಚಿಸಿದ್ದರು. ನೋಟಿಸ್ ಜಾರಿ ನಂತರವೂ ದರ್ಶನ್, ಗನ್ ಜಮೆ ಮಾಡಲು ಹಿಂದೇಟು ಹಾಕಿದ್ದರು. ಹೀಗಾಗಿ, ಪೊಲೀಸರು ಮಂಗಳವಾರ ಖುದ್ದು ದರ್ಶನ್ ನಿವಾಸಕ್ಕೆ ತೆರಳಿ ಗನ್ ಜಪ್ತಿ ಮಾಡಿದ್ದಾರೆ.
ಹೊಸಕೆರೆಹಳ್ಳಿ ಸಮೀಪವಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಫ್ಲ್ಯಾಟ್‌ನಲ್ಲಿದ್ದ ಗನ್ ವಶಪಡಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರ ಕಾಯಿದೆ 1959ರ ಸೆಕ್ಷನ್ 10ರ ಪ್ರಕಾರ ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಆರೋಪವಿದ್ದರೆ ಪೊಲೀಸರಿಗೆ ಅವರ ಶಸ್ತ್ರಾಸ್ತ್ರ ಪರವಾನಗಿ ಅಮಾನತುಪಡಿಸುವ ಅಧಿಕಾರವಿದೆ. ಆ ಪ್ರಕಾರ ದರ್ಶನ್‌ರ ಶಸ್ತ್ರಾಸ್ತ್ರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ದರ್ಶನ್ ತಮ್ಮ ಶಸ್ತ್ರಾಸ್ತ್ರ ಪರವಾನಗಿ ಮತ್ತು ಗನ್ ಅನ್ನು ಸಿಬ್ಬಂದಿಯ ವಶಕ್ಕೆ ಕೊಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೊರಗೆ ಪ್ರಯಾಣಿಸುವೆ. ನನ್ನ ಭದ್ರತೆಗೆ ಬಂದೂಕು ಬಳಕೆ ಅಗತ್ಯವಾಗಿದೆ. ಕಾನೂನಾತ್ಮಕವಾಗಿ ಗನ್ ಪಡೆದುಕೊಂಡಿದ್ದು, ಶಸ್ತ್ರಾಸ್ತ್ರ ಪರವಾನಗಿಯ ಯಾವುದೇ ಷರತ್ತು ಉಲ್ಲಂಘಿಸಿಲ್ಲ. ಆದ ಕಾರಣ ಶಸ್ತ್ರಾಸ್ತ್ರ ಪರವಾನಗಿ ಹಾಗೂ ಗನ್ ಹಿಂಪಡೆಯಬಾರದು,'' ಎಂದು ದರ್ಶನ್ ಮನವಿ ಮಾಡಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಇತರೆ ಎಲ್ಲ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಪ್ರಕರಣದ ಸಾಕ್ಷಿಗಳಿಗೆ ದರ್ಶನ್ ಬೆದರಿಕೆ ಹಾಕುವ ಸಾಧ್ಯತೆ ಇದೆ. ಅಲ್ಲದೆ, ಅವರು ಶಸ್ತ್ರಾಸ್ತ್ರ, ಪರವಾನಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಪೊಲೀಸರು ಅನುಮಾನಿಸಿ ನೋಟಿಸ್ ನೀಡಿದ್ದರು.