ಜಯಮೃತ್ಯುಂಜಯ ಸ್ವಾಮೀಜಿ ಮುಗಿಸಲು ಪೊಲೀಸರ ಪ್ಲಾನ್‌: ಎಂ ಪಿ ರೇಣುಕಾಚಾರ್ಯ ಆರೋಪ
x
ರೇಣುಕಾಚಾರ್ಯ

ಜಯಮೃತ್ಯುಂಜಯ ಸ್ವಾಮೀಜಿ ಮುಗಿಸಲು ಪೊಲೀಸರ ಪ್ಲಾನ್‌: ಎಂ ಪಿ ರೇಣುಕಾಚಾರ್ಯ ಆರೋಪ

ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯ ಮೇಲಿನ ದಾಳಿಯನ್ನು ಎಲ್ಲ ಮಠಾಧೀಶರು ಖಂಡಿಸಬೇಕು. ಪಂಚಮಸಾಲಿ ಸಮುದಾಯದವರು ಮೀಸಲಾತಿ ಅವರ ಹಕ್ಕನ್ನು ಕೇಳುತಿದ್ದಾರೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.


Click the Play button to hear this message in audio format

ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟದ ವೇಳೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿರುವ ಬಗ್ಗೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದು, ಸ್ವಾಮೀಜಿಯನ್ನು ಮುಗಿಸಿದರೆ ಹೋರಾಟ ನಿಲ್ಲುತ್ತದೆ ಎಂದು ಪೊಲೀಸರು ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ವಂಶಸ್ಥರ ಮೇಲಿನ ಲಾಠಿ ಚಾರ್ಜ್ ಖಂಡಿಸಬೇಕು. ಇಲ್ಲವಾದರೆ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತೆ. ನಾವು ಪಂಚಮಸಾಲಿ ಸಮುದಾಯದ ಜೊತೆ ಗಟ್ಟಿಯಾಗಿದ್ದೇವೆ. ಸಮುದಾಯ ಮೇಲಿನ ದಾಳಿಯನ್ನು ಎಲ್ಲ ಮಠಾಧೀಶರು ಖಂಡಿಸಬೇಕು. ಪಂಚಮಸಾಲಿ ಸಮುದಾಯದವರು ಮೀಸಲಾತಿ ಅವರ ಹಕ್ಕನ್ನು ಕೇಳುತಿದ್ದಾರೆ ಎಂದು ಅವರು ಹೇಳಿದರು.

ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ಪರಮೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಲಾಠಿ ಚಾರ್ಜ್ ಮಾಡುವ ಬದಲು ಮುತ್ತು ಕೊಡಬೇಕಾ ಅಂತ ಕೇಳುತ್ತಾರೆ. ಅವರು ಮುತ್ತು ಕೊಡು ಅಂತ ಕೇಳಿದ್ದರಾ? ಹೋರಾಟಗಾರರು ಇರುವಲ್ಲಿಗೆ ಹೋಗಿ ಅವರ ಮನವಿ ಕೇಳಬೇಕಿತ್ತು. ಆರ್‌ಎಸ್‌ಎಸ್ ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಕಾಶಪ್ಪನವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಮಾನವೀಯತೆ ಮರೆತು ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪಂಚಮಸಾಲಿ ಶ್ರೀಗಳು ಮೊದಲಿನಿಂದಲೂ ಹೋರಾಟ‌ ಮಾಡಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಸಾಕಷ್ಟು ಮಾತನಾಡಿದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ್ದು ಲಾಠಿ ಏಟು. ಮೊದಲು ಮೀಸಲಾತಿ ಕೇಳೋದು ಸರಿ ಇದೆ ಅಂತ ಹೇಳಿದಿರಿ. ಇವಾಗ ಮೀಸಲಾತಿ ನೀಡೊಕೆ ಬರೋದಿಲ್ಲ ಅಂತ ಹೇಳುತ್ತಾರೆ. ನಿರಾಣಿ ಉಳಿಸೋಕೆ ಈ ಹೋರಾಟ ಅಂತ ಹೇಳುತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯ ಮೇಲೆ ವ್ಯಾಮೋಹ ಜಾಸ್ತಿ. ಕಾವಿ ಬಟ್ಟೆ ಹಾಕಿಕೊಂಡವರ ಮೇಲೆ ಅಷ್ಟ್ಯಾಕೆ ಸಿಟ್ಟು ಎಂದು ಲಾಠಿ ಚಾರ್ಜ್ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯಗಳ ಬೆಳಗಾವಿ ಅಧಿವೇಶನದಲ್ಲಿ ವೇಳೆ ಸುವರ್ಣ ವಿಧಾನಸೌಧಕ್ಕೆ ಟ್ರಾಕ್ಟರ್ ರ್ಯಾಲಿ ಮೂಲಕ ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದರು. ಆದರೆ, ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಬಳಿಕ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿತ್ತು. ಪ್ರತಿಭಟನೆ ವೇಳೆ ಪಂಚಮಸಾಲಿ ಸಮುದಾಯದವರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಕಲ್ಲು ತೂರಾಟವೂ ನಡೆದಿತ್ತು. ಘಟನೆಯಲ್ಲಿ ಹಲವು ಪ್ರತಿಭಟನಾಕಾರರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಹಿರೇಬಾಗೇವಾಡಿ ಪೊಲೀಸರು ಐವರ ವಿರುದ್ಧ ಎಫ್‌ಐಆ‌ರ್ ದಾಖಲಿಸಿ, 70 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಇದೀಗ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Read More
Next Story