Police investigation reveals student poisoned water tank to attract attention
x
ಸಾಂದರ್ಭಿಕ ಚಿತ್ರ

ಎಲ್ಲರ ಗಮನ ಸೆಳೆಯಲೆಂದೇ ನೀರಿನ ಟ್ಯಾಂಕ್‌ಗೆ ವಿಷ ಹಾಕಿದ್ದ ವಿದ್ಯಾರ್ಥಿ; ಪೊಲೀಸ್‌ ತನಿಖೆಯಿಂದ ಬಹಿರಂಗ

ಘಟನೆ ನಡೆದ ನಂತರ ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಐದನೇ ತರಗತಿ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಕ್ರಿಮಿನಾಶಕದ ವಾಸನೆ ಬಂದಿತ್ತು. ಆತನ ಕೈ ಯಲ್ಲೂ ವಾಸನೆ ಇತ್ತು.


ತೀವ್ರ ಕೂತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದ ಪ್ರಕರಣದಲ್ಲಿ ಅದೇ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಭಾಗಿಯಾಗಿದ್ದ ಎಂಬ ಸಂಗತಿ ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ.

ಎಲ್ಲರ ಗಮನ ಸೆಳೆಯುವ ಉದ್ದೇಶದಿಂದಲೇ ವಿದ್ಯಾರ್ಥಿಯು ಕ್ರಿಮಿನಾಶಕ ಬೆರೆಸಿದ್ದ. ಜುಲೈ 31ರಂದು ನಡೆದ ಘಟನೆ ನಂತರ ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಐದನೇ ತರಗತಿ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಕ್ರಿಮಿನಾಶಕದ ವಾಸನೆ ಬಂದಿದೆ. ಆತನ ಕೈಕೂಡ ವಾಸನೆ ಬಂದಿತ್ತು. ನಂತರ ಆತನನ್ನು ವಿಚಾರಣೆ ನಡೆಸಿದಾಗ ಶುಂಠಿ ಬೆಳೆಯ ರೋಗಕ್ಕೆ ಹಾಕಲು ಮನೆಯಲ್ಲಿ ಇಟ್ಟಿದ್ದ ಕೀಟನಾಶಕ ತಂದು ಕುಡಿಯುವ ನೀರಿನ ಟ್ಯಾಂಕ್‌ಗೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಶಿಕ್ಷಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಅದೇ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಕುಡಿಯುವ ನೀರಿನ ಬಾಟಲ್‌ಗೆ ಫಿನಾಯಿಲ್‌ ಹಾಕಿದ್ದ. ಇದನ್ನು ಗಮನಿಸಿದ್ದ ಶಿಕ್ಷಕರು ಬಾಟಲ್‌ನಲ್ಲಿದ್ದ ನೀರನ್ನು ಹೊರಗೆ ಚೆಲ್ಲಿ ಎಚ್ಚರಿಕೆ ನೀಡಿದ್ದರು. ಆ ನಂತರ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಇದರಿಂದ ಪ್ರೇರೇಪಿತನಾದ ಐದನೇ ತರಗತಿ ವಿದ್ಯಾರ್ಥಿ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿದ್ದಾನೆ.

ಶಾಲಾ ಪರಿಷತ್‌ನ ಮುಖ್ಯಮಂತ್ರಿಯಾಗಿದ್ದ ವಿದ್ಯಾರ್ಥಿ

ಕುಡಿಯುವ ನೀರಿನ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿದ್ದ ವಿದ್ಯಾರ್ಥಿ ಶಾಲಾ ಪರಿಷತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ. ಆದ್ದರಿಂದ ಪ್ರತಿದಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬರುವ ಮುನ್ನವೇ ಶಾಲೆಗ ಬಂದು ಸ್ವಚ್ಚತೆ ಹಾಗೂ ನೀರಿನ ಮಟ್ಟ ಪರಿಶೀಲಿಸುತ್ತಿದ್ದ. ಅದರಂತೆ ಜುಲೈ 31ರಂದು ಎಲ್ಲರಿಗಿಂತ ಮೊದಲೇ ಬಂದಿದ್ದ ವಿದ್ಯಾರ್ಥಿ ಟ್ಯಾಂಕ್‌ಗೆ ಕ್ರಿಮಿನಶಾಕ ಬೆರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story