ವಿಧಾನಸೌಧದ ಬಳಿ ದ ಫೆಡರಲ್ ಕರ್ನಾಟಕ ವರದಿಗಾರರಿಗೆ ಪೊಲೀಸರ ಅಡ್ಡಿ
x

ವಿಧಾನಸೌಧದ ಬಳಿ 'ದ ಫೆಡರಲ್ ಕರ್ನಾಟಕ' ವರದಿಗಾರರಿಗೆ ಪೊಲೀಸರ ಅಡ್ಡಿ

ಕಬ್ಬು ಬೆಳೆಗಾರರ 'ದ ಫೆಡರಲ್ ಕರ್ನಾಟಕ'ದ ವರದಿಗಾರರಾದ ವಿಜಯ್​ ಜೊನ್ನಹಳ್ಳಿ ಹಾಗೂ ಕ್ಯಾಮೆರಾಮನ್​ ರಘು ಆರ್​​.ಡಿ ವಿಧಾನಸೌಧದ ಕಾರಿಡಾರ್‌ನಲ್ಲಿ ರೈತ ಮುಖಂಡರ ಅಭಿಪ್ರಾಯವನ್ನು ಪಡೆಯುತ್ತಿದ್ದರು.ಅದಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.


ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಕಾರಿಡಾರ್‌ನಲ್ಲಿಯೇ ಮಾಧ್ಯಮಗಳ ಕೆಲಸಕ್ಕೆ ಅಡ್ಡಿಯಾಗಿದೆ. ಕಬ್ಬು ಬೆಳೆಗಾರರ ಕುರಿತ ಸರ್ಕಾರದ ಸಭೆಯ ನಂತರ, ರೈತ ಮುಖಂಡರ ಅಭಿಪ್ರಾಯ ಪಡೆಯುತ್ತಿದ್ದ 'ದ ಫೆಡರಲ್ ಕರ್ನಾಟಕ' ವರದಿಗಾರರನ್ನು ಹೊರಕ್ಕೆ ಕಳುಹಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ನಡುವೆ ಸಭೆಯಿಂದ ಹೊರಬಂದ ರೈತ ಮುಖಂಡರು, ಸರ್ಕಾರದ ನಿಲುವಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಈ ವೇಳೆ, 'ದ ಫೆಡರಲ್ ಕರ್ನಾಟಕ'ದ ವರದಿಗಾರರಾದ ವಿಜಯ್​ ಜೊನ್ನಹಳ್ಳಿ ಹಾಗೂ ಕ್ಯಾಮೆರಾಮನ್​ ರಘು ಆರ್​​.ಡಿ ವಿಧಾನಸೌಧದ ಕಾರಿಡಾರ್‌ನಲ್ಲಿ ರೈತ ಮುಖಂಡರ ಅಭಿಪ್ರಾಯವನ್ನು ಪಡೆಯುತ್ತಿದ್ದರು.

ಸರ್ಕಾರದ ವಿರುದ್ಧ ರೈತರು ಮಾತನಾಡುತ್ತಿದ್ದಂತೆಯೇ, ಸ್ಥಳಕ್ಕೆ ಏಕಾಏಕಿ ನುಗ್ಗಿದ ಪೊಲೀಸ್ ಅಧಿಕಾರಿಗಳು, ಅಭಿಪ್ರಾಯಪಡೆಯದಂತೆ ಹೇಳಿದರು. "ಇಲ್ಲಿ ಮಾತನಾಡಲು ಅವಕಾಶವಿಲ್ಲ" ಎಂದು ಹೇಳಿ, ಕ್ಯಾಮೆರಾವನ್ನು ಕೈಗೆತ್ತಿಕೊಂಡು, ಚಿತ್ರೀಕರಿಸಿದ ದೃಶ್ಯಗಳನ್ನು ಅಳಿಸುವಂತೆ ಒತ್ತಾಯಿಸಿದರು. ವರದಿಗಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ರೈತರ ಆಕ್ರೋಶ

ಪೊಲೀಸರ ಈ ವರ್ತನೆಯಿಂದ ಸಿಟ್ಟಿಗೆದ್ದ ರೈತ ಮುಖಂಡರು, "ನಮ್ಮ ಅಭಿಪ್ರಾಯವನ್ನು ಹೇಳಲೂ ನಮಗೆ ಸ್ವಾತಂತ್ರ್ಯವಿಲ್ಲವೇ? ಮಾಧ್ಯಮಗಳೊಂದಿಗೆ ಮಾತನಾಡಲೂ ಬಿಡುವುದಿಲ್ಲವೇ?" ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಕಾರಣಕ್ಕೇ ಪೊಲೀಸರು ಈ ರೀತಿ ದರ್ಪ ತೋರುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ವಿಧಾನಸೌಧದಂತಹ ಜಾಗದಲ್ಲಿ, ಸರ್ಕಾರದ ಸಭೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಯತ್ನಿಸುತ್ತಿದ್ದ ಮಾಧ್ಯಮದ ಮೇಲೆ ಪೊಲೀಸರು ಈ ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Read More
Next Story