ಬೆಂಗಳೂರು| ಮೊಬೈಲ್‌ ಕಳ್ಳರ ವಿರುದ್ಧ ಪೊಲೀಸರ ಬೇಟೆ;  3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ
x
ಸಾಂದರ್ಭಿಕ ಚಿತ್ರ 

ಬೆಂಗಳೂರು| ಮೊಬೈಲ್‌ ಕಳ್ಳರ ವಿರುದ್ಧ ಪೊಲೀಸರ ಬೇಟೆ; 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ

ಐಫೋನ್ 17, ಸ್ಯಾಮ್‌ಸಂಗ್ ಎಸ್ 24, ಒನ್‌ಪ್ಲಸ್‌ನಂತಹ ದುಬಾರಿ ಫೋನ್‌ಗಳು ಸೇರಿದಂತೆ ಹಲವು ಬ್ರಾಂಡ್‌ಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಅವುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.


Click the Play button to hear this message in audio format

ರಾಜ್ಯ ರಾಜಧಾನಿಯಲ್ಲಿ ಮೊಬೈಲ್ ಕಳ್ಳತನದ ಬೃಹತ್​ ಜಾಲವನ್ನು ಭೇದಿಸಿರುವ ಬೆಂಗಳೂರು ನಗರ ಪೊಲೀಸರು, ಸುಮಾರು 3.36 ಕೋಟಿ ರೂಪಾಯಿ ಮೌಲ್ಯದ 1,949 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಐಫೋನ್ 17, ಸ್ಯಾಮ್‌ಸಂಗ್ ಎಸ್ 24, ಒನ್‌ಪ್ಲಸ್‌ನಂತಹ ದುಬಾರಿ ಫೋನ್‌ಗಳು ಸೇರಿದಂತೆ ಹಲವು ಬ್ರಾಂಡ್‌ಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಅವುಗಳನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧಿತರಾದ ಮದನ್, ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಆರೋಪಿಗಳು ಕಳ್ಳತನಕ್ಕೆ ಹೊಸ ವಿಧಾನ ಬಳಸುತ್ತಿದ್ದರು. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು ಮೊಬೈಲ್ ಕದಿಯುತ್ತಿದ್ದರು. ಕದ್ದ ತಕ್ಷಣ ಮೊಬೈಲ್‌ಗೆ ಅಲ್ಯೂಮಿನಿಯಂ ಫಾಯಿಲ್ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಮೊಬೈಲ್ ನೆಟ್‌ವರ್ಕ್ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿತ್ತು. ಫೋನ್ ಕಳೆದುಕೊಂಡ ಮಾಲೀಕರು ಕರೆ ಮಾಡಿದರೆ 'ಸ್ವಿಚ್ಡ್ ಆಫ್' ಎಂಬ ಸಂದೇಶ ಬರುತ್ತಿತ್ತು. ಈ ಮೂಲಕ ಪೊಲೀಸರಿಗೆ ಸಿಕ್ಕಿಬೀಳದಂತೆ ಖದೀಮರು ಕೈಚಳಕ ತೋರುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಸಿಇಐಆರ್ (CEIR) ಪೋರ್ಟಲ್: ಕಳ್ಳರನ್ನು ಹಿಡಿಯುವ ಬ್ರಹ್ಮಾಸ್ತ್ರ

ಈ ಬೃಹತ್ ಕಾರ್ಯಾಚರಣೆಯ ಯಶಸ್ಸಿನ ಹಿಂದೆ ಕೇಂದ್ರ ಸರ್ಕಾರದ ಸಿಇಐಆರ್ (Central Equipment Identity Register) ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿದೆ. ವಶಪಡಿಸಿಕೊಂಡ 1,949 ಮೊಬೈಲ್‌ಗಳ ಪೈಕಿ 894 ಮೊಬೈಲ್‌ಗಳನ್ನು ಇದೇ ಪೋರ್ಟಲ್ ಮೂಲಕ ಪತ್ತೆಹಚ್ಚಲಾಗಿದೆ.

ಏನಿದು ಸಿಇಐಆರ್?

ಸಿಇಐಆರ್ ಎನ್ನುವುದು ಪ್ರತಿಯೊಂದು ಮೊಬೈಲ್ ಫೋನಿನ ವಿಶಿಷ್ಟ ಗುರುತಿನ ಸಂಖ್ಯೆಯಾದ ಐಎಂಇಐ (IMEI) ಆಧಾರದ ಮೇಲೆ ಕಾರ್ಯನಿರ್ವಹಿಸುವ ಒಂದು ಕೇಂದ್ರೀಕೃತ ವ್ಯವಸ್ಥೆ. ಮೊಬೈಲ್ ಕಳೆದುಹೋದಾಗ, ಅದರ ಐಎಂಇಐ ಸಂಖ್ಯೆಯನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿದರೆ, ಆ ಫೋನ್ ಅನ್ನು ಕಪ್ಪುಪಟ್ಟಿಗೆ (blacklist) ಸೇರಿಸಲಾಗುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

1. ಕಳೆದುಹೋದ ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ.

2. ನಂತರ ಕಳ್ಳರು ಆ ಮೊಬೈಲ್‌ಗೆ ಯಾವುದೇ ಹೊಸ ಸಿಮ್ ಕಾರ್ಡ್ ಹಾಕಿದಾಗ, ಅದು ತಕ್ಷಣವೇ ಆ್ಯಕ್ಟಿವೇಟ್ ಆಗುತ್ತದೆ.

3. ಆ್ಯಕ್ಟಿವೇಟ್ ಆದ ತಕ್ಷಣ, ದೂರುದಾರರಿಗೆ ಮತ್ತು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ಬರುತ್ತದೆ.

4. ಸಂದೇಶದಲ್ಲಿ ಹೊಸ ಸಿಮ್ ಸಂಖ್ಯೆ ಮತ್ತು ಮೊಬೈಲ್ ಇರುವ ಲೊಕೇಶನ್ ಕೂಡ ತಿಳಿಯುತ್ತದೆ.

5. ಈ ಮಾಹಿತಿಯನ್ನು ಆಧರಿಸಿ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಮೊಬೈಲ್ ವಶಪಡಿಸಿಕೊಳ್ಳುತ್ತಾರೆ.

ಈ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ, ಬೆಂಗಳೂರು ಪೊಲೀಸರು ನಗರದಾದ್ಯಂತ ಕಳುವಾಗಿದ್ದ ಸಾವಿರಾರು ಮೊಬೈಲ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪ್ರದರ್ಶನಕ್ಕಿಟ್ಟು, ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

Read More
Next Story