Mangalore Bank Robbery | ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿ ಯತ್ನ; ಆರೋಪಿಗೆ ಗುಂಡೇಟು
x
ಪ್ರಾತಿನಿಧಿಕ ಚಿತ್ರ

Mangalore Bank Robbery | ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿ ಯತ್ನ; ಆರೋಪಿಗೆ ಗುಂಡೇಟು

ದರೋಡೆಕೋರರನ್ನು ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿ ಕಣ್ಣನ್ ಮಣಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ


ಮಂಗಳೂರಿನ ಉಲ್ಲಾಳದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಚಿನ್ನಾಭರಣ, ನಗದು ದರೋಡೆ ಮಾಡಿದ್ದ ಪ್ರಕರಣದ ಸ್ಥಳ ಮಹಜರು ವೇಳೆ ಪ್ರಮುಖ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ಹಿಡಿದ ಘಟನೆ ಮಂಗಳವಾರ ನಡೆದಿದೆ.

ಬಂಧಿತ ಮೂವರು ದರೋಡೆಕೋರರನ್ನು ಮಂಗಳವಾರ ಸಂಜೆ 4.20 ರ ಸುಮಾರಿಗೆ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿ ಕಣ್ಣನ್ ಮಣಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಸೋಮವಾರ ತಮಿಳುನಾಡಿನ ತಿರುವನ್ವೇಲಿ ಬಳಿ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

ಬಂಧಿತರನ್ನು ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿ ಎಂದು ಗುರುತಿಸಲಾಗಿದೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿರುವ ತಲಪಾಡಿ ಅಲಂಕಾರು ಗುಡ್ಡ ಬಳಿ ಸ್ಥಳ ಮಹಜರು ನಡೆಸುತ್ತಿದ್ದಾಗ ಆರೋಪಿ ಕಣ್ಣನ್‌ ಮಣಿ ಸಿಸಿಬಿ ಸಿಬ್ಬಂದಿಗಳಾದ ನಿತಿನ್ ಹಾಗೂ ಅಂಜನಪ್ಪ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಇನ್‌ಸ್ಪೆಕ್ಟರ್‌ ರಫೀಕ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡಿರುವ ಆರೋಪಿಯನ್ನು ದೇರಳಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆಯಲ್ಲಿ ಉಲ್ಲಾಳ ಇನ್ಸ್ ಪೆಕ್ಟರ್ ಬಾಲಕೃಷ್ಣ, ಸಿಬ್ಬಂದಿಗಳಾದ ನಿತಿನ್ ಹಾಗೂ ಅಂಜನಪ್ಪ ಅವರಿಗೆ ಗಾಯಗಳಾಗಿವೆ.

ಜ.17 ರಂದು ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ನುಗ್ಗಿದ್ದ ದರೋಡೆಕೋರರು ಹಣ ಹಾಗೂ ಚಿನ್ನದೊಂದಿಗೆ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿದ್ದರು.

ಮುಂಬೈ ಗ್ಯಾಂಗ್‌ಗೆ ಸೇರಿದವರು

ಆರೋಪಿಗಳು ತಮಿಳುನಾಡು ಹಾಗೂ ಕೇರಳದವರಾಗಿದ್ದರೂ ಮುಂಬೈ ಕುಖ್ಯಾತ ಧಾರಾವಿ ಗ್ಯಾಂಗ್‌ನಲ್ಲಿ ಸಕ್ರಿಯರಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೋಟೆಕಾರ್ ಬ್ಯಾಂಕ್ ದರೋಡೆಯ ಪ್ರಮುಖ ಆರೋಪಿ ಮುರುಗನ್ ದರೋಡೆಗೆ ಯೋಜನೆ ಸಿದ್ಧಪಡಿಸಿಕೊಂಡೇ ಬಂದಿದ್ದ. ಈತ ಮುಂಬೈನ ಧಾರಾವಿಯ ಕುಖ್ಯಾತ ಗ್ಯಾಂಗಿಗೆ ಸೇರಿದ್ದು, ಈ ಹಿಂದೆ ಕೂಡ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

Read More
Next Story