
ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ದಾಳಿ; ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ
ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆಗ ಇನ್ ಸ್ಪೆಕ್ಟರ್ ಸೋಮಶೇಖರ್, ಆರೋಪಿ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ಶನಿವಾರ (ನ.8) ರಾತ್ರಿ ನಡೆದಿದೆ.
ಅಪಹರಣ ಮತ್ತು ಇಬ್ಬರ ಕೊಲೆ ಪ್ರಕರಣದಲ್ಲಿ ಹೆಬ್ಬಗೋಡಿ ಪೊಲೀಸರು ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದರು. ಶನಿವಾರ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸೋಮಶೇಖರ್ ಅವರು ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆಗ ಇನ್ ಸ್ಪೆಕ್ಟರ್ ಸೋಮಶೇಖರ್, ಆರೋಪಿ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ಮೇಲೆ ದಾಳಿ ಯತ್ನ
ಉದ್ಯಮಿ ಬಾಲಪ್ಪ ರೆಡ್ಡಿ ಹಾಗೂ ಮಾದೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ರವಿ ಪ್ರಸಾದ್ ರೆಡ್ಡಿಯನ್ನು ಬೊಮ್ಮಸಂದ್ರದ ಸ್ಮಶಾನದ ಬಳಿ ಸ್ಥಳ ಮಹಜರಿಗೆ ಕರೆದೊಯ್ದ ವೇಳ ಆರೋಪಯು ಹೆಡ್ ಕಾನ್ಸ್‌ಟೇಬಲ್ ಅಶೋಕ್ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಪೊಲೀಸರು ಎಚ್ಚರಿಕೆ ನೀಡಿದರೂ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು.
ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣದ ಹಿನ್ನೆಲೆ
ನ. 6ರಂದು ಉದ್ಯಮಿ ಬಾಲಪ್ಪ ರೆಡ್ಡಿಯನ್ನು ಅಪಹರಣ ಮಾಡಿ, ಹಣ ನೀಡದ ಹಿನ್ನೆಲೆಯಲ್ಲಿ ಕುತ್ತಿಗೆ ಸೀಳಿ ಕೊಲೆ ಮಾಡಿದ ಆರೋಪ ರವಿ ಪ್ರಸಾದ್ ರೆಡ್ಡಿ ಮೇಲಿದೆ. ಅದಕ್ಕೂ ಮೊದಲು ನ. 4ರಂದು ಮಾದೇಶ್ ಎಂಬುವವರನ್ನೂ ಇದೇ ರೀತಿ ಕೊಲೆ ಮಾಡಿದ್ದ.
ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದಾಗ ಘಟನೆ ನಡೆದಿದೆ.
ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

