Police disrupt religious practices on the coast: BJP MLAs outraged
x

ವಿಧಾನಸಭಾ ಅಧಿವೇಶನ 

ಧಾರ್ಮಿಕ ಆಚರಣೆಗೆ ಕರಾವಳಿಯಲ್ಲಿ ಪೊಲೀಸರಿಂದ ತೊಂದರೆ; ಬಿಜೆಪಿ ಶಾಸಕರ ಆಕ್ರೋಶ

“ಕೃಷ್ಣ ಜನ್ಮಾಷ್ಟಮಿಯ ದಿನ ಪೊಲೀಸರಿಂದ ಸೌಂಡ್ ಸಿಸ್ಟಂ ವಶಪಡಿಸಿಕೊಳ್ಳಲಾಗಿದೆ. ರಾತ್ರಿ 10.30 ನಂತರ ಕಾರ್ಯಕ್ರಮಕ್ಕೆ ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಮಾಡಲಾಗುತ್ತಿದೆ” ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.


ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಯಕ್ಷಗಾನ, ಕೋಲಾಟ, ಹುಲಿವೇಶ, ಶಾರದಾ ಮಹೋತ್ಸವ, ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಸಂದರ್ಭಗಳಲ್ಲಿ ಪೊಲೀಸರು ತಡೆಯೊಡ್ಡುತ್ತಿರುವ ಕುರಿತು ಸದನದಲ್ಲಿ ತೀವ್ರ ಚರ್ಚೆ ನಡೆಯಿತು. ಹಬ್ಬ-ಹರಿದಿನ, ಧಾರ್ಮಿಕ ಆಚರಣೆ ವೇಳೆ ಪೊಲೀಸರ ನಡೆಗೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು, “ಕೃಷ್ಣ ಜನ್ಮಾಷ್ಟಮಿ ದಿನ ಪೊಲೀಸರು ಸೌಂಡ್ ಸಿಸ್ಟಂ ವಶಪಡಿಸಿಕೊಳ್ಳಲಾಗಿದೆ. ರಾತ್ರಿ 10.30 ನಂತರ ಕಾರ್ಯಕ್ರಮಕ್ಕೆ ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯರು, “ದೇಶದಲ್ಲಿ ಕಾನೂನು ಹಾಗೂ ಸಂಪ್ರದಾಯ ಎರಡೂ ಮುಖ್ಯ. ಕಾನೂನು ಮೀರಬಾರದು, ಸಂಪ್ರದಾಯ ಮುರಿಯಲೂ ಆಗುವುದಿಲ್ಲ. ಎಲ್ಲಾ ಧರ್ಮಗಳ ಹಬ್ಬಗಳು ರಾತ್ರಿ ವೇಳೆಯಲ್ಲೇ ನಡೆಯುತ್ತವೆ” ಎಂದು ವಾದಿಸಿದರು.

ಅನವಶ್ಯಕ ಭದ್ರತೆ ಏಕೆ?

ಪ್ರತಿಪಕ್ಷದ ನಾಯಕ ಆರ್‌. ಅಶೋಕ್ ಮಾತನಾಡಿ,“ಕೋಲಾ ಕಾರ್ಯಕ್ರಮಗಳು ರಾತ್ರಿ ವೇಳೆಯಲ್ಲೇ ಆರಂಭವಾಗುತ್ತವೆ. ಗಣೇಶ ಹಬ್ಬದ ಸಮಯದಲ್ಲಿ ಅನವಶ್ಯಕ ಪೊಲೀಸ್ ಭದ್ರತೆ ಏಕೆ?, ಈಚೆಗೆ ನಾಗಮಂಗಲದಲ್ಲಿ ನಮ್ಮ ಜೊತೆ ಗಣೇಶನನ್ನೂ ಬಂಧಿಸಿದ್ದರು. ಈ ಬಾರಿ ಹಾಗೆ ಮಾಡಬೇಡಿ” ಎಂದರು.

ಶಾಲೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ

“ಕಾರ್ಯಕ್ರಮ ಮಾಡಿದರೆ ಪೊಲೀಸರು ಬಂದು ಸೌಂಡ್ ಬಂದ್ ಮಾಡುತ್ತಾರೆ. ವಶಪಡಿಸಿಕೊಂಡು ಠಾಣೆಗೆ ಕರೆದೊಯ್ಯುತ್ತಾರೆ” ಎಂದು ಶಾಸಕ ಭರತ್‌ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ. ಬಿಇಒ ತಡೆಯುತ್ತಿದ್ದಾರೆ. ಸರ್ಕಾರ ತಕ್ಷಣವೇ ಅನುಮತಿ ನೀಡಬೇಕು” ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯರು, “ನಿಮ್ಮ ಜಿಲ್ಲೆಯಲ್ಲಿ ಶಾಂತಿ ಸಮಸ್ಯೆಯಿದೆ. ಅದಕ್ಕಾಗಿಯೇ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ” ಎಂದು ತಿರುಗೇಟು ನೀಡಿದರು.

Read More
Next Story