Gold Smuggling Case | ಚಿನ್ನ ಕಳ್ಳಸಾಗಣೆ ಪ್ರಕರಣ;  ಶೀಘ್ರದಲ್ಲೇ  ರನ್ಯಾ ರಾವ್‌ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ತನಿಖೆ
x

Gold Smuggling Case | ಚಿನ್ನ ಕಳ್ಳಸಾಗಣೆ ಪ್ರಕರಣ; ಶೀಘ್ರದಲ್ಲೇ ರನ್ಯಾ ರಾವ್‌ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ತನಿಖೆ

ನಟಿ ರನ್ಯಾ ರಾವ್ ಅವರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಒದಗಿಸಲು ಪ್ರಭಾವ ಬೀರಿದ ಹಾಗೂ ಪೊಲೀಸರ ಕರ್ತವ್ಯ ಲೋಪದ ಆರೋಪದ ಮೇಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಗೃಹ ಇಲಾಖೆ ಆದೇಶಿಸಿದೆ.


ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡಿ ಸಿಕ್ಕಿಬಿದ್ದ ನಟಿ ರನ್ಯಾರಾವ್ ಪ್ರಕರಣದಲ್ಲಿ ಪೊಲೀಸರ ಕರ್ತವ್ಯ ಲೋಪದ ಕುರಿತು ಕೇಳಿಬಂದಿರುವ ಗಂಭೀರ ಆರೋಪದ ಕುರಿತ ತನಿಖೆಯನ್ನು ಸಿಐಡಿಗೆ ವಹಿಸಿ ಗೃಹ ಇಲಾಖೆ ಆದೇಶಿಸಿದೆ.

ನಟಿ ರನ್ಯಾ ರಾವ್ ಅವರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವುದೇ ತಪಾಸಣೆ ಇಲ್ಲದಂತೆ ಹೊರಬರುತ್ತಿದ್ದರು. ಶಿಷ್ಟಾಚಾರದಂತೆ ಪೊಲೀಸರೇ ಭದ್ರತೆ ಒದಗಿಸಿದ್ದರು. ಚಿನ್ನ ಕಳ್ಳಸಾಗಾಣಿಕೆಯಲ್ಲಿ ನಿರಂತರವಾಗಿ ಭಾಗಿಯಾಗಿದ್ದರೂ ಅದನ್ನು ಕಂಡುಕೊಳ್ಳುವಲ್ಲಿ ಪೊಲೀಸ್‌ ಸಿಬ್ಬಂದಿ ವಿಫಲರಾಗಿದ್ದು, ಕರ್ತವ್ಯ ಲೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಇಲಾಖೆ ಮಂಗಳವಾರ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಮಧ್ಯೆ, ನಟಿ ರನ್ಯಾ ರಾವ್‌ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವಾಗ ಪದೇ ಪದೇ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸುತ್ತಿದ್ದರು. ಹಾಗಾಗಿ ಅವರಿಗೆ ಶಿಷ್ಟಾಚಾರದಂತೆ ಭದ್ರತೆ ಸಿಗುತ್ತಿತ್ತು. ಹೀಗಾಗಿ ಈ ಪ್ರಕರಣದಲ್ಲಿ ರಾಮಚಂದ್ರರಾವ್ ಪಾತ್ರದ ಕುರಿತು ತನಿಖೆ ನಡೆಸಲು ಗೃಹ ಇಲಾಖೆ ಸೂಚಿಸಿದೆ.

ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಸಂಬಂಧ ಸೋಮವಾರವಷ್ಟೇ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜು ಎಂಬಾತನನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು.

ಈ ಮಧ್ಯೆ, ಬಜೆಟ್ ಅಧಿವೇಶನದಲ್ಲೂ ರನ್ಯಾ ರಾವ್ ಪ್ರಕರಣ ಕುರಿತು ತೀವ್ರ ಚರ್ಚೆಗೆ ಗ್ರಾಸವಾಗಿ, ನಟಿಯ ಹಿಂದಿರುವ ಸಚಿವರ ಹೆಸರು ಬಹಿರಂಗಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿತ್ತು.

ಶಿಷ್ಟಾಚಾರ ದುರ್ಬಳಕೆ; ವರದಿ ಸಲ್ಲಿಕೆ

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ರನ್ಯಾ ರಾವ್ ಅವರಿಗೆ ನೀಡಿದ ಶಿಷ್ಟಾಚಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ಡಿಸಿಪಿ ಸುಚಿತ್ ವರದಿ ಸಲ್ಲಿಸಿದ್ದಾರೆ.

ರನ್ಯಾ ಬಂಧನದ ದಿನ ಶಿಷ್ಟಾಚಾರದಂತೆ ಭದ್ರತೆ ಒದಗಿಸಿದ್ದ ಕಾನ್‌ ಸ್ಟೆಬಲ್‌ ಬಸವರಾಜ್ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಟಿ ರನ್ಯಾ ರಾವ್ ಅವರು ದುಬೈನಿಂದ ವಾಪಸ್ ಬರುವಾಗ ಕಾನ್ಸ್ಟೇಬಲ್ ಬಸವರಾಜ್ ಅವರಿಗೆ ಕರೆ ಮಾಡಿ, ಟರ್ಮಿನಲ್-1ಕ್ಕೆ ಬರುವಂತೆ ತಿಳಿಸಿದ್ದರು. ಈ ವೇಳೆ ಕಾನ್‌ಸ್ಟೆಬಲ್‌ ಬಸವರಾಜ್ ಅವರು, ಬೇರೆ ಅಧಿಕಾರಿಯನ್ನು ಬರಮಾಡಿಕೊಳ್ಳಬೇಕು, ಹಾಗಾಗಿ ಬರಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರನ್ಯಾ ರಾವ್ ಅವರು, ನೀವೇ ಬರಬೇಕು. ಇಲ್ಲವಾದರೆ ಅಪ್ಪಾಜಿಗೆ ಹೇಳುತ್ತೇನೆ ಎಂದು ಬೆದರಿಸಿದ್ದರು ಎಂದು ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Read More
Next Story