ಪರಪ್ಪನ ಅಗ್ರಹಾರದಿಂದ ದರ್ಶನ್ ಸ್ಥಳಾಂತರ| ನ್ಯಾಯಾಲಯ ನಿರ್ದೇಶನದಂತೆ ತೀರ್ಮಾನ
ಚೀಫ್ ಸೂಪರಿಂಟೆಂಡೆಂಟ್ ಸೇರಿ ಇನ್ನೋರ್ವ ಅಧೀಕ್ಷಕರನ್ನೂ ಅಮಾನತು ಮಾಡಿದ್ದೇವೆ. ಇನ್ನೂ ಯಾರೆಲ್ಲಾ ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಅಮಾನತು ಮಾಡಲಾಗುವದು. ತನಿಖೆ ಇನ್ನೂ ಮುಂದುವರೆದಿದೆ
ರೇಣುಕಾಸ್ವಾಮಿ ಕೊಲೆ ಆರೋಪಿ ಚಿತ್ರ ನಟ ದರ್ಶನ್‌ನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ದರ್ಶನ್ ಜೈಲಿನಲ್ಲಿ ಐಷಾರಾಮವಾಗಿರುವುದು ಆತನ ಚಿತ್ರ ಮತ್ತು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿತ್ತು.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʻʻಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದುʼʼ ಎಂದು ತಿಳಿಸಿದ್ದಾರೆ.
ನ್ಯಾಯಾಲಯ ನಿರ್ದೇಶನದ ಮೇರೆಗೆ ಸ್ಥಳಾಂತರ: ಗೃಹ ಸಚಿವ ಜಿ.ಪರಮೇಶ್ವರ್
ಈ ಬಗ್ಗೆ ಸದಾಶಿವನಗರ ನಿವಾಸದ ಬಳಿ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ʻʻಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡುವುದಕ್ಕೆ ಆಗುವುದಿಲ್ಲ. ನ್ಯಾಯಾಲಯ ನಿರ್ದೇಶನದ ಮೇರೆಗೆ ಸ್ಥಳಾಂತರ ಆಗಲಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಆಗಲಿದೆ" ಎಂದು ತಿಳಿಸಿದರು.
ʻʻಜೈಲು ಪ್ರಾಧಿಕಾರವು ನ್ಯಾಯಾಲಯದ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಎರಡ್ಮೂರು ದಿನಗಳಲ್ಲಿ ಆಗಲಿದೆ. ನಾನು ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದೆ. ಕೆಲವು ಲೋಪಗಳು ನಮಗೆ ಕಂಡು ಬಂದವು. ವಿಲ್ಸನ್ ಗಾರ್ಡನ್ ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ. ಅದು ಸಿಸಿಟಿವಿಯಲ್ಲೂ ದಾಖಲಾಗಿದೆʼʼ ಎಂದರು.
ʻʻಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು, ಚೀಫ್ ಸೂಪರಿಂಟೆಂಡೆಂಟ್ ಸೇರಿ ಇನ್ನೋರ್ವ ಅಧೀಕ್ಷಕರನ್ನೂ ಅಮಾನತು ಮಾಡಿದ್ದೇವೆ. ಇನ್ನೂ ಯಾರೆಲ್ಲಾ ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಅಮಾನತು ಮಾಡಲಾಗುವದು. ತನಿಖೆ ಇನ್ನೂ ಮುಂದುವರೆದಿದೆ. ಮುಂದಿನ ತನಿಖೆಗಾಗಿ ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುತ್ತೇವೆʼʼ ಎಂದು ಹೇಳಿದರು.