
ಸಾಂದರ್ಭಿಕ ಚಿತ್ರ
ಪೊಲೀಸ್ ಹುದ್ದೆ ಭರ್ತಿ ಶೀಘ್ರ; ಸಾಮಾನ್ಯ- 27, ಒಬಿಸಿ, ಎಸ್‌ಸಿ/ಎಸ್‌ಟಿಗೆ 30 ವರ್ಷ ವಯೋಮಿತಿ?
2,000 ಕ್ಕೂ ಹೆಚ್ಚು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕ ಅಧಿಸೂಚನೆಗೆ ಸಾಮಾನ್ಯ ವರ್ಗಕ್ಕೆ 25,ಒಬಿಸಿ, ಎಸ್‌ಸಿ/ಎಸ್‌ಟಿ ವರ್ಗಕ್ಕೆ 27 ವರ್ಷ ನಿಗದಿಪಡಿಸಿ ನೇಮಕ ನಡೆಸಲಾಗುತ್ತಿತ್ತು. ಈ ಬಾರಿ ವಯೋಮಿತಿ ಸಡಿಲಿಕೆಯಾಗಲಿದೆ.
ಆದಷ್ಟು ಬೇಗ ಹೊಸ ನೇಮಕಾತಿಗಳನ್ನು ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿರುವ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆ ಸಿಹಿ ಸುದ್ದಿ ನೀಡಿದ್ದು, 2,000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಸಲು ಸಿದ್ದತೆ ನಡೆಸಿದೆ.
ʼಕರ್ನಾಟಕ ರಾಜ್ಯ ಮೀಸಲು ಪೊಲೀಸ್ʼ ಪಡೆಯ ವಿವಿಧ ಬೆಟಾಲಿಯನ್‌ಗಳಲ್ಲಿ ಖಾಲಿ ಇರುವ 2,032 ಹುದ್ದೆಗಳನ್ನು ಪಟ್ಟಿ ಮಾಡಿದ್ದು, ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರ ವಯೋಮಿತಿ ಕುರಿತು ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತಿದೆ.
ಯಾವ ಘಟಕಕ್ಕೆ ಎಷ್ಟು ಹುದ್ದೆ?
ಕಲ್ಯಾಣ ಕರ್ನಾಟಕೇತರ ವೃಂದದಲ್ಲಿ ಬೆಂಗಳೂರು 1ನೇ ಪಡೆ- 134, ಬೆಳಗಾವಿ 2ನೇ ಪಡೆ- 140, ಬೆಂಗಳೂರು 3ನೇ ಪಡೆ- 113, ಬೆಂಗಳೂರು 4ನೇ ಪಡೆ- 134, ಮೈಸೂರು 5ನೇ ಪಡೆ- 103, ಮಂಗಳೂರು 7ನೇ ಪಡೆ- 335, ಶಿವಮೊಗ್ಗ 8ನೇ ಪಡೆ- 120, ಬೆಂಗಳೂರು 9ನೇ ಪಡೆ- 75, ಹಾಸನ 11ನೇ ಪಡೆ- 135, ತಮಕೂರು 12ನೇ ಪಡೆ - 135 ಹುದ್ದೆಗಳನ್ನು ಪುರುಷರಿಗೆ ಹಾಗೂ ಬೆಳಗಾವಿ 2ನೇ ಪಡೆ- 23, ಬೆಂಗಳೂರು 4ನೇ ಪಡೆ- 28, ಮೈಸೂರು 5ನೇ ಪಡೆ- 25 ಹುದ್ದೆಗಳು ಮಹಿಳೆಯರಿಗೆ ಮೀಸಲಿರಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದದಲ್ಲಿ ಬೆಂಗಳೂರು 1ನೇ ಪಡೆ- 33, ಬೆಂಗಳೂರು 3ನೇ ಪಡೆ - 34, ಬೆಂಗಳೂರು 4ನೇ ಪಡೆ - 33 ಹುದ್ದೆ, ಕಲಬುರಗಿ 6ನೇ ಪಡೆ- 180 ಹುದ್ದೆ, ಬೆಂಗಳೂರು 9ನೇ ಪಡೆ - 33 ಹುದ್ದೆಗಳು ಪುರುಷರಿಗೆ ಹಾಗೂ ಬೆಂಗಳೂರು 4ನೇ ಪಡೆ- 12 ಹುದ್ದೆ, ಕಲಬುರಗಿ 6ನೇ ಪಡೆಗೆ - 41 ಹುದ್ದೆಗಳು ಮಹಿಳೆಯರಿಗೆ ಹಂಚಿಕೆ ಮಾಡಲಾಗಿದೆ. ಮುನಿರಾಬಾದ್‌ನಲ್ಲಿರುವ ಭಾರತ ಮೀಸಲು ಪಡೆಯಲ್ಲಿ ಪುರುಷರಿಗೆ 166 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.
ವಯೋಮಿತಿ ಹೆಚ್ಚಳದ ಭರವಸೆ
ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಹೊರಡಿಸುವ ನೇಮಕ ಅಧಿಸೂಚನೆಗೆ ಸಾಮನ್ಯ ವರ್ಗಕ್ಕೆ 25 ವರ್ಷ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ 27 ವರ್ಷ ನಿಗದಿಪಡಿಸಿ ನೇಮಕ ನಡೆಸುತ್ತಿತ್ತು. ಆದರೆ ಕೋವಿಡ್ ಸಮಯದಲ್ಲಿ ಸರ್ಕಾರ ಯಾವುದೇ ನೇಮಕಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ. ಆದ್ದರಿಂದ ವಿದ್ಯಾರ್ಥಿ ಸಂಘಟನೆಗಳು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಬೇಕು. ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸಾಮನ್ಯ ವರ್ಗಕ್ಕೆ 30 ವರ್ಷ ಹಾಗೂ ಒಬಿಸಿ, ಎಸ್ಸಿ ಹಾಗೂ ಎಸ್‌ಟಿ ವರ್ಗಕ್ಕೆ 35 ವರ್ಷ ನಿಗದಿಪಡಿಸಿವೆ. ಆದ್ದರಿಂದ ರಾಜ್ಯ ಸರ್ಕಾರ ವಯೋಮಿತಿ ಹೆಚ್ಚಿಸಬೇಕೆಂದು ಸಿಎಂ, ಗೃಹ ಸಚಿವರಿಗೆ ಮನವಿ ಮಾಡಲಾಗಿತ್ತು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಸರ್ಕಾರ, ವಿವಿಧ ರಾಜ್ಯಗಳಲ್ಲಿರುವ ವಯೋಮಿತಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ 27 ವರ್ಷ ಹಾಗೂ ಒಬಿಸಿ, ಎಸ್ಸಿ ಮತ್ತು ಎಸ್‌ಟಿ ವರ್ಗಗಳಿಗೆ 30 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ
ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 1,11,330 ಹುದ್ದೆಗಳು ಮಂಜೂರಾಗಿವೆ. ಆದರೆ ಆ ಪೈಕಿ 18,581 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಉಳಿದ ಸಿಬ್ಬಂದಿಗಳ ಮೇಲೆ ಅಧಿಕ ಕೆಲಸದ ಒತ್ತಡ ಹೆಚ್ಚಾಗಿತ್ತಿದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳ ಪೈಕಿ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 2,032 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದೆ. ಈಗಾಗಲೇ 545 ಹಾಗೂ 402 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಿ, ನೇಮಕಾತಿ ಆದೇಶ ನೀಡಿದ್ದು, 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗೆ ಕಳಿಸಲಾಗಿದೆ. ಇದೀಗ ಮತ್ತೊಮ್ಮೆ ಸಿವಿಲ್, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಫ್ ವಿಭಾಗಗಳಲ್ಲಿ ಖಾಲಿ ಇರುವ ಸಬ್ ಇನ್ಸ್‌ಪೆಕ್ಟರ್ ಪೈಕಿ 600 ಪಿಎಸ್‌ಐ ಹುದ್ದೆಗಳಿಗೆ ಎರಡು ಹಂತದಲ್ಲಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇತ್ತೀಚೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದರು.
ಶೀಘ್ರ ಅಧಿಸೂಚನೆ ಹೊರಡಿಸಲಿ
ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ರಂಜಿತ್ ಕುಮಾರ್ ಕೆ. ಆರ್. ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ ನಂತರ ಇದೀಗ ವಿವಿಧ ಇಲಾಖೆಗಳು ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸುತ್ತಿರುವುದು ಸಂತಸದ ಸಂಗತಿ. ಸರ್ಕಾರ ವಿಳಂಬ ಮಾಡದೆ ಶೀಘ್ರವಾಗಿ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು ಹಾಗೂ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು" ಎಂದು ತಿಳಿಸಿದರು.
ಪರೀಕ್ಷೆ ಪಾರದರ್ಶಕವಾಗಿರಲಿ
"ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಕನಸಿನೊಂದಿಗೆ ಹಲವು ವರ್ಷಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಸರ್ಕಾರ ಇದೀಗ ನೇಮಕಾತಿಗಳನ್ನು ನಡೆಸಲು ಆದೇಶ ಹೊರಡಿಸಿದ್ದು, ಇಲಾಖೆಯು ಸಿದ್ದತೆ ನಡೆಸುತ್ತಿದೆ. ಆದರೆ 545 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಸೇರಿದಂತೆ ವಿವಿಧ ಇಲಾಖೆಗಳ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಸರ್ಕಾರ ಎಲ್ಲಾ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸಬೇಕು ಹಾಗೂ ಅರ್ಹರಿಗೆ ಹುದ್ದೆಗಳು ದೊರೆಯುವಂತಾಗಬೇಕು" ಎಂದು ಶಿವಮೊಗ್ಗದ ಲಕ್ಷ್ಮೀ ಪ್ರತಾಪ್ ಅಭಿಪ್ರಾಯಪಟ್ಟಿದ್ದಾರೆ.