Police brutality against woman; Home Minister instructs to file report
x

ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಮಹಿಳೆ ಮೇಲೆ ಪೊಲೀಸರಿಂದ ದೌರ್ಜನ್ಯ; ವರದಿ ನೀಡುವಂತೆ ಗೃಹ ಸಚಿವ ಸೂಚನೆ

ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಶೌಚಾಲಯಕ್ಕೆ ತೆರಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮಹಿಳೆ ಆರೋಪ ಮಾಡಿದ್ದರು.


Click the Play button to hear this message in audio format

ಮನೆ ಕೆಲಸದ ಮಹಿಳೆಯನ್ನು ಅಕ್ರಮ ಬಂಧನದಲ್ಲಿಟ್ಟು ವರ್ತೂರು ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯು ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಏನಿದು ಘಟನೆ ?

ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರು ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನ ಹಾಗೂ ಹಣ ಕಳ್ಳತನವಾಗಿತ್ತು. ಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಲೀಕರು ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಶೌಚಾಲಯಕ್ಕೆ ತೆರಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮಹಿಳೆ ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಸಿರುವ ರಾಜ್ಯ ಮಹಿಳಾ ಆಯೋಗ, ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈಟ್‌ಫೀಲ್ಡ್‌ ಉಪ ವಿಭಾಗದ ಡಿಸಿಪಿಗೆ ಪತ್ರ ಬರೆದಿದ್ದಾರೆ.

ಹೈಕಮಾಂಡ್‌ ತೀರ್ಮಾನ ಅಂತಿಮ

ಏನೇ ಆದರೂ ಹೈಕಮಾಂಡ್ ತೀರ್ಮಾನ ಎಂಬುದನ್ನು ನಾನು ಹೇಳಿದ್ದೇನೆ. ಕಾಂಗ್ರೆಸ್ ಶಾಸಕರೆಲ್ಲರೂ ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇವೆ. ಅಲ್ಲಿ ಏನು ತೀರ್ಮಾನ ಆಗುತ್ತದೆಯೋ, ಅದನ್ನು ಪಾಲಿಸಿಕೊಂಡು ಹೋಗುತ್ತೇವೆ. ಯಾರು ಪಾಲಿಸುವುದಿಲ್ಲ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ. ಇದು ಮೊದಲಿನಿಂದಲೂ‌ ನಡೆದುಕೊಂಡು ಬಂದಿರುವ ಪದ್ಧತಿ. ಹೈಕಮಾಂಡ್ ಏನು ಹೇಳುತ್ತಾರೆಯೋ ಅದನ್ನು ನಾನು ಪಾಲಿಸುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಸರಿಯಾಗಿದೆ. ಈ ಮಾತನ್ನು ಅವರು ಮೊದಲಿನಿಂದಲೂ ಹೇಳಿದ್ದಾರೆ. ಈಗಲೂ ಅದೇ ಮಾತನ್ನು ಹೇಳಿದ್ದಾರೆ‌ ಎಂದು ಸಮರ್ಥಿಸಿದರು.

ಅಗತ್ಯವಿದ್ದರೆ ದೆಹಲಿಗೆ ಪ್ರಯಾಣ

ಈ ಹಿಂದೆ ಮುಖ್ಯಮಂತ್ರಿಯವರು ತುಮಕೂರಿಗೆ ಬಂದಾಗ ಹಲವು ಬಾರಿ ಮಾಜಿ ಸಚಿವ ಕೆ.ಎನ್.ರಾಜಣ್ಣನವರ ಮನೆಗೆ ಊಟಕ್ಕೆ ಹೋಗಿದ್ದಾರೆ. ಈಗಲೂ ನಾವೆಲ್ಲ ಹೋಗುತ್ತೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ದೆಹಲಿಗೆ ಯಾರು ಹೋಗುತ್ತಾರೆ ಎಂಬುದು ಗೊತ್ತಿಲ್ಲ. ನಾನು ದೆಹಲಿಗೆ ಹೋಗುವ ಬಗ್ಗೆ ಯೋಚನೆ ಮಾಡಿಲ್ಲ. ಅವಶ್ಯಕತೆಯಿದ್ದರೆ ಹೋಗುತ್ತೇನೆ ಎಂದು ಹೇಳಿದರು.

ಆಡಳಿತಾತ್ಮಕ ಉದ್ದೇಶದಿಂದ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆ ಹೊರತುಪಡಿಸಿ, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ನಿಂತಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ನಿರ್ದಿಷ್ಟ ಸಮಯವಿಲ್ಲ. ಅಗತ್ಯತೆ ಮೇರೆಗೆ ನಿರಂತರವಾಗಿ ವರ್ಗಾವಣೆ ನಡೆಯುತ್ತಿರುತ್ತದೆ ಎಂದರು.

ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಅವರ ಜೊತೆ ಮಾತನಾಡಿದ್ದು, ಆದಷ್ಟು ಬೇಗ ಕಬ್ಬು ಬೆಲೆ ನಿಯಂತ್ರಣ ಮತ್ತು ಬೆಲೆ ತೀರ್ಮಾನ ಮಾಡಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಮಂಗಳವಾರ(ನ.3) ಪ್ರತಿಭಟನೆ ವೇಳೆ ರೈತರೊಬ್ಬರು ವಿಷ ಕುಡಿದು, ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ರಕ್ಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ತಿಳಿಸಿದರು.

Read More
Next Story