
ಗುಂಡ್ಲುಪೇಟೆ ಪಶು ಆಸ್ಪತ್ರೆಯಲ್ಲಿ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿರುವುದು
ಬಂಡಿಪುರ ಅಂಚಿನಲ್ಲಿ ಕೋತಿಗಳಿಗೂ "ವಿಷ"ಮ ಪರಿಸ್ಥಿತಿ; ʼಜಮೀನುʼದಾರರೇ ಕಾರಣ?
ಇತ್ತೀಚೆಗೆ 18 ಕೋತಿಗಳಿಗಳನ್ನು ವಿಷವಿಕ್ಕಿ ಕೊಲ್ಲಲಾಗಿತ್ತು. ಪರವೂರಿನಿಂದ ಬಂದು ಜಮೀನು ಖರೀದಿಸಿ ತೋಟ ಮಾಡಿಕೊಂಡವರು ತಮ್ಮ ತೋಟಗಳಿಗೆ ಕೋತಿಗಳು ದಾಳಿ ಮಾಡುವ ಕಾರಣಕ್ಕೆ ದುಷ್ಕೃತ್ಯ ಮಾಡಿರಬಹುದೇ?
ಮಾನವ-ಪ್ರಾಣಿ ಸಂಘರ್ಷದಲ್ಲಿ ವನ್ಯ ಜೀವಿಗಳಿಗಿದು ಕಾಲವಲ್ಲ ಎನ್ನುವ ಘಟ್ಟಕ್ಕೆ ಬಂದು ನಿಂತಿದೆ ಮನುಷ್ಯನ ವರ್ತನೆ.
ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಐದು ಹುಲಿಗಳನ್ನು ವಿಷವಿಟ್ಟು ಕೊಂದ ದುರ್ಘಟನೆ ಮಾಸುವ ಮುನ್ನವೇ 18 ಕೋತಿಗಳ ಮಾರಣ ಹೋಮವೇ ನಡೆದು ಹೋಗಿದೆ. ಇದೂ ಕೂಡ ವಿಷ ಪ್ರಾಶನದ ಪ್ರಕರಣ ಎಂಬ ಸತ್ಯ ಬಹಿರಂಗವಾದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವನ್ಯ ಜೀವಿಗಳನ್ನು ಹೀಗೆ ಕೊಲ್ಲುತ್ತಾ ಹೋದರೆ ಮುಂದೆ ಮನುಷ್ಯನೊಬ್ಬನೇ ಈ ಭೂಮಿಯಲ್ಲಿ ಬದುಕಲು ಸಾಧ್ಯವೇ..? ಮಾನವ ಏಕಿಷ್ಟು ಸ್ವಾರ್ಥಿ ಆಗುತ್ತಿದ್ದಾನೆ, ಈ ಘಟನೆಗಳಿಗೆಲ್ಲಾ ಕಡಿವಾಣ ಎಂದು ಎನ್ನುವ ಪ್ರಶ್ನೆಗಳೂ ಕೇಳಿ ಬರುತ್ತಿವೆ.
ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ-ಕಂದೇಗಾಲ ಗ್ರಾಮಗಳ ನಡುವಿನ ರಸ್ತೆ ಬದಿಯಲ್ಲಿ ಕೋತಿಗಳ ಶವಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದು ಹೋಗಲಾಗಿತ್ತು. ದಾರಿ ಹೋಕರು ಇದನ್ನು ಗಮನಿಸಿ ಚೀಲ ಬಿಚ್ಚಿ ನೋಡಿದಾಗ ಕೋತಿಗಳ 18 ಕೋತಿಗಳ ಮೃತ ದೇಹ ಮತ್ತು 2 ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೋತಿಗಳು ಕಂಡಿವೆ. ತಕ್ಷಣ ಸ್ಥಳೀಯರು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನ ಪ್ರದೇಶ ಇದಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತ ಕೋತಿಗಳ ದೇಹಗಳನ್ನು ಪಶು ಆಸ್ಪತ್ರೆಗೆ ಕಳಿಸಿದ್ದಾರೆ. ಪಶುವೈದ್ಯ ಡಾ. ಮಹೇಶ್ ಅವರು ಪ್ರಾಥಮಿಕ ತಪಾಸಣೆ ಮಾಡಿ ಕೋತಿಗಳಿಗೆ ವಿಷವಿಟ್ಟು ಕೊಲ್ಲಲಾಗಿದೆ ಎಂದು ದೃಢಪಡಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಮಾಡಿದ್ದರ ಅನ್ವಯ ವಲಯ ಅರಣ್ಯಾಧಿಕಾರಿ ಶಶಿಕುಮಾರ್ ಈಗಾಗಲೇ ಕೆಳ ಹಂತದ ಅಧಿಕಾರಿಗಳಿಗೆ ಸ್ಥಳೀಯ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು
ಈಗಾಗಲೇ ಆರ್ ಎಫ್ ಒ ಶಶಿಕುಮಾರ್, ಡಿಸಿಎಫ್ ಪ್ರಭಾಕರ್ ಸೇರಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ವಿಷವಿಟ್ಟು ಕೊಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದ ಬಳಿಕ ಕಂದೇಗಾಲ, ಕೊಡಸೋಗೆ, ತೆರಕಣಾಂಬಿ, ಗುಂಡ್ಲುಪೇಟೆ, ಬೇಗೂರು, ಕೋಡಿಹಳ್ಳಿ, ತ್ರಯಂಬಕಪುರ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಿಗುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲನೆ ಆರಂಭಿಸಿದ್ದಾರೆ. ಅಲ್ಲದೇ ಸ್ಥಳೀಯ ರೈತರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಕೋತಿಗಳು ಹೆಚ್ಚಾಗಿ ಕಂಡುಬರುವ ಸ್ಕಂದಗಿರಿ ಪಾರ್ವತಿ ದೇವಸ್ಥಾನದ ಸುತ್ತಲೂ ಈಗಾಗಲೇ ಪರಿಶೀಲನೆ ನಡೆದಿದೆ. ಶ್ವಾನದಳವನ್ನೂ ಬಳಸಿಕೊಂಡು ತನಿಖೆಯನ್ನು ಬಿರುಸಿನಿಂದ ನಡೆಸಲಾಗುತ್ತಿದೆ.
ಚಿಕಿತ್ಸೆ ಪಡೆಯುತ್ತಿವೆ ಎರಡು ಕೋತಿಗಳು
20 ಕೋತಿಗಳಲ್ಲಿ ಎರಡು ಕೋತಿಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡ ಪಶು ವೈದ್ಯರು ತಕ್ಷಣ ಅವುಗಳನ್ನು ಗುಂಡ್ಲುಪೇಟೆಯ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಎರಡೂ ಕೋತಿಗಳು ತುಸು ಚೇತರಿಕೆ ಕಂಡಿವೆ.
ಇನ್ನು ಡಾ.ಮಹೇಶ್ ಕುಮಾರ್ ಅವರು ಹೇಳುವಂತೆ ಮೃತ ಕೋತಿಗಳ ಮೈ ಬಣ್ಣ ನೀಲಿಯಾಗಿದ್ದು ವಿಷಪ್ರಾಶನದಿಂದಲೇ ದುರ್ಘಟನೆ ಆಗಿದೆ. ಈಗಾಗಲೇ ಎಲ್ಲಾ ಕೋತಿಗಳ ರಕ್ತದ ಮಾದರಿ, ದೇಹಗಳ ಕೆಲ ಭಾಗಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ಬಂದ ಬಳಿಕ ಯಾವ ವಿಷ ಸೇವನೆ ಮಾಡಿವೆ ಎನ್ನುವ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಹೊರಗಿನವರ ಕೈವಾಡದ ಶಂಕೆ..?
ಪ್ರಾಣಿ ಮತ್ತು ಮಾವನ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಹುಲಿ, ಚಿರತೆ, ಹಂದಿ ಮೊದಲಾದ ಪ್ರಾಣಿಗಳೊಂದಿಗೆ ಮನುಷ್ಯ ದೊಡ್ಡ ಮಟ್ಟದ ಸಂಘರ್ಷ ಮಾಡಿದ್ದರೂ ಕೋತಿಗಳೊಂದಿಗೆ ದೊಡ್ಡ ವೈರತ್ವ ಬೆಳೆದಿರಲಿಲ್ಲ. ಇವುಗಳನ್ನು ಪೂಜನೀಯ ಭಾವದಿಂದ ನೋಡುವ ಕಾರಣ ಸಾಯಿಸುವ ಮಟ್ಟಕ್ಕೆ ರೈತರು ಇಳಿದಿಲ್ಲ. ಹೆಚ್ಚೆಂದರೆ ಪಟಾಕಿ ಸಿಡಿಸಿ, ಚಾಟ್ ಬಿಲ್ ಗಳನ್ನು ಬಳಸಿ, ಕಲ್ಲುಗಳನ್ನು ಹೊಡೆದು ತಮ್ಮ ಜಮೀನು, ತೋಟದಿಂದ ಓಡಿಸುವ ಕೆಲಸ ಮಾಡುತ್ತಿದ್ದರು. ಆದರೆ, ವಿಷವಿಟ್ಟು ಕೊಲ್ಲುವ ಕೆಲಸ ಮಾಡುವುದಿಲ್ಲ.
ಆದರೆ, ಈಗ ಕೇರಳ ಮತ್ತು ಹೊರಗಿನಿಂದ ಬಂದವರು ಇಲ್ಲಿ ಜಮೀನುಗಳನ್ನು ತೆಗೆದುಕೊಂಡು ತೋಟ ಮಾಡಿಕೊಂಡಿದ್ದಾರೆ. ಇವರು ತಮ್ಮ ತೋಟಗಳಿಗೆ ಕೋತಿಗಳು ಹಾನಿ ಮಾಡುತ್ತಿವೆ ಎನ್ನುವ ಕಾರಣದಿಂದ ಹೀಗೆ ಮಾಡಿರಬಹುದು ಎನ್ನುವುದು ಸ್ಥಳೀಯರ ಆರೋಪ.
ನಮ್ಮ ಜನ ಹೀಗೆ ಮಾಡಿರಲು ಸಾಧ್ಯವಿಲ್ಲ
ಘಟನೆ ಸಂಬಂಧ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಅವರು, ನಮ್ಮ ಭಾಗದಲ್ಲಿ ಪ್ರಾಣಿಗಳು ತುಂಬಾ ಹಾನಿ ಮಾಡುತ್ತಿವೆ ಎನ್ನುವುದು ಸತ್ಯ. ಆದರೆ, ನಮ್ಮ ರೈತರು ವಿಷವಿಕ್ಕಿ ಕೊಲ್ಲುವ ಹಂತಕ್ಕೆ ಹೋಗುವುದಿಲ್ಲ. ಬೇರೆ ಎಲ್ಲಿಯೋ ಕೋತಿಗಳನ್ನು ಸಾಯಿಸಿ ಇಲ್ಲಿಗೆ ತಂದು ಹಾಕಿರಬಹುದು. ಮೊನ್ನೆಯಷ್ಟೇ ಕುರುಬರಹುಂಡಿ ಎನ್ನುವ ಗ್ರಾಮದಲ್ಲಿ ಕಾಡು ಆನೆಗಳು ಬಂದು ಸಾಕಷ್ಟು ಕೃಷಿ ಬೆಳೆ ನಾಶ ಮಾಡಿ ಹೋಗಿವೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹ ಮಾಡುತ್ತಾರೆಯೇ ಹೊರತು ಅವುಗಳನ್ನು ಕೊಲ್ಲುವ ನಿರ್ಧಾರ ಮಾಡುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಸತ್ಯ ಗೊತ್ತಾಗಲಿದೆ. ನಮ್ಮ ರೈತರು ಹೀಗೆ ಮಾಡಿರಲಾರರು ಎನ್ನುವ ವಿಶ್ವಾಸ ನನ್ನದು ಎಂದು ಅವರು ತಿಳಿಸಿದರು.
ಈ ಮೊದಲು ನಡೆದಿದ್ದ ದುಷ್ಕೃತ್ಯಗಳು
2024ರ ಜೂನ್ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ದ್ಯಾವನಹಳ್ಳಿ ಗ್ರಾಮದ ಬಳಿ ನಾಲ್ಕು ಮರಿಗಳು ಸೇರಿ ಬರೋಬ್ಬರಿ 34 ಕೋತಿಗಳ ಹತ್ಯೆಯಾಗಿತ್ತು. ಬಾಳೆ ಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧ ನೀಡಿ ಬಳಿಕ ಅವುಗಳ ತಲೆಗೆ ಬಲವಾದ ಪೆಟ್ಟು ನೀಡಿ ಕೊಲ್ಲಲಾಗಿತ್ತು. ಇದೇ ರೀತಿ 2021 ರಲ್ಲಿ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚೌಡನಹಳ್ಳಿಯಲ್ಲಿ 38 ಕೋತಿಗಳ ಹತ್ಯೆಯಾಗಿತ್ತು. ಈಗಿನಂತೆಯೇ ಆಗಲೂ ಕೋತಿಗಳಿಗೆ ವಿಷವಿಟ್ಟು, ಚೀಲದಲ್ಲಿ ತುಂಬಿ ರಸ್ತೆ ಬದಿಯಲ್ಲಿ ಬಿಡಾಡಲಾಗಿತ್ತು.
ಈ ಬಗ್ಗೆ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಹಾಸನ ಜಿಲ್ಲಾಧಿಕಾರಿ, ಅರಣ್ಯ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದನ್ನು ಗಮನಿಸಬಹುದು. ಇದರ ಜೊತೆಗೆ ಛತ್ತೀಸ್ ಗಢದ ಬೆಮೆತಾರ್ ಜಿಲ್ಲೆಯಲ್ಲಿ 2024ರ ಆಗಸ್ಟ್ ತಿಂಗಳಿನಲ್ಲಿ 18 ಕೋತಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ರೈತರು ತಮ್ಮ ಬೆಳೆಗಳಿಗೆ ಕೋತಿಗಳಿಂದ ಹಾನಿಯಾಗುತ್ತಿದೆ, ಅಪಾರ ಪ್ರಮಾಣದ ನಷ್ಟವಾಗುತ್ತಿದೆ ಎಂದು ಗುಂಡು ಹಾರಿಸಿ ಕೋತಿಗಳ ಪ್ರಾಣ ತೆಗೆದಿದ್ದರು.
ಘಟನೆ ಸಂಬಂಧ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದರು. ಇನ್ನು ದೇಶಾದ್ಯಂತ ವನ್ಯಜೀವಿ ಸಂರಕ್ಷಣಾ ಕಾಯಿದೆ ಅನ್ವಯ ಯಾವುದೇ ವನ್ಯ ಜೀವಿಗಳನ್ನು ಕೊಂದರೆ ಮೂರು ವರ್ಷಗಳ ವರೆಗಿನ ಜೈಲು ಶಿಕ್ಷೆ ಮತ್ತು 25,000 ರೂಪಾಯಿ ದಂಡ ವಿಧಿಸುವ ಅವಕಾಶ ಇದೆ.