Poddar invests Rs 758 crore in Vemagal, creates 12,000 jobs
x
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌

ಪೊದ್ದಾರ್‌ ಪ್ಲಂಬಿಂಗ್‌ ಸಿಸ್ಟಂನಿಂದ ರಾಜ್ಯದಲ್ಲಿ 758 ಕೋಟಿ ಬೃಹತ್ ಹೂಡಿಕೆ: 12,000 ಉದ್ಯೋಗ ಸೃಷ್ಟಿ

ಯೋಜನೆಯಿಂದ 3 ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಂಪನಿ ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂ. ಗಳಿಗೆ ಕೊಂಡೊಯ್ಯುವುದಾಗಿ ಹೇಳಿದೆ.


ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಉತ್ಪಾದಿಸುವ ಪೊದ್ದಾರ್‌ ಪ್ಲಂಬಿಂಗ್‌ ಸಿಸ್ಟಂ ಪ್ರೈವೇಟ್‌ ಲಿಮಿಟೆಡ್‌ ರಾಜ್ಯದಲ್ಲಿ 758 ಕೋಟಿ ರೂಪಾಯಿ ಹೂಡಿಕೆ ಮಾಡಲು ತೀರ್ಮಾನಿಸಿದೆ. ಈ ಮಹತ್ವದ ಯೋಜನೆಯಿಂದ ರಾಜ್ಯದಲ್ಲಿ ಬರೋಬ್ಬರಿ 3 ಸಾವಿರ ನೇರ ಉದ್ಯೋಗಗಳು ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮಂಗಳವಾರ (ಜುಲೈ 29) ಮಾಹಿತಿ ನೀಡಿದ್ದಾರೆ.

ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಕಂಪನಿಗೆ 33 ಎಕರೆ ಜಮೀನು ನೀಡಲಾಗಿದ್ದು, 2026ರ ಆಗಸ್ಟ್‌ ವೇಳೆಗೆ ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ. ಸದ್ಯಕ್ಕೆ 28 ಎಕರೆ ಭೂಮಿ ಹಸ್ತಾಂತರವಾಗಿದ್ದು, ಉಳಿದ ಐದು ಎಕರೆ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಮಂಗಳವಾರ ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಪೊದ್ದಾರ್‌ ಪ್ಲಂಬಿಂಗ್‌ ಕಂಪನಿಯು ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ತನ್ನ ಎರಡನೇ ಘಟಕವನ್ನು ತೆರೆಯಲಿದೆ ಎಂದು ತಿಳಿಸಿದರು.

ಹೂಡಿಕೆ ಹೆಚ್ಚಳ ಮತ್ತು ಆರ್ಥಿಕ ಪ್ರಯೋಜನಗಳು

ಕಂಪನಿಯು ಈ ಹಿಂದೆ 492 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758 ಕೋಟಿ ರೂಪಾಯಿಗಳಿಗೆ ಏರಿಸಲು ಅನುಮೋದನೆ ಕೋರಿದೆ. ಈ ಬೃಹತ್ ಹೂಡಿಕೆಯು ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಲಿದೆ. ಕಂಪನಿ ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂಪಾಯಿಗಳಿಗೆ ಕೊಂಡೊಯ್ಯುವುದಾಗಿ ಹೇಳಿದ್ದು, ಇದರಿಂದ ಸರ್ಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹರಿದುಬರಲಿದೆ ಎಂದು ಎಂ.ಬಿ. ಪಾಟೀಲ್‌ ಮಾಹಿತಿ ನೀಡಿದರು.

ಪೊದ್ದಾರ್‌ ಕಂಪನಿಯ ಹಿನ್ನೆಲೆ ಮತ್ತು ಯೋಜನೆ

ಸಿವಿಸಿ ಮತ್ತು ಪಿವಿಸಿ ಪೈಪುಗಳು ನಿರ್ಮಾಣ ಕಾಮಗಾರಿ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಪೊದ್ದಾರ್‌ ಪ್ಲಂಬಿಂಗ್‌ ಸಿಸ್ಟಂ ಕಂಪನಿಯು ಈಗಾಗಲೇ ಆಶೀರ್ವಾದ್‌ ಬ್ರ್ಯಾಂಡ್‌ ಹೆಸರಿನ ಪೈಪ್ ಕಂಪನಿಗೆ ಪ್ರವರ್ತಕ ಸ್ಥಾನದಲ್ಲಿದೆ. ವಾರ್ಷಿಕ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದ ಆಶೀರ್ವಾದ್‌ ಕಂಪನಿಯು 7 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈಗ ಪೊದ್ದಾರ್‌ ಹೆಸರಿನಲ್ಲಿ ಪ್ರತ್ಯೇಕ ಕಂಪನಿ ಮಾಡಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ಕಂಪನಿಯು ಭೂಸ್ವಾಧೀನ ಉದ್ದೇಶಕ್ಕೆ 93 ಕೋಟಿ ರೂಪಾಯಿ, ಕಟ್ಟಡ ಹಾಗೂ ಕೈಗಾರಿಕಾ ಯಂತ್ರೋಪಕರಣಗಳಿಗೆ 578 ಕೋಟಿ ರೂಪಾಯಿ ಮತ್ತು ಕೆಪೆಕ್ಸ್ (ಬಂಡವಾಳ ವೆಚ್ಚ) ಮೇಲಿನ ತೆರಿಗೆಯಾಗಿ 87 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ವೇಮಗಲ್‌ನಲ್ಲಿ ಈಗಾಗಲೇ ಕಟ್ಟಡ ಕಾಮಗಾರಿ ಮತ್ತು ಯಂತ್ರೋಪಕರಣಗಳ ಜೋಡಣೆ ಕಾರ್ಯ ಆರಂಭವಾಗಿದೆ ಎಂದು ಸಚಿವರು ತಿಳಿಸಿದರು. ರಾಜ್ಯದಲ್ಲಿ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ.

Read More
Next Story