
Attack on Bus-Conductor | ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ನಿರ್ವಾಹಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಸಂತ್ರಸ್ತೆಯ ತಾಯಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮರಾಠಿ ಭಾಷಿಕರಿಂದ ಹಲ್ಲೆಗೊಳಗಾಗಿರುವ ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಬೆಳಗಾವಿಯ ಮಾರಿಹಾಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕನ್ನಡದಲ್ಲಿ ಮಾತನಾಡಿದರೆಂಬ ವಿಚಾರಕ್ಕೆ ಸಣ್ಣ ಬಾಳೇಕುಂದ್ರಿಯ ಯುವಕ-ಯುವತಿ ಬಸ್ ನಿರ್ವಾಹಕರೊಂದಿಗೆ ಜಗಳವಾಡಿದ್ದರು. ಕೆಎಸ್ಆರ್‌ಟಿಸಿ ಬಸ್ ಸಣ್ಣ ಬಾಳೇಕುಂದ್ರಿ ಗ್ರಾಮಕ್ಕೆ ಬರುತ್ತಿದ್ದಂತೆ ನೂರಾರು ಜನರು ಬಸ್‌ಗೆ ಮುತ್ತಿಗೆ ಹಾಕಿ, ನಿರ್ವಾಹಕ ಹಾಗೂ ಚಾಲಕರನ್ನು ಥಳಿಸಿದ್ದರು.
ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಸಂತ್ರಸ್ತೆಯ ತಾಯಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಸ್ ನಿರ್ವಾಹಕನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಾದೇವ ಹುಕ್ಕೇರಿ ಅವರು ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು, "ಸಣ್ಣ ಬಾಳೇಕುಂದ್ರಿಯಲ್ಲಿ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಜಗಳವಾಗಿದೆ. ಈ ವೇಳೆ ನಿರ್ವಾಹಕರ ಮೇಲೆ ಹಲ್ಲೆಯಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಲ್ನೋಟಕ್ಕೆ ಭಾಷೆ ವಿಚಾರವಾಗಿ ಜಗಳ ನಡೆದಿರುವ ಮಾಹಿತಿ ಇದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ತಿಳಿಸಿದ್ದಾರೆ.
"ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ನಡೆದಿದೆ" ಎಂದು ಹೇಳಿದ್ದಾರೆ.
ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಸಣ್ಣಬಾಳೇಕುಂದ್ರಿ ಗ್ರಾಮದ ಬಳಿ ಬೆಳಗಾವಿ-ಬಾಗಲಕೋಟೆ ರಸ್ತೆ ತಡೆದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಲ್ಲೆ ನೀಚ ಕೃತ್ಯ; ಟಿ.ಎ.ನಾರಾಯಣಗೌಡ
ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿ ಪೊಲೀಸರು ಮಹಾದೇವ ಹುಕ್ಕೇರಿ ಅವರ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.
ಕನ್ನಡಿಗರು ಸೌಹಾರ್ದಪ್ರಿಯರು, ಶಾಂತಿಪ್ರಿಯರು. ವಿನಾಕಾರಣ ಹಲ್ಲೆ ನಡೆಸುವ ಭಾಷಾಂಧರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಕಿತ್ತುಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ಮೇಲೆ ಹತಾಶರಾಗಿರುವ ಪುಂಡರು ಈಗ ಕನ್ನಡಿಗರ ಮೇಲೆ ಕೈಮಾಡುವ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಸಿಟ್ಟು ರಟ್ಟೆಗೆ ಬರಲಿದೆ. ಅಂಥ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಪುಂಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಬಸ್‌ಗೆ ಮಸಿ; 10ಮಂದಿ ಬಂಧನ
ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ಹಿರಿಯೂರಿನ ಗುಯಿಲಾಳ ಟೋಲ್‌ನಲ್ಲಿ ಮಹಾರಾಷ್ಟ್ರ ಬಸ್ ಹಾಗೂ ಚಾಲಕನಿಗೆ ಮಸಿ ಬಳಿದ ಘಟನೆಗೆ ಸಂಬಂಧಿಸಿ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ತಡೆದ ಕಾರ್ಯಕರ್ತರು ಬಸ್‌ಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಿಸಿ, ʼಜೈ ಕರ್ನಾಟಕ, ಜೈ ಕನ್ನಡʼ ಎಂಬ ಬರಹ ಬರೆದಿದ್ದರು. ಅಲ್ಲದೇ ಬಸ್ ಚಾಲಕ ಹರಿ ಜಾದವ್ ಅವರ ಮುಖಕ್ಕೂ ಮಸಿ ಬಳಿದಿದ್ದರು.
ಈ ಸಂಬಂಧ ಬಸ್ ಚಾಲಕ ಐಮಂಗಲ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡ ಲಕ್ಷ್ಮಿಕಾಂತ್ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.
ಮತ್ತೊಂದು ಬಸ್ ತಡೆಯಲು ಯತ್ನ
ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕೆಎಸ್ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಲು ಕರುನಾಡ ವಿಜಯಸೇನೆ ಸದಸ್ಯರು ಮುಂದಾಗಿದ್ದರು. ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಬಂದ ಕಾರ್ಯಕರ್ತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.