ಪ್ರಧಾನಿ ಮೈಸೂರು ಭೇಟಿ: ಪಾವತಿಯಾಗದ ಹೋಟೆಲ್ ಬಿಲ್, ಕಾನೂನು ಕ್ರಮಕ್ಕೆ ಚಿಂತನೆ
ಪ್ರಧಾನಿ ನರೇಂದ್ರ ಮೋದಿ ಅವರು ತಂಗಿದ್ದ ಮೈಸೂರಿನ ಹೋಟೆಲ್, ಪಾವತಿಯಾಗದ 80 ಲಕ್ಷ ರೂ. ವಸೂಲಿಗೆ ಕಾನೂನು ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದೆ.
ಏಪ್ರಿಲ್ 2023 ರಲ್ಲಿ ಮೋದಿ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ಅತಿಥಿಯಾಗಿದ್ದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆಯೋಜಿಸಿದ್ದ ಹುಲಿ ಯೋಜನೆಯೆ 50 ನೇ ವಾರ್ಷಿಕೋತ್ಸವ ವನ್ನು ಆಚರಿಸಲು ಪ್ರಧಾನಿ ಮೈಸೂರಿಗೆ ಭೇಟಿ ನೀಡಿದ್ದರು.
ಏಪ್ರಿಲ್ 9 ರಿಂದ 11 ರವರೆಗೆ ಕಾರ್ಯಕ್ರಮ ಆಯೋಜಿಸಲು ರಾಜ್ಯ ಅರಣ್ಯ ಇಲಾಖೆಗೆ ತಿಳಿಸಲಾಗಿತ್ತು.ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 3 ಕೋಟಿ ರೂ. ಪಾವತಿಸಿತ್ತು. ಆದರೆ, ಕೆಲವು ಕಾರ್ಯಕ್ರಮಗಳನ್ನು ಪಟ್ಟಿಗೆ ಸೇರಿಸಿದ ನಂತರ ಒಟ್ಟು ವೆಚ್ಚ 6.33 ಕೋಟಿ ರೂ.ಗೆ ಏರಿತು. ಕೇಂದ್ರ 3 ಕೋಟಿ ರೂ. ಪಾವತಿಸಿದ್ದು, ಉಳಿದ 3.33 ಕೋಟಿ ರೂ.ಪಾವತಿಯಾಗಿಲ್ಲ.ಪ್ರಧಾನ ಮಂತ್ರಿ ಅವರು ಮೈಸೂರು ವಾಸ್ತವ್ಯ ಹೂಡಿದ್ದ ಹೋಟೆಲ್ ಬಿಲ್ ಪಾವತಿಯಾಗಿಲ್ಲ ಎಂದು ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯ ಎನ್‌ಟಿಸಿಎಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ತಿಳಿಸಿದ್ದರು.
ಫೆಬ್ರವರಿ 2024 ರಲ್ಲಿ ಕರ್ನಾಟಕ ಸರ್ಕಾರ ಈ ವೆಚ್ಚಗಳನ್ನು ಭರಿಸಬೇಕೆಂದು ಎನ್‌ಟಿಸಿಎ ಹೇಳಿದೆ. ಈ ಪ್ರಕ್ರಿಯೆಯಲ್ಲಿ, ಹೋಟೆಲ್‌ನ 80.6 ಲಕ್ಷ ರೂ. ಬಿಲ್ ಇತ್ಯರ್ಥವಾಗದೆ ಉಳಿದುಕೊಂಡಿದೆ.