ಪ್ರಧಾನಿ ಮೋದಿ ಬೆಂಗಳೂರು ಭೇಟಿ, ನಗರದಲ್ಲಿ ಭಾನುವಾರ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ
x

ಪ್ರಧಾನಿ ಮೋದಿ ಬೆಂಗಳೂರು ಭೇಟಿ, ನಗರದಲ್ಲಿ ಭಾನುವಾರ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ, ನಗರದ ಕೇಂದ್ರ ಭಾಗದಲ್ಲಿ ಮತ್ತು ನೈಸ್ ರಸ್ತೆಯಲ್ಲಿ ಪ್ರತ್ಯೇಕ ಸಮಯಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ


ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಹಳದಿ ಮಾರ್ಗವನ್ನು (ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ) ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳ ಭೇಟಿಯ ಹಿನ್ನೆಲೆಯಲ್ಲಿ, ನಗರದ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ, ನಗರದ ಕೇಂದ್ರ ಭಾಗದಲ್ಲಿ ಮತ್ತು ನೈಸ್ ರಸ್ತೆಯಲ್ಲಿ ಪ್ರತ್ಯೇಕ ಸಮಯಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ.


ನಗರ ಕೇಂದ್ರ ಭಾಗದಲ್ಲಿನ ನಿರ್ಬಂಧಗಳು (ಬೆಳಗ್ಗೆ 9ರಿಂದ ಮಧ್ಯಾಹ್ನ 1)

  • ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ನಗರದ ಹೃದಯ ಭಾಗದ ಹಲವು ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ಕೆಎಸ್ಆರ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ 7 ಮತ್ತು 8ರಿಂದ ಖೋಡೆ ಸರ್ಕಲ್ ಮೂಲಕ ಮಹಾರಾಣಿ ಸೇತುವೆ ಕಡೆಗಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಶಾಂತಲಾ ಜಂಕ್ಷನ್​ನಿಂದ ಖೋಡೆ ಜಂಕ್ಷನ್ ಕಡೆಗೆ, ಮೈಸೂರು ಬ್ಯಾಂಕ್ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ, ಹಾಗೂ ಫ್ರೀಡಂ ಪಾರ್ಕ್ ಮತ್ತು ಲಾಲ್​ಬಾಗ್​​ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆಯಿರಲಿದೆ. ಈ ವಾಹನ ಸವಾರರು ಕಾಟನ್​​ಪೇಟೆ ಮುಖ್ಯರಸ್ತೆ, ಕೆ.ಜಿ. ರಸ್ತೆ, ಮತ್ತು ಜೆ.ಸಿ. ರಸ್ತೆಯಂತಹ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ (ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ)

  • ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಾಗುವ ನೈಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ತುಮಕೂರು ರಸ್ತೆ, ಮಾಗಡಿ ರಸ್ತೆ, ಕೆಂಗೇರಿ, ಕನಕಪುರ ರಸ್ತೆ, ಮತ್ತು ಬನ್ನೇರುಘಟ್ಟ ರಸ್ತೆ ಸೇರಿದಂತೆ ಎಲ್ಲಾ ಪ್ರವೇಶಗಳಿಂದ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವಂತಿಲ್ಲ.
  • ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ಟೋಲ್ ಬಳಿಯೇ ತಡೆದು, ಬನ್ನೇರುಘಟ್ಟ ಮುಖ್ಯರಸ್ತೆಗೆ ತಿರುಗಿಸಲಾಗುತ್ತದೆ. ವಾಹನ ಸವಾರರು ಬನ್ನೇರುಘಟ್ಟ ರಸ್ತೆಯಲ್ಲಿ ಸಾಗಿ, ಜಿಗಣಿ ಮೂಲಕ ಹೊಸೂರು ರಸ್ತೆ ಅಥವಾ ಎಲೆಕ್ಟ್ರಾನಿಕ್ ಸಿಟಿಯನ್ನು ತಲುಪಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸಿ, ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಯ ಜೊತೆಗೆ, ಮೆಟ್ರೋ ಹಂತ-3ಕ್ಕೆ ಶಂಕುಸ್ಥಾಪನೆ ಮತ್ತು ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಲಿದ್ದಾರೆ.

Read More
Next Story