ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಚಾಲನೆ: ಕೌಂಟ್‌ಡೌನ್‌ ಶುರು
x

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಚಾಲನೆ: ಕೌಂಟ್‌ಡೌನ್‌ ಶುರು

ಈಗಾಗಲೇ ಮಾರ್ಗದ ಸುರಕ್ಷತೆಗೆ ಸಂಬಂಧಿಸಿದಂತೆ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ISA) ಸಂಸ್ಥೆಯು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ರೈಲ್ವೆ ಸುರಕ್ಷತಾ ಆಯೋಗಕ್ಕೆ ಸಲ್ಲಿಸಿದೆ.


ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ನಮ್ಮ ಮೆಟ್ರೋದ ಚಾಲಕರಹಿತ ಹಳದಿ ಮಾರ್ಗದ (ಆರ್.ವಿ. ರಸ್ತೆ - ಬೊಮ್ಮಸಂದ್ರ) ಉದ್ಘಾಟನೆಗೆ ಮುಹೂರ್ತ ಬಹುತೇಕ ನಿಗದಿಯಾಗಿದ್ದು, ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಖಚಿತಪಡಿಸಿದೆ.

ಚಾಲಕರಹಿತ ತಂತ್ರಜ್ಞಾನ, 16 ನಿಲ್ದಾಣಗಳು

ಈ ಮಾರ್ಗವು ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ (ಆರ್.ವಿ.) ರಸ್ತೆ ನಿಲ್ದಾಣದಿಂದ ಆರಂಭವಾಗಿ ಬೊಮ್ಮಸಂದ್ರದವರೆಗೆ ಒಟ್ಟು 19.15 ಕಿ.ಮೀ. ಉದ್ದವನ್ನು ಹೊಂದಿದೆ. ಇದು ನಗರದ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರಗಳಾದ ಸೆಂಟ್ರಲ್ ಸಿಲ್ಕ್‌ಬೋರ್ಡ್, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಹಾದುಹೋಗಲಿದೆ. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿರಲಿದ್ದು, ಸಿಲ್ಕ್‌ಬೋರ್ಡ್, ಆರ್.ವಿ. ರಸ್ತೆ, ಮತ್ತು ಜಯದೇವದಲ್ಲಿ 3 ಇಂಟರ್‌ಚೇಂಜ್ ನಿಲ್ದಾಣಗಳು ಪ್ರಯಾಣಿಕರಿಗೆ ಬೇರೆ ಮಾರ್ಗಗಳಿಗೆ ಬದಲಿಸಿಕೊಳ್ಳಲು ಅನುಕೂಲ ಮಾಡಿಕೊಡಲಿವೆ.

ಅಂತಿಮ ಹಂತದ ಪರಿಶೀಲನೆ

ಈಗಾಗಲೇ ಮಾರ್ಗದ ಸುರಕ್ಷತೆಗೆ ಸಂಬಂಧಿಸಿದಂತೆ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ISA) ಸಂಸ್ಥೆಯು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ರೈಲ್ವೆ ಸುರಕ್ಷತಾ ಆಯೋಗಕ್ಕೆ ಸಲ್ಲಿಸಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಮಂಗಳವಾರ (ಜುಲೈ 22) ಅಂತಿಮ ಹಂತದ ಪರಿಶೀಲನೆ ನಡೆಸಲಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಾಣಿಜ್ಯ ಸಂಚಾರಕ್ಕೆ ದಿನಾಂಕ ನಿಗದಿಯಾಗಲಿದೆ. ಈ ಮಾರ್ಗ ಕಾರ್ಯಾರಂಭವಾದ ಬಳಿಕ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುವ ನಿರೀಕ್ಷೆಯಿದೆ.

Read More
Next Story