ನನ್ನ ಬಂಡಾಯ ಸ್ಪರ್ಧೆ ಪ್ರಧಾನಿ ಮೋದಿಗೂ ಇಷ್ಟವಿರಬಹುದು: ಕೆ.ಎಸ್ ಈಶ್ವರಪ್ಪ
x
ಕೆ.ಎಸ್‌ ಈಶ್ವರಪ್ಪ

ನನ್ನ ಬಂಡಾಯ ಸ್ಪರ್ಧೆ ಪ್ರಧಾನಿ ಮೋದಿಗೂ ಇಷ್ಟವಿರಬಹುದು: ಕೆ.ಎಸ್ ಈಶ್ವರಪ್ಪ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ನಾನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಮೊದಲೇ ಹೇಳಿದ್ದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಇಷ್ಟವಿರಬಹುದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಮಗ ಕಾಂತೇಶ ಅವರಿಗೆ ಹಾವೇರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದೆ ಇರುವುದಕ್ಕೆ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿರುವುದು ಅವರಿಗೂ (ಕೇಂದ್ರ ಬಿಜೆಪಿ ನಾಯಕರು) ಇಷ್ಟವಿರಬಹುದು. ಇಲ್ಲದಿದ್ದರೆ ಯಾಕೆ ಅವರು ಇನ್ನೂ ನನ್ನನ್ನು ಬಿಜೆಪಿಯಿಂದ ತೆಗೆದು ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದು, ನನ್ನನ್ನು ಪಕ್ಷದಿಂದ ತೆಗೆದರೆ ಮತ್ತೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದೂ ಹೇಳಿದರು.

ಅಪ್ಪ, ಮಕ್ಕಳ (ಯಡಿಯೂರಪ್ಪ ಮತ್ತು ವಿಜಯೇಂದ್ರ) ಕೈಯಿಂದ ಬಿಜೆಪಿಯನ್ನು ಬಿಡಿಸಬೇಕು ಎನ್ನುವ ಉದ್ದೇಶ ಕೇಂದ್ರ ಬಿಜೆಪಿ ನಾಯಕರಿಗೂ ಇರಬೇಕು. ಅದೇ ಕಾರಣಕ್ಕೆ ಅಮಿತ್ ಶಾ ಇನ್ನೂ ಕರೆ ಮಾಡಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೂ ಜನರು ಕೆ.ಎಸ್ ಈಶ್ವರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರೇ ಚುನಾವಣೆಗೆ ನಿಲ್ಲಿಸಿರಬೇಕು ಎಂದುಕೊಳ್ಳುತ್ತಿದ್ದಾರೆ ಎಂದರು.

ಬಿ.ಎಸ್ ಯಡಿಯೂರಪ್ಪ ಅವರು ಎಷ್ಟು ಪಕ್ಷಗಳಿಗೆ ಹೋಗಿ ಬಂದರು? ಅಧಿಕಾರಕ್ಕಾಗಿ ಕೆಜೆಪಿ ಕಟ್ಟಿದರು. ನಾನು ಕೆಜೆಪಿ ಬೇಡ ಬಿಡಿ ಎಂದು ಮತ್ತೆ ಬಿಜೆಪಿಗೆ ಕರೆದುಕೊಂಡು ಬಂದೆ. ಆದರೆ, ಅವರು ಅಷ್ಟು ಮೋಸ ಮಾಡಿದ್ದಾರೆ. ಮೋಸ ಮಾಡಿರುವ ಯಡಿಯೂರಪ್ಪ ಅವರು ಯಾವ ಮುಖ ಇಟ್ಟುಕೊಂಡು ನನ್ನ ಬಳಿ ಬರಬೇಕು ಎಂದು ಪ್ರಶ್ನಿಸಿದರು.

ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಹಣದ ಮಳೆಯನ್ನೇ ಸುರಿಸಲಾಗಿದೆ. ಅಷ್ಟು ಹಣ ಖರ್ಚು ಮಾಡಿದರೂ, ಶಿಕಾರಿಪುರ ಕ್ಷೇತ್ರದಲ್ಲಿ ಕೇವಲ 11 ಸಾವಿರ ಮತಗಳ ಅಂತರದಿಂದಷ್ಟೇ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ನನ್ನ ಮಾತು ಕೇಳಿ ಜೆಡಿಎಸ್‌ನಿಂದ ಮೈತ್ರಿ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ನಾನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಮೊದಲೇ ಹೇಳಿದ್ದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ನಿಮ್ಮ ಪಕ್ಷ ನಮ್ಮ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದಿದ್ದರೆ, ಎರಡೂ ಪಕ್ಷಗಳ ಮತವನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದೆ. ನಾನು ಹೇಳಿದ ಮೇಲೆ ಎಚ್.ಡಿ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಮೈತ್ರಿ ಮಾಡಿಕೊಂಡಿದ್ದಾರೆ. ನೀವು ಹೇಳಿದಂತೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋನ್ ಮಾಡಿದ್ದರು ಎಂದರು.

Read More
Next Story