ಪಿಎಫ್‌ ವಿವಾದ | ನೌಕರರ ವೇತನದೊಂದಿಗೆ ಪಿಎಫ್‌ ಮೊತ್ತ ಪಾವತಿ ಅಪರಾಧವಲ್ಲ ಎಂದ ಕೋರ್ಟ್
x

ಪಿಎಫ್‌ ವಿವಾದ | ನೌಕರರ ವೇತನದೊಂದಿಗೆ ಪಿಎಫ್‌ ಮೊತ್ತ ಪಾವತಿ ಅಪರಾಧವಲ್ಲ ಎಂದ ಕೋರ್ಟ್


ನೌಕರರ ಭವಿಷ್ಯನಿಧಿ(ಪಿಎಫ್‌) ವಿಷಯದಲ್ಲಿ ಇಷ್ಟು ದಿನ ಇದ್ದ ಗೊಂದಲಕ್ಕೆ ರಾಜ್ಯ ಹೈಕೋರ್ಟ್‌ ತೆರೆ ಎಳೆದಿದ್ದು, ಉದ್ಯೋಗದಾತ ಸಂಸ್ಥೆಯು ತನ್ನ ಸಿಬ್ಬಂದಿಯ ವೇತನದೊಂದಿಗೆ ಪಿಎಫ್‌ ಮೊತ್ತವನ್ನು ಸೇರಿಸಿ ಪಾವತಿ ಮಾಡಿದರೆ ಅದು ಅಪರಾಧವಲ್ಲ ಎಂದು ಹೇಳಿದೆ.

ಬೆಂಗಳೂರಿನ ದಾಸರಹಳ್ಳಿಯ ಬಾಲಾಜಿ ಚಾರಿಟಬಲ್‌ ಟ್ರಸ್ಟ್‌ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ಭವಿಷ್ಯನಿಧಿ ಮೊತ್ತ ಪಾವತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.

ಬಾಲಾಜಿ ಚಾರಿಟಬಲ್‌ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಬಿ ಆರ್‌ ರಮೇಶ್‌ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜು ಅವರ ಪೀಠ, ಉದ್ಯೋಗದಾತರು ಸಿಬ್ಬಂದಿಯ ವೇತನದೊಂದಿಗೆ ಅವರ ಭವಿಷ್ಯನಿಧಿ ಮೊತ್ತವನ್ನೂ ಸೇರಿಸಿ ಪಾವತಿ ಮಾಡಿದ್ದರೆ ಅದು ಕಾನೂನುಬಾಹಿರವಲ್ಲ. ಒಂದು ವೇಳೆ ಸಿಬ್ಬಂದಿ ವೇತನದಲ್ಲಿ ಭವಿಷ್ಯನಿಧಿ ಕಡಿತ ಮಾಡಿ, ಆ ಮೊತ್ತವನ್ನು ಭವಿಷ್ಯನಿಧಿ ಸಂಸ್ಥೆಗೆ ತುಂಬದೇ ಇದ್ದಲ್ಲಿ ಮಾತ್ರ ಅದು ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ನೌಕರರ ಭವಿಷ್ಯನಿಧಿಗಾಗಿ ಕಡಿತ ಮಾಡಿದ್ದ ಮೊತ್ತವನ್ನು ಸಿಬ್ಬಂದಿಗಳ ವೇತನದಲ್ಲಿ ಸೇರಿಸಿ ಅವರಿಗೇ ಪಾವತಿ ಮಾಡಿದ್ದಾರೆ. ಉದ್ಯೋಗದಾತರು ಅದನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಇದು ಕಾನೂನುಬಾಹಿರವಲ್ಲ ಎಂದು ಪೀಠ ಹೇಳಿದೆ.

ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿದ್ದ ಮೊತ್ತವನ್ನು ಬಡ್ಡಿ ಸಹಿತ ಪಾವತಿ ಮಾಡಲಾಗಿದ್ದು, ಯಾವುದೇ ಬಾಕಿ ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ

ಶಿಕ್ಷಣ ಸಂಸ್ಥೆಯ ನೌಕರರಿಗೆ ಪಾವತಿ ಮಾಡಬೇಕಾದ ಪಿಎಫ್‌ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ ಎಂದು ಬಾಲಾಜಿ ಟ್ರಸ್ಟ್‌ ವಿರುದ್ಧ ಪಿಎಫ್‌ ಸಂಸ್ಥೆಗೆ ದೂರು ಸಲ್ಲಿಕೆಯಾಗಿತ್ತು. ಆ ಹಿನ್ನೆಲೆಯಲ್ಲಿ ಪಿಎಫ್‌ ಸಂಸ್ಥೆ ಶಿಕ್ಷಣ ಸಂಸ್ಥೆಯ ವಿರುದ್ಧ ಪೊಲೀಸ್‌ ದೂರು ನೀಡಿತ್ತು. ಆ ಬಳಿಕ ಸಂಸ್ಥೆ ನೌಕರರಿಗೆ ಬಾಕಿ ಉಳಿದಿದ್ದ ಮೊತ್ತವನ್ನು ಬಡ್ಡಿಸಹಿತ ಪಾವತಿ ಮಾಡಿತ್ತು. ಆದರೆ, ಪಿಎಫ್‌ ಸಂಸ್ಥೆ ಬಾಕಿ ಮೊತ್ತ ಪಾವತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

Read More
Next Story