
ಅವರ ಪೆಟ್ರೋಲ್ ಬಾಂಬ್ ಕಿತ್ತುಕೊಳ್ಳದಿದ್ದರೆ ನಾವೂ ಹಿಡಿಯುತ್ತೇವೆ: ಪ್ರತಾಪ್ ಸಿಂಹ
ಮುಸ್ಲಿಮರ ಬಳಿ ಇರುವ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿಯಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರ ಬಳಿ ಇರುವ ತಲ್ವಾರ್ಗಳನ್ನು ಸರ್ಕಾರ ಕಿತ್ತುಕೊಳ್ಳದೇ ಇದ್ದರೆ, ನಾವೂ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿಯಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಬೇರೆ ಜಿಲ್ಲೆಗಳಲ್ಲಿ ಅದ್ದೂರಿಯಾಗಿ ಗಣೇಶ ಮೆರವಣಿಗೆಗಳು ನಡೆಯುತ್ತವೆ. ಅಷ್ಟರೊಳಗೆ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹೇರಬೇಕು. ನಿಯಂತ್ರಣ ಹೇರದಿದ್ದರೆ ನಮ್ಮ ರಕ್ಷಣೆ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಸಿಎಂ ತಲೆದಂಡ ಖಚಿತ
ಇದೇ ವೇಳೆ ಮುಡಾ ಹಗರಣದ ಕುರಿತು ಮಾತನಾಡಿರುವ ಅವರು, ಮುಡಾ ಹಗರಣ ವಿಚಾರ ಕೋರ್ಟ್ನಲ್ಲಿದೆ. ಆ ಕೇಸ್ ವಿಚಾರ ಏನೇ ಆಗಲಿ ಅದು ಬೇರೆ ವಿಚಾರ. ಆದರೆ, ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ. ಅರ್ಥಿಕ ಹಗರಣ ಆದಾಗ ಅದಕ್ಕೆ ಅರ್ಥಿಕ ಸಚಿವರೇ ಹೊಣೆಗಾರರು. ಸಿಎಂ ಅವರೇ 88 ಕೋಟಿ ರೂಪಾಯಿ ಅವ್ಯವಹಾರ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.
ವಾಲ್ಮೀಕಿ ನಿಗಮದ ದುಡ್ಡಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಮಾಡಲಾಗಿದೆ. ಆ ಹಣವನ್ನು ಮದ್ಯ ಖರೀದಿಗೆ ಬಳಸಿರುವುದು ಸಾಬೀತಾಗಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದು ಪ್ರತಾಪ್ ಸಿಂಹ ಹೇಳಿದರು.
ಮುಡಾ ವಿಚಾರದಲ್ಲಿ ನಾನು ಮೊದಲೇ ಸೈಟ್ ವಾಪಾಸ್ ಕೊಡಿ ಎಂದು ಹೇಳಿದ್ದೆ. ನನ್ನ ಕಾಳಜಿಯುತ ಸಲಹೆಯನ್ನು ಸಿಎಂ ಕೇಳಲಿಲ್ಲ. ಈಗ ಈ ವಿಚಾರವಾಗಿ ಮುಂಚಿತವಾಗಿಯೇ ರಾಜೀನಾಮೆ ಕೊಡಿ ಅಂದರೆ ನನ್ನಂತಹ ಸಣ್ಣವನ ಮಾತು ಅವರು ಕೇಳುತ್ತಾರಾ ಎಂದು ಅವರು ಪ್ರಶ್ನಿಸಿದರು.
ಮಹಿಷಾ ದಸರಾಗೆ ವಿರೋಧ
ನಾನು ಸಂಸದನಾಗಿದ್ದರೂ ಅಷ್ಟೇ, ಆಗಿಲ್ಲದಿದ್ದರೂ ಅಷ್ಟೆ ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ. ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಯಾರ ನಿಲುವುಗಳು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ. ‘ತಮಗೆ ಮಹಿಷನಂಥ ಮಕ್ಕಳೇ’ ಹುಟ್ಟಲಿ ಎಂದು ದಿನವೂ ಪೂಜೆ ಮಾಡಲಿ. ಅದಕ್ಕೆ ನಮ್ಮದೇನು ವಿರೋಧ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.