ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ್ದ ಅರ್ಜಿಗಳು ​​ವಜಾ
x

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ್ದ ಅರ್ಜಿಗಳು ​​ವಜಾ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದ ಮುಂದೆ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಿತು.


Click the Play button to hear this message in audio format

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲು ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಸರ್ಕಾರದ ಕ್ರಮವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮತ್ತು ಅಡ್ವೊಕೇಟ್ ಜನರಲ್ ನಡುವೆ ತೀವ್ರ ವಾಗ್ವಾದ ನಡೆಯಿತು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದ ಮುಂದೆ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಿತು.

ಅರ್ಜಿದಾರರ ಪರ ವಕೀಲರು, "ಬೇರೊಂದು ಧರ್ಮದ ವ್ಯಕ್ತಿ ದಸರಾ ಉದ್ಘಾಟಿಸಬಹುದೇ ಎಂಬುದು ಮೂಲ ಪ್ರಶ್ನೆ. ಹಿಂದೂ ದೇವರ ಪೂಜೆಯನ್ನು ಆಗಮ ಶಾಸ್ತ್ರದಿಂದ ಬೇರ್ಪಡಿಸಲಾಗದು. ಬಾನು ಮುಷ್ತಾಕ್ ಅವರು ತಮಗೆ ಹಿಂದೂ ದೇವರ ಮೇಲೆ ನಂಬಿಕೆ ಇದೆ ಎಂದು ಹೇಳಲಿ, ನಾವು ಅದನ್ನು ಪ್ರಶ್ನಿಸುವುದಿಲ್ಲ" ಎಂದು ವಾದಿಸಿದರು.

ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. "ದಸರಾ ಎಂಬುದು ನಾಡಹಬ್ಬ, ಇದು ಸರ್ಕಾರದ ಜಾತ್ಯತೀತ ಕಾರ್ಯಕ್ರಮ. ಇದನ್ನು ಧಾರ್ಮಿಕ ಕಾರ್ಯಕ್ರಮವೆಂದು ಬಿಂಬಿಸಲಾಗುತ್ತಿದೆ. ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು 62 ಸದಸ್ಯರ ದಸರಾ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಎಲ್ಲಾ ಪಕ್ಷಗಳ ಮುಖಂಡರೂ ಇದ್ದಾರೆ" ಎಂದು ನ್ಯಾಯಪೀಠಕ್ಕೆ ತಿಳಿಸಿದರು.

"ಈ ಹಿಂದೆ ಸಾಹಿತಿ ಕೆ. ಎಸ್. ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾಗ, ಆಗ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರೇ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆ ಸತ್ಯವನ್ನು ಅವರು ಅರ್ಜಿಯಲ್ಲಿ ಮುಚ್ಚಿಟ್ಟಿದ್ದಾರೆ. ಹೀಗಾಗಿ, ಅರ್ಜಿದಾರರಿಗೆ ದಂಡ ವಿಧಿಸಬೇಕು" ಎಂದು ಎ.ಜಿ. ಒತ್ತಾಯಿಸಿದರು. "ಗೌರವಾನ್ವಿತ ಲೇಖಕಿಯನ್ನು ಕನ್ನಡ ವಿರೋಧಿ ಎಂದು ಬಿಂಬಿಸಿ, ಹಿಂದೂ-ಮುಸ್ಲಿಂ ಎಂದು ಸಮಾಜದಲ್ಲಿ ಕಂದಕ ಸೃಷ್ಟಿಸುವ ಪ್ರಯತ್ನವನ್ನು ಮೊಳಕೆಯಲ್ಲೇ ಚಿವುಟಬೇಕು" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, "ವಿಜಯದಶಮಿ ಎಂದರೆ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಚಾಮುಂಡೇಶ್ವರಿಗೆ ನಂಬಿಕೆ ಇಲ್ಲದವರು ಪೂಜೆ ಸಲ್ಲಿಸಬಾರದು ಎಂದು ದೇವಸ್ಥಾನದ ಟ್ರಸ್ಟಿಯಾಗಲಿ, ಆಡಳಿತ ಮಂಡಳಿಯಾಗಲಿ ನಮ್ಮ ಮುಂದೆ ಬಂದಿಲ್ಲ" ಎಂದು ಸ್ಪಷ್ಟಪಡಿಸಿತು.

"ಬೇರೆ ಧರ್ಮದ ವ್ಯಕ್ತಿ ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ" ಎಂದು ಅಭಿಪ್ರಾಯಪಟ್ಟ ಪೀಠವು, ಎಲ್ಲಾ ಮೂರು ಅರ್ಜಿಗಳನ್ನು ವಜಾಗೊಳಿಸಿ, ವಿಸ್ತೃತ ಆದೇಶವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿತು. ಆದೇಶದ ನಂತರವೂ ವಕೀಲರು ವಾದ ಮುಂದುವರಿಸಲು ಯತ್ನಿಸಿದಾಗ, "ನಮ್ಮ ಆದೇಶವನ್ನು ನೀಡಿಯಾಗಿದೆ. ನಿಮಗೆ ದಂಡ ವಿಧಿಸಬೇಕೆ? ಈ ನ್ಯಾಯಾಲಯದಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿಗಳು ಕಟುವಾಗಿ ಎಚ್ಚರಿಸಿದರು.

Read More
Next Story