ಸಿಎಂ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ: ರಾಜ್ಯಪಾಲರ ವಜಾಕ್ಕೆ ಈಶ್ವರ ಖಂಡ್ರೆ ಆಗ್ರಹ
x

ಸಿಎಂ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ: ರಾಜ್ಯಪಾಲರ ವಜಾಕ್ಕೆ ಈಶ್ವರ ಖಂಡ್ರೆ ಆಗ್ರಹ


ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸರಿಯಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕುʼʼ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರʼʼ ಎಂದು ಖಂಡ್ರೆ ಕಿಡಿಕಾರಿದ್ದಾರೆ.

ʻʻಜನಪರವಾದ ಆಡಳಿತ ನೀಡುತ್ತಾ, ಸಾಮಾಜಿಕ ನ್ಯಾಯಕ್ಕೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಕುಗ್ಗಿಸಲು ಮತ್ತು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ. ಇತ್ತೀಚೆಗೆ ದೆಹಲಿಗೆ ರಾಜ್ಯಪಾಲರನ್ನು ಕರೆಸಿಕೊಂಡು ಅವರಿಗೆ ಸ್ಪಷ್ಟ ಸೂಚನೆ ನೀಡಿ ಕಳಿಸಿದ್ದಾರೆʼʼ ಎಂದೂ ಆರೋಪಿಸಿದ್ದಾರೆ.

ʻʻಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ, ಚುನಾಯಿತ ಸರ್ಕಾರಗಳನ್ನು ಬೀಳಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಎರಡು ಬಾರಿ ವಾಮ ಮಾರ್ಗದಿಂದ ಆಡಳಿತಕ್ಕೆ ಬಂದ ಬಿಜೆಪಿ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕʼʼ ಎಂದು ಖಂಡ್ರೆ ಹೇಳಿದ್ದಾರೆ.

ʻʻರಾಜ್ಯದ ಜನತೆ ಇದನ್ನು ಕ್ಷಮಿಸುವುದಿಲ್ಲ ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಪಕ್ಷಪಾತ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಜನರ ಬೆಂಬಲ ಸರ್ಕಾರದ ಪರವಾಗಿದೆʼʼ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ʻʻರಾಜ್ಯಪಾಲರು ಅನುಸರಿಸಿರುವ ಪಕ್ಷಪಾತ ಧೋರಣೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ಇವರನ್ನು ರಾಷ್ಟ್ರಪತಿಗಳು ವಜಾ ಮಾಡಬೇಕುʼʼ ಎಂದು ಖಂಡ್ರೆ ಒತ್ತಾಯಿಸಿದ್ದಾರೆ.

Read More
Next Story