
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ; ಮುಖಂಡರ ಜತೆ ಹೆಚ್.ಡಿ.ಕೆ ಮಹತ್ವದ ಸಭೆ
ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ರಾಜ್ಯವ್ಯಾಪಿ ಹೋರಾಟಗಳನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜಧಾನಿಯಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸುವುದು ಸೇರಿದಂತೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಜನಾಂದೋಲನ ರೂಪಿಸುವ ಬಗ್ಗೆ ಕೇಂದ್ರ ಸಚಿವರೂ ಆದ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖಂಡರ ಜತೆ ಮಹತ್ವದ ಮಾತುಕತೆ ನಡೆಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಆಹ್ವಾನಿತ ಮುಖಂಡರ ಜತೆ ಸಭೆ ನಡೆಸಿದ ಸಚಿವರು; ಕ್ರಿಯಾಶೀಲವಲ್ಲದ ಜಿಲ್ಲಾಧ್ಯಕ್ಷರ ಬದಲಾವಣೆ, ಖಾಲಿ ಇರುವ ಜಿಲ್ಲಾಧ್ಯಕ್ಷರ ಸ್ಥಾನಗಳ ಭರ್ತಿ, ಸದಸ್ಯತ್ವ ನೋಂದಣಿಯ ಪ್ರಗತಿ ಬಗ್ಗೆಯೂ ಮುಖಂಡರ ಜತೆ ಮಹತ್ವದ ಚರ್ಚೆ ನಡೆಸಿದರು.
ಅಲ್ಲದೆ, ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ರಾಜ್ಯವ್ಯಾಪಿ ಹೋರಾಟಗಳನ್ನು ಹಮ್ಮಿಕೊಳ್ಳುವಂತೆ ಸಚಿವರು ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿದ್ಯುತ್, ನೀರು, ಬಸ್ ಪ್ರಯಾಣ ದರ, ಹಾಲು, ಮೊಸರು, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜನರ ಪರವಾಗಿ ಪಕ್ಷ ಹೋರಾಟಗಳನ್ನು ನಡೆಸಬೇಕು. ಜನರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಇದನ್ನು ಯಾರೂ ಮರೆಯಬಾರದು ಎಂದು ಕೇಂದ್ರ ಸಚಿವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಹದಿನೈದು ಜಿಲ್ಲೆಗಳಲ್ಲಿ HDK ಪ್ರವಾಸ
ಹಳೆ ಮೈಸೂರು ಭಾಗದ ಹದಿನೈದು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಕೈಗೊಳ್ಳುವುದಾಗಿ ಮುಖಂಡರಿಗೆ ಕೇಂದ್ರ ಸಚಿವರು ತಿಳಿಸಿದರು.
ಪ್ರತಿ ಜಿಲ್ಲೆಗೂ ಒಂದೊಂದು ದಿನ ಭೇಟಿ ನೀಡುತ್ತೇನೆ. ಕಾರ್ಯಕರ್ತರು, ಮುಖಂಡರ ಜತೆ ಆ ದಿನವನ್ನು ಕಳೆಯುತ್ತೇನೆ. ಅವರ ಅಹವಾಲು, ಸಮಸ್ಯೆ ಖುದ್ದು ಆಲಿಸುತ್ತೇನೆ. ಅವರ ಸಮಸ್ಯೆಗಳನ್ನು ಸರಿ ಮಾಡುತ್ತೇನೆ. ಶೀಘ್ರವೇ ಪ್ರವಾಸದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಸಭೆಗೆ ತಿಳಿಸಿದರು.
ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಿಕ್ಕಿರುವ ಅವಕಾಶ ಬಳಸಿಕೊಂಡು ಪ್ರಧಾನಿಗಳ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಕೈಲಾದ ಮಟ್ಟಿಗೆ ಒಳ್ಳೆಯ ಕೆಲಸ ಮಾಡಲು ಶ್ರಮ ಹಾಕುತ್ತಿದ್ದೇನೆ. ಕೇಂದ್ರದಲ್ಲಿ ಕೆಲಸ ಮಾಡಿಕೊಂಡೇ ಪಕ್ಷ ಸಂಘಟನೆಗೆ ಸಮಯ ನಿಗದಿ ಮಾಡುತ್ತೇನೆ. ಪ್ರತಿ ಕಾರ್ಯಕರ್ತ, ಮುಖಂಡನಿಗೂ ಸಿಗುತ್ತೇನೆ ಎಂದು ಮುಖಂಡರಿಗೆ ಸಚಿವರು ಹೇಳಿದರು.
ನಲವತ್ತು, ಐವತ್ತು ಸಾವಿರ ಮತ ಪಡೆದಿರುವ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಗೆ ಅವರನ್ನು ಸಜ್ಜು ಮಾಡುತ್ತೇನೆ. ತಳಮಟ್ಟದಿಂದ ಸಂಘಟನೆ ಬಲಗೊಳಿಸಲು ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ ಎಂದ ಸಚಿವರು; ರಾಜ್ಯದಲ್ಲಿ ಜೆಡಿಎಸ್ ಅನಿವಾರ್ಯವಾಗಿದೆ. ನಾವು ನಮ್ಮ ನಿಲುವು ಜನರ ಪರ. ಜನ ಸಾಮಾನ್ಯರ ಪರ ನಿಲ್ಲಬೇಕು.
ಕೂಡಲೇ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಿ. ಎಲ್ಲೆಲ್ಲಿ ಗೆಲ್ಲುತ್ತೇವೆಯೋ ಆ ಕ್ಷೇತ್ರಗಳನ್ನು ಪಟ್ಟಿ ಮಾಡಿ. ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಬಗ್ಗೆ ಹೆಚ್ಚು ಮುತುವರ್ಜಿ ಕೊಟ್ಟು ಕೆಲಸ ಮಾಡಿ. ಹಗಲು ರಾತ್ರಿ ನಾನು ಕೆಲಸ ಮಾಡಲು ಸಿದ್ಧ. ನನ್ನ ಹಾಗೆಯೇ ನೀವು ಕೆಲಸ ಮಾಡಲೇಬೇಕು ಎಂದು ನೇರ ಮಾತುಗಳಲ್ಲಿ ಕುಮಾರಸ್ವಾಮಿ ಅವರು ಹೇಳಿದರು.
ಯುವಕರಿಗೆ ಆದ್ಯತೆ ಕೊಡಿ
ಸಂಘಟನೆಯಲ್ಲಿ ಯುವಕರಿಗೆ ಹೆಚ್ಚು ಮನ್ನಣೆ ಕೊಡಿ, ಯುವಕರು ಇಲ್ಲದೆ ಪಕ್ಷ ಹೇಗೆ ಕಟ್ಟುತ್ತೀರಿ. ಅವರಿಗೆ ಮಾರ್ಗದರ್ಶನ ಕೊಡಿ. ಸಂಘಟನೆಯಲ್ಲಿ ತೊಡಗಿಸಿ ಎಂದು ಕುಮಾರಸ್ವಾಮಿ ಅವರು ಮುಖಂಡರಿಗೆ ಸೂಚನೆ ನೀಡಿದರು.
ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಎ. ಮಂಜು, ಮೇಲೂರು ರವಿ, ಎಸ್.ಎಲ್. ಭೋಜೆಗೌಡ, ಟಿ.ಎನ್. ಜವರಾಯ ಗೌಡ, ಕರೆಮ್ಮ ನಾಯಕ್, ಶಾರದಾ ಪೂರ್ಯ ನಾಯಕ, ಎಂ ಟಿ ಕೃಷ್ಣಪ್ಪ, ಟಿ.ಎ. ಶರವಣ, ರಾಜೂಗೌಡ ಪಾಟೀಲ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ಸಿ ಎಸ್ ಪುಟ್ಟರಾಜು, ವೆಂಕಟರಾವ್ ನಾಡಗೌಡ, ಆಲ್ಕೋಡ ಹನುಮಂತಪ್ಪ, ಸಂಸದ ಮಲ್ಲೇಶ್ ಬಾಬು, ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ. ಫಾರೂಕ್, ಸುರೇಶ್ ಗೌಡ, ಕೊಪ್ಪಳ ಚಂದ್ರಶೇಖರ್, ದೊಡ್ಡನಗೌಡ ಪಾಟೀಲ್, ಕೆ.ಎಂ. ಕೃಷ್ಣಾರೆಡ್ಡಿ, ತಿಮ್ಮರಾಯಪ್ಪ, ಸೂರಜ್ ಸೋನಿ ನಾಯಕ, ಪ್ರಸನ್ನ ಕುಮಾರ್, ಸುಧಾಕರ ಶೆಟ್ಟಿ ಸೇರಿ ಅನೇಕ ಆಹ್ವಾನಿತ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
**

