Bengaluru Rain| ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ಹಲವೆಡೆ ಜಲದಿಗ್ಬಂಧನ
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಒಟ್ಟು 603 ಫ್ಲಾಟ್‌ಗಳಿದ್ದು, 2ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಮಳೆ ನೀರು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಪರಿಣಾಮ ಹೊರಬರಲು ಪರದಾಡಿದರು.
ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಶನಿವಾರ ಹಾಗೂ ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.
ಶನಿವಾರ ರಾತ್ರಿ ಮಳೆಯಿಂದ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದ್ದವು. ಅಪಾರ್ಟ್‌ಮೆಂಟ್‌ಗಳಿಗೆ ಮಳೆ ಜಲದಿಗ್ಬಂಧನ ವಿಧಿಸಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಒಂದೇ ದಿನ ಸರಾಸರಿ 36 ಮಿ.ಮೀ.ಮಳೆ ಸುರಿದಿದೆ. ತಂಪುಗಾಳಿ, ಮಳೆಯಿಂದ ಜನಜೀವನ, ವ್ಯಾಪಾರ ವಹಿವಾಟು ಅಸ್ತವ್ಯಸ್ತಗೊಂಡಿದೆ.
ವೃದ್ಧಾಶ್ರಮಕ್ಕೆ ನುಗ್ಗಿದ ನೀರು: ಪರದಾಟ
ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದರು. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು.
ನಗರದ ಬಿನ್ನಿಪೇಟೆಯ ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. ಇದರಿಂದ ವಿದ್ಯುತ್ ಕಂಬ ವಾಲಿದ್ದು, 15 ಮನೆಯ ನಿವಾಸಿಗಳು ಹೊರಬಾರದ ಸ್ಥಿತಿಯಲ್ಲಿದ್ದಾರೆ. ಹತ್ತಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಯಲಹಂಕದ ಅಟ್ಟೂರಿನಲ್ಲಿ ಮಳೆ ಅಬ್ಬರಕ್ಕೆ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ.
ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ, ಬಟ್ಟೆಗಳು ನೀರುಪಾಲಾಗಿವೆ. ವರುಣನ ಆರ್ಭಟಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿ ಕೆರೆಯಂತಾಗಿತ್ತು. ಸಂಚಾರ ದಟ್ಟಣೆ ವಿಪರೀತವಾಗಿದ್ದರಿಂದ ವಾಹನ ಸವಾರರು ಪರದಾಡಿದರು.
ರಾಜಾಜಿನಗರ, ಮಂಜುನಾಥನಗರದಲ್ಲಿ ರಸ್ತೆ ಬದಿ ಅಂಗಡಿಗಳಿಗೆ ನೀರು ನುಗ್ಗಿದೆ.
ಅಪಾರ್ಟ್‌ಮೆಂಟ್‌ಗೆ ಜಲದಿಗ್ಬಂಧನ
ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಒಟ್ಟು 603 ಫ್ಲಾಟ್‌ಗಳಿದ್ದು, 2ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಮಳೆ ನೀರು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಪರಿಣಾಮ ಹೊರಬರಲು ಪರದಾಡಿದರು. ಬಳಿಕ ಅಲ್ಲಿನ ನಿವಾಸಿಗಳನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಲಾಯಿತು. ಅಪಾರ್ಟ್‌ಮೆಂಟ್‌ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಅಪಾರ್ಟ್‌ಮೆಂಟ್‌ನಲ್ಲೇ ಉಳಿದ ಹಲವರಿಗೆ ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ ಹಾಗೂ ಕುಡಿಯುವ ನೀರು ಪೂರೈಸಲಾಗಿದೆ.
ಬಳ್ಳಾರಿಯಲ್ಲಿ ನಾರಿಹಳ್ಳ ಆರ್ಭಟ
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಭಾರೀ ಮಳೆಗೆ ನಾರಿಹಳ್ಳ ಉಕ್ಕಿ ಹರಿದಿದೆ. ಸಂಡೂರಿನ ಯಶವಂತಪುರದಲ್ಲಿ ಅದಿರು ಸಾಗಿಸುವ ಲಾರಿಗಳು ನೀರಿನಲ್ಲಿ ಮುಳುಗಡೆಯಾಗಿವೆ. ನಾರಿಹಳ್ಳದಲ್ಲಿ ಮಳೆ ನೀರು ಬೋರ್ಗರೆಯುತ್ತಿದ್ದು, ಜಲಾಶಯದಿಂದ ಹೆಚ್ಚಿನ ನೀರು ಹೊರಬಿಡಲಾಗಿದೆ. ಇನ್ನು ಹಳೆ ಬಳ್ಳಾರಿಯಲ್ಲಿ ರಸ್ತೆಗಳು ಜಲಾವೃತವಾಗಿವೆ.
ಬೆಂಗಳೂರಿನಲ್ಲಿ ಮಳೆ ಪ್ರಮಾಣ
ಕೊಟ್ಟಿಗೆ ಪಾಳ್ಯದಲ್ಲಿ 113 ಮಿ.ಮೀ ಮಳೆಯಾಗಿದೆ. ಹಂಪಿನಗರದಲ್ಲಿ 108 ಮಿ.ಮೀ, ನಾಗಪುರ 107.5 ಮಿ.ಮೀ, ಚೌಡೇಶ್ವರಿ ನಗರ 79.5 ಮಿ.ಮೀ, ಮಾರುತಿಮಂದಿರ 75.5 ಮಿ.ಮೀ, ನಂದಿನಿ ಲೇಔಟ್ 71.5 ಮಿ.ಮೀ, ರಾಜಾಜಿನಗರ 59 ಮಿ.ಮೀ, ನಾಯಂಡಹಳ್ಳಿ 46 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 45 ಮಿ.ಮೀ, ವಿದ್ಯಾರಣ್ಯಪುರದಲ್ಲಿ 45 ಮಿ.ಮೀ, ಪುಟ್ಟೇನಹಳ್ಳಿ 42.5 ಮಿ.ಮೀ, ರಾಜರಾಜೇಶ್ವರಿ ನಗರ 42.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 42.5 ಮಿ.ಮೀ ಮಳೆಯಾಗಿದೆ ಎಂದು ಮಳೆ ಮಾಪನ ಸಂಸ್ಥೆ ತಿಳಿಸಿದೆ,
ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಇನ್ನು ನಾಲ್ಕು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ಇಲಾಖೆ ಹೇಳಿದೆ.