People should participate more in the governance of local bodies CM Siddaramaiah
x

ಅತ್ಯುತ್ತಮ ಗ್ರಾಮ ಪಂಚಾಯಿತಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡಿದರು.

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಜನರು ಹೆಚ್ಚು ಭಾಗವಹಿಸಲಿ: ಸಿಎಂ ಸಿದ್ದರಾಮಯ್ಯ

ಕೇಂದ್ರ‌ ಸರ್ಕಾರ ಜಲಜೀವನ್ ಮಿಷನ್‌ಗೆ ಅನುದಾನ ನೀಡಿಲ್ಲ, ಕಬ್ಬಿಗೆ ಬೆಲೆ‌, ಸಕ್ಕರೆಗೆ ಬೆಲೆ ನಿಗದಿ ಹಾಗೂ ಎಥನಾಲ್ ಹಂಚಿಕೆ ಮಾಡುವುದು ಕೇಂದ್ರ ಸರ್ಕಾರ. ಆದರೆ ರೈತರು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ಹಳ್ಳಿಗಳ ಅಭಿವೃದ್ದಿಯಾಗದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ, ಸ್ಥಳೀಯ ಆಡಳಿತದಲ್ಲಿ ಜನ ಪಾಲ್ಗೊಳ್ಳುವುದು ಹೆಚ್ಚಾಗಬೇಕು, ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದ್ದೇ ಕಾಂಗ್ರೆಸ್‌ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ(ಡಿ.1) ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಿಜೆಪಿಯ ರಾಮಜೋಯಿಸ್‌ ಮಹಿಳಾ ಮೀಸಲಾತಿಯನ್ನು ವಿರೋಧ ಮಾಡಿದ್ದರು. ಜನರು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ‌ ಸರ್ಕಾರ ಜಲಜೀವನ್ ಮಿಷನ್‌ಗೆ ಅನುದಾನ ನೀಡಿಲ್ಲ, ಕಬ್ಬಿಗೆ ಬೆಲೆ‌, ಸಕ್ಕರೆಗೆ ಬೆಲೆ ನಿಗದಿ ಹಾಗೂ ಎಥನಾಲ್ ಹಂಚಿಕೆ ಮಾಡುವುದು ಕೇಂದ್ರ ಸರ್ಕಾರ. ಆದರೆ ರೈತರು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಾರೆ ಎಂದರು.

ಬಿಜೆಪಿಯವರು ಬುರುಡೆ ಗ್ಯಾಂಗ್‌ನಂತೆ ಹೇಳಿಕೆ ನೀಡುತ್ತಿದ್ದಾರೆ. ಬೆಲೆ ನಿಗದಿ ಸೇರಿದಂತೆ ಎಲ್ಲವೂ ರಾಜ್ಯ ಸರ್ಕಾರಕ್ಕೆ ಸೇರಿದ್ದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಸುಳ್ಳು ಹೇಳುತ್ತಿದ್ದಾರೆ. ಆಹಾರ ಭದ್ರತೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್, ಆದರೆ ಜನ ಮೋದಿ, ಮೋದಿ ಎಂದು ಕೂಗುತ್ತಾರೆ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮೊದಲು, ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತ ಮಾತನಾಡಿದ ಅವರು, ದಕ್ಷ ಆಡಳಿತಗಾರರಾಗಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆದರ್ಶಗಳ ಹಾದಿಯಲ್ಲಿ ಸರ್ಕಾರ ನಡೆಯಲಿದೆ ಎಂದು ತಿಳಿಸಿದರು.

’ಜನರ ಕೆಲಸ ದೇವರ ಕೆಲಸ’

ಸ್ವಾತಂತ್ರ್ಯನಂತರ ರಾಜ್ಯದಲ್ಲಿ ಉದ್ಭವವಾಗಿದ್ದ ಸಮಸ್ಯೆಗಳನ್ನು ಕೆಂಗಲ್‌ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಎದುರಿಸಿದ್ದರು. ವಿಧಾನಸೌಧದ ಭವ್ಯ ಕಟ್ಟಡ ನಿರ್ಮಾಣಕ್ಕೆ ಅವರು ರೂವಾರಿಯಾಗಿದ್ದರು. ಕಟ್ಟಡದ ಉದ್ಘಾಟನೆಯ ವೇಳೆಗೆ ಅವರು ಅಧಿಕಾರದಲ್ಲಿರಲಿಲ್ಲ. ಜನಪ್ರತಿನಿಧಿಯಾಗಿ ಪ್ರಮಾಣಿಕ ಸೇವೆ ಸಲ್ಲಿಸುವುದು ಅತಿಮುಖ್ಯ ಎಂದು ವಿಧಾನಸೌಧದ ಕಟ್ಟಡದ ಪೂರ್ವಭಾಗದಲ್ಲಿ’ಜನರ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರ ಸೇವೆಯನ್ನು ಸರ್ಕಾರ ಸದಾಕಾಲ ಸ್ಮರಿಸುತ್ತದೆ ಎಂದರು.

ಮಂಗಳವಾರ(ಡಿ.2) ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಮನೆಗೆ ಉಪಾಹಾರಕ್ಕೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ನನ್ನ ಮನೆಯಲ್ಲಿ ಉಪಹಾರದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯವರು ಆಗಮಿಸಿದ್ದಾಗ, ತಮ್ಮ ನಿವಾಸದಲ್ಲಿ ಬೆಳಗಿನ ಉಪಹಾರಕ್ಕೆ ಆಹ್ವಾನವನ್ನು ನೀಡಿದ್ದಾರೆಯೇ ಹೊರತು, ಈ ಬಗ್ಗೆ ಯಾವುದೇ ದೂರವಾಣಿ ಕರೆ ಬಂದಿಲ್ಲ. ಆದರೆ ಉಪಹಾರಕ್ಕೆ ಆಹ್ವಾನ ಬಂದರೆ ತೆರಳುವುದಾಗಿ ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣ : ರಾಜಕೀಯ ಸೇಡು

ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ, ಬಿಜೆಪಿಯವರು ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.

ಜನರ ಶಕ್ತಿಯೇ ನಮ್ಮ ಆಸ್ತಿ

ಡಿಸಿಎಂ‌ ಡಿ.ಕೆ.ಶಿವಕುಮಾರ್ ಮಾತನಾಡಿ, "ಜನರ ಶಕ್ತಿಯೇ ನಮ್ಮ ಆಸ್ತಿ. ನಾನು ಶಾಸಕ ಸ್ಥಾನಕ್ಕೆ ಸೋತ ಬಳಿಕ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದೆ. ಕನಕಪುರ ತಾಲ್ಲೂಕಿನಲ್ಲಿ ಒಂದು ವರ್ಷದಲ್ಲಿ ನರೇಗಾ ಯೋಜನೆಯಡಿ 250 ಕೋಟಿ ರೂ. ಖರ್ಚು ಮಾಡಿದ್ದೆ. ಅದಕ್ಕೆ ತನಿಖೆಯಾಯಿತು ಆದರೆ ಏನೂ ಆಗಲಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಮಾನವ ದಿನಗಳನ್ನು ಶೇ. 40 ರಷ್ಟು ಕಡಿಮೆ ಮಾಡಿದೆ ಎಂದರು.

"ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ ಅದನ್ನು ಬಳಸಿಕೊಳ್ಳಬೇಕು. ಗ್ರಾಮ ಪಂಚಾಯತಿ ಅಧಿಕಾರಿಗಳು ಅವಕಾಶಗಳನ್ನು ಬಳಸಿಕೊಂಡು ಒಳ್ಳೆ‌ಯ ಕೆಲಸ ಮಾಡಬೇಕು. ಕಾನೂನು ಬಿಟ್ಟು ಕೆಲಸಮಾಡಿದರೆ ಜೈಲು,‌ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕಾದರೆ ಮೆದುಳನ್ನು ಉಪಯೋಗಿಸಿ. ಬೇರೆಯವರನ್ನು ನಿಯಂತ್ರಿಸಬೇಕಾದರೆ ಹೃದಯ ಉಪಯೋಗಿಸಿ ಎಂದು ಕಿವಿಮಾತು" ಹೇಳಿದರು.

Read More
Next Story