Fake Doctors | ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ; ಅಮಾಯಕರ ಜೀವದ ಜೊತೆ ಚೆಲ್ಲಾಟ
x

Fake Doctors | ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ; ಅಮಾಯಕರ ಜೀವದ ಜೊತೆ ಚೆಲ್ಲಾಟ

ಹಿಂದುಳಿದ ಹೈದರಾಬಾದ್ ಕರ್ನಾಟಕದ ಜಿಲ್ಲೆಯಾದ ಬೀದರ್ ನಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದಾರೆ. 623 ನಕಲಿ ವೈದ್ಯರ ಪೈಕಿ 442 ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ನೋಟಿಸ್‌ ಜಾರಿ ಮಾಡಿದೆ.


ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಗೆ ಜನ ಪರಿತಪಿಸುವಂತಾಗಿದೆ. ನಕಲಿ ವೈದ್ಯರಿಗೆ ಲಗಾಮು ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕಾರ್ಯಾಚರಣೆ ನಡೆಸಿದ ಹೊರತಾಗಿಯೂ ಪೂರ್ಣ ಪ್ರಮಾಣದ ಕಡಿವಾಣ ಬಿದ್ದಿಲ್ಲ.

ರಾಜ್ಯದಲ್ಲಿ 623 ನಕಲಿ ವೈದ್ಯರು ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಹಿರಂಗಪಡಿಸಿದೆ.

ಹಿಂದುಳಿದ ಹೈದರಾಬಾದ್ ಕರ್ನಾಟಕದ ಜಿಲ್ಲೆಯಾದ ಬೀದರ್ ನಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದಾರೆ. 623 ನಕಲಿ ವೈದ್ಯರ ಪೈಕಿ 442 ನಕಲಿ ವೈದ್ಯರಿಗೆ ಆರೋಗ್ಯ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಕಾನೂನಿನ ಅಡಿಯಲ್ಲಿ 67 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ 89 ಜನ ವೈದ್ಯರಿಗೆ ದಂಡವನ್ನು ವಿಧಿಸಲಾಗಿದೆ. ನಕಲಿ ವೈದ್ಯರಿಗೆ ಎಷ್ಟೇ ಕಡಿವಾಣ ಹಾಕಿದರೂ ವರ್ಷದಿಂದ ವರ್ಷಕ್ಕೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿರುವುದು ಅರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

1ಲಕ್ಷ ದಂಡ, 3 ವರ್ಷ ಜೈಲು

ರಾಜ್ಯದಲ್ಲಿ ನಕಲಿ ವೈದ್ಯರಿಗೆ ಕಾನೂನಿನ ಅಡಿಯಲ್ಲಿ 1 ಲಕ್ಷ ವರೆಗೂ ದಂಡ ಹಾಗೂ 3 ವರ್ಷದ ವರೆಗೂ ಜೈಲು ಶಿಕ್ಷೆಗೆ ಗುರಿಯಾಗಿಸಲು ಅವಕಾಶವಿದೆ. ಕೆಲ ಪ್ರಕರಣಗಳಲ್ಲಿ ಶಿಕ್ಷೆ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ. ಇಲಾಖೆ ನಕಲಿ ವೈದ್ಯರ ವಿರುದ್ದ ಸಮರಸಾರಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವೈದ್ಯರಿಗೆ ಬಲೆ ಬೀಸಲು ಇಲಾಖೆ ಸಜ್ಜಾಗಿದೆ.

ಅಮಾಯಕರ ಜೀವನದ ಜತೆ ಚೆಲ್ಲಾಟ

ನಕಲಿ ವೈದ್ಯರು ಅಮಾಯಕರ ಜೀವನದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಸರ್ಕಾರಿ ವೈದ್ಯರ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲೂ ಇವರ ಹಾವಳಿ ವಿಪರೀತವಾಗಿದೆ. ಬಡವರು ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರು ಇವರಿಂದ ಮೋಸ ಹೋಗುತ್ತಿದ್ದಾರೆ.

ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಅದರಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗುತ್ತಿಲ್ಲ.ಅಷ್ಟೇ ಅಲ್ಲದೆ ನ್ಯಾಯಾಲಯದಲ್ಲೂ ಕೆಲವು ಪ್ರಕರಣಗಳು ವಿಚಾರಣೆಯಲ್ಲಿರುವುದರಿಂದ ಇವರ ಹಾವಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

Read More
Next Story