ಹಾಸನ ಪೆನ್ ಡ್ರೈವ್ ಪ್ರಕರಣ | ಎಚ್ ಡಿ ರೇವಣ್ಣ- ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ ಐಆರ್ ದಾಖಲು
ಹಾಸನ ಪೆನ್ ಡ್ರೈವ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮತ್ತು ಜೆಡಿಎಸ್ ಹಿರಿಯ ನಾಯಕ ಎಚ್ ಡಿ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ.
ಸಂತ್ರಸ್ತ ಮಹಿಳೆಯೊಬ್ಬರು ಭಾನುವಾರ ಬೆಳಿಗ್ಗೆ ನೀಡಿದ ದೂರಿನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ.
ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಭಾನುವಾರ ಬೆಳಿಗ್ಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಿದ ಬೆನ್ನಲ್ಲೇ ಪ್ರಜ್ವಲ್ ಮತ್ತು ರೇವಣ್ಣ ಅವರ ತವರು ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಹೊಸ ದೂರು ದಾಖಲಾಗಿದೆ. ಮನೆಗೆಲಸ ಮಾಡಿಕೊಂಡಿದ್ದ ತನ್ನ ಮೇಲೆ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಕಳೆದ ನಾಲ್ಕೈದು ವರ್ಷಗಳಿಂದ ಇಂತಹ ಕೃತ್ಯ ಎಸಗಲಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಮತ್ತು ತಮ್ಮ ಪುತ್ರಿಯ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದೂ ಹೇಳಿರುವ ಮಹಿಳೆ, ತಮಗೆ ಜೀವ ಭಯವಿದೆ ಎಂದೂ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಪೆನ್ ಡ್ರೈವ್ ಲೈಂಗಿಕ ಹಗರಣದ ಮಾಹಿತಿ ತಿಳಿಯುತ್ತಿದ್ದಂತೆ ಭಯವಾಗಿದೆ. ಕುಟುಂಬದವರೂ ಆತಂಕಕ್ಕೊಳಗಾಗಿದ್ದಾರೆ. ಆ ಹಿನ್ನೆಲೆಯಲ್ಲಿ ದೂರು ದಾಖಲಿಸುತ್ತಿದ್ದೇನೆ ಎಂದು ನೊಂದ ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ನೊಂದ ಮಹಿಳೆಯ ದೂರಿನ ಆಧಾರದ ಮೇಲೆ ಹೊಳೆನರಸೀಪುರ ಪೊಲೀಸರು ಎಚ್ ಡಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354-A (ಲೈಂಗಿಕ ದೌರ್ಜನ್ಯ), 354- D (ಲೈಂಗಿಕ ಕಿರುಕುಳ) 506 (ಜೀವ ಬೆದರಿಕೆ), 509 (ಮಹಿಳೆಯ ಘನತೆಗೆ ಧಕ್ಕೆ ತರುವ ಕೃತ್ಯ) ಅಡಿ ಎಫ್ ಐಆರ್ ದಾಖಲಿಸಲಾಗಿದೆ.