ಮಾನಸಿಕ ಗೊಂದಲದಲ್ಲಿ ಸಂತ್ರಸ್ತೆ;  ಸಡಿಲಾಗಲಿದೆಯೇ ರೇವಣ್ಣ  ವಿರುದ್ಧದ ಕಾನೂನು ಕುಣಿಕೆ ?
x

ಮಾನಸಿಕ ಗೊಂದಲದಲ್ಲಿ ಸಂತ್ರಸ್ತೆ; ಸಡಿಲಾಗಲಿದೆಯೇ ರೇವಣ್ಣ ವಿರುದ್ಧದ ಕಾನೂನು ಕುಣಿಕೆ ?


ತನ್ನ ಮಗ ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಗರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಸಂತ್ರಸ್ತೆಯು ಸೋಮವಾರ ದಾಖಲಿಸಲಿರುವ ಹೇಳಿಕೆ ಕಾನೂನು ಕುಣಿಕೆಯನ್ನು ಬಿಗಿಗೊಳಿಸುವ ಅಥವಾ ಸಡಿಲಗೊಳಿಸುವ ಸಾಧ್ಯತೆಯಿದೆ. ಆದರೆ ಹಾಸನ ಹೊಳೆನರಸೀಪುರ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದ ಇನ್ನೋರ್ವ ಸಂತ್ರಸ್ತೆ ನೀಡಲಿರುವ ಹೇಳಿಕೆಯೂ ರೇವಣ್ಣ ಅವರ ಕಾನೂನು ಸಮರಕ್ಕ ಸವಾಲಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಅಪಹರಣಕ್ಕೆ ಒಳಗಾದ ಸಂತ್ರಸ್ತೆ ಇನ್ನೂ ಗೊಂದಲ ಮತ್ತು ಗಾಬರಿಗೆ ಒಳಗಾಗಿರುವ ಸ್ಥಿತಿಯಲ್ಲಿದ್ದು ಅಧಿಕಾರಿಗಳ ಮುಂದೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಆಕೆ ನ್ಯಾಯಾಧೀಶರ ಮುಂದೆ ದಾಖಲಿಸಲಿರುವ ಹೇಳಿಕೆ ರೇವಣ್ಣ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವರವಾಗುವ ಅಥವಾ ಕಂಟಕವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣಕ್ಕೆ ಒಳಗಾಗಿ ರೇವಣ್ಣ ಸಹಾಯಕ ಸತೀಶ್‌ ಬಾಬಣ್ಣನ ತೋಟದ ಮನೆಯಲ್ಲಿ ಗೃಹಬಂಧನದಲ್ಲಿದ್ದ ಆ ಸಂತ್ರಸ್ತೆಯನ್ನು ಎಸ್‌ಐಟಿ ಪೊಲೀಸರು ಶನಿವಾರ ಸಂಜೆ ರಕ್ಷಿಸಿದ್ದರು. ಬಳಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆಯನ್ನು ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ ಆರೈಕೆ ಮಾಡಲಾಗಿದ್ದು, ಮಹಿಳಾ ಮಾನಸಿಕ ವೈದ್ಯರು ಮತ್ತು ಮಹಿಳಾ ಆಪ್ತ ಸಮಾಲೋಚಕರಿಂದ ಅವರಿಗೆ ಧೈರ್ಯ ತುಂಬಿಸುವ ಕಾರ್ಯವನ್ನು ಎಸ್‌ಐಟಿ ಪೊಲೀಸರು ನಡೆಸಿದ್ದಾರೆ.

ಆದರೆ ಆಕೆ ಇನ್ನೂಗೊಂದಲ ಮತ್ತು ಗಾಬರಿಯಲ್ಲಿರುವಂತೆ ಕಂಡುಬಂದಿದ್ದು, ಕೆಲವು ಬಾರಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಮ್ಮೆ ತನ್ನನ್ನು ಯಾರೂ ಅಪಹರಿಸಿಲ್ಲ ಎಂದು ಹೇಳಿದರೆ, ಇನ್ನೊಮ್ಮೆ ತಾನೇ ಮನೆಯಿಂದ ಹೊರಗೆ ಹೋಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಮತ್ತೊಂದು ಬಾರಿ ಪರಿಚಿತ ವ್ಯಕ್ತಿಯೊಬ್ಬರು ತನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಇರುವುದ ತನಿಖೆ ಪ್ರಗತಿಗೆ ತೊಂದರೆ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಹರಣದ ಬಗ್ಗೆಯೂ ಪ್ರಸ್ತಾಪಿಸಿರುವ ಆಕೆ ತನ್ನನ್ನು ಎಲ್ಲೆಲ್ಲಿ ಸುತ್ತಾಡಿಸಿ ಕರೆದೊಯ್ಯಲಾಯಿತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ತನ್ನ ಮೇಲೆ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ಕುರಿತು ಕಣ್ಣೀರಿಡುತ್ತಲೇ ಮಹಿಳಾ ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ ಎಂದೂ ಹೇಳಲಾಗಿದೆ.

ರೇವಣ್ಣ ದೌರ್ಜನ್ಯ ನಡೆಸಿಲ್ಲ

ಪ್ರಜ್ವಲ್‌ ತನ್ನ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಆಕೆ ಮಾಹಿತಿ ನೀಡಿದ್ದು, ಎಚ್‌ಡಿ ರೇವಣ್ಣ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈಕೆಯ ಹೇಳಿಕೆ ಆಧಾರದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗುವ ನಿರೀಕ್ಷೆಇದೆ.

ಈ ನಡುವೆ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ರೇವಣ್ಣ ಮನೆಗೆಲಸದ ಮಹಿಳೆ ತನ್ನ ಮೇಲೆ ರೇವಣ್ಣ ಮತ್ತು ಪ್ರಜ್ವಲ್‌ ನೀಡಿದ್ದ ಲೈಂಗಿಕ ಕಿರುಕುಳದ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ಆಕೆ ನ್ಯಾಯಾಧೀಶರ ಮುಂದೆ ನೀಡಲಿರುವ ಸ್ವಯಂ ಪ್ರೇರಿತ ಹೇಳಿಕೆಯು ರೇವಣ್ಣ ಅವರ ವಿರುದ್ಧ ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ರೇವಣ್ಣ ನಕಾರ

ಇಷ್ಟೆಲ್ಲಾ ಆದರೂ, ಎಸ್‌ಐಟಿ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿರುವ ಎಚ್‌.ಡಿ. ರೇವಣ್ಣ ಒಂದೇ ಸಾಲಿನ ಉತ್ತರ ನೀಡಿ ಅಧಿಕಾರಿಗಳ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಮಹಿಳೆಯ ಅಪಹರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ, ತಾವು ಯಾರನ್ನೂ ಅಪಹರಿಸಿಲ್ಲ. ತಮ್ಮ ಮನೆಯಲ್ಲಿ ನೂರಾರು ಮಹಿಳೆಯರು ಕೆಲಸ ಮಾಡುತ್ತಾರೆ. ಅಪಹರಣಗೊಂಡಿದ್ದಾರೆ ಎನ್ನಲಾದ ಮಹಿಳೆಯೇ ತಮಗೆ ಪರಿಚಯವಿಲ್ಲ. ಆ ಮಹಿಳೆ ಆರೋಪಿಸಿರುವಂತೆ ರೇವಣ್ಣ ಎಂಬ ಹೆಸರಿನವರು ನೂರಾರು ಮಂದಿ ಇದ್ದಾರೆ. ರೇವಣ್ಣ ಎಂದು ಹೆಸರು ಇಟ್ಟುಕೊಂಡಿದ್ದೇನೆ ಎಂಬ ಮಾತ್ರಕ್ಕೆ ತನ್ನನ್ನು ಬಂಧಿಸಿರುವುದು ಸರಿಯಲ್ಲ ಎಂದು ಅಧಿಕಾರಿಗಳ ನಡೆಯನ್ನು ಟೀಕಿಸಿದ್ದಾರೆನ್ನಲಾಗಿದೆ.

Read More
Next Story