ಪ್ರಜ್ವಲ್‌ ಪೆನ್‌ ಡ್ರೈವ್‌ ಪ್ರಕರಣ | ಸಂತ್ರಸ್ತೆಯರ ನೆರವಿಗೆ ಹೆಲ್ಪ್‌ಲೈನ್‌ ಆರಂಭಿಸಿದ ಎಸ್‌ಐಟಿ
x

ಪ್ರಜ್ವಲ್‌ ಪೆನ್‌ ಡ್ರೈವ್‌ ಪ್ರಕರಣ | ಸಂತ್ರಸ್ತೆಯರ ನೆರವಿಗೆ ಹೆಲ್ಪ್‌ಲೈನ್‌ ಆರಂಭಿಸಿದ ಎಸ್‌ಐಟಿ

ನೂರಾರು ಮಹಿಳೆಯರು ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೌಂಗಿಕ ದೌರ್ಜನ್ಯಕ್ಕೆ ಈಡಾಗಿದ್ದಾರೆ. ಆದರೆ, ಪ್ರಭಾವಿ ಕುಟುಂಬದ ಭಯ ಮತ್ತು ಒತ್ತಡದಿಂದಾಗಿ ಹಲವರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರತ್ಯೇಕ ಸಹಾಯವಾಣಿ ಆರಂಭಿಸಿದೆ.


ನೂರಾರು ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೌಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಸಂತ್ರಸ್ತೆಯರ ನೆರವಿಗಾಗಿ ವಿಶೇಷ ಸಹಾಯವಾಣಿ(ಹೆಲ್ಪ್‌ಲೈನ್)‌ ಆರಂಭಿಸಿದೆ.

ಈ ಬಗ್ಗೆ ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ, ನೊಂದ ಮಹಿಳೆಯರು ಮತ್ತು ಅವರ ಪರವಾಗಿ ದೂರು ನೀಡುವವರು ವಿಶೇಷ ಹೆಲ್ಪ್‌ ಲೈನ್‌ ಮೂಲಕ ದೂರು ನೀಡಬಹುದು. ಜೊತೆಗೆ ಯಾವುದೇ ಸಂದರ್ಭದಲ್ಲಿ ಕಾನೂನು ನೆರವು ಸೇರಿದಂತೆ ಯಾವುದೇ ರೀತಿಯ ಸಹಾಯ ಅಥವಾ ರಕ್ಷಣೆ ಬೇಕಿದ್ದಲ್ಲಿ ಈ ಸಹಾಯವಾಣಿಯ ಮೂಲಕ ಕರೆ ಮಾಡಿ ಪಡೆಯಬಹುದು ಎಂದು ತಿಳಿಸಿದೆ.

ಸಂತ್ರಸ್ತೆಯರು ಅಥವಾ ಅವರಿಗೆ ಸಂಬಂಧಪಟ್ಟವರು ಸಹಾಯವಾಣಿ ಸಂಖ್ಯೆ- 63609 38947 ಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ತಿಳಿಸಲಾಗಿದೆ.

ಬೆದರಿಕೆಯೊಡ್ಡಿ, ಗನ್‌ ತೋರಿಸಿ ಹೆದರಿಸಿ, ಬ್ಲ್ಯಾಕ್‌ ಮೇಲ್‌ ಮಾಡಿ, ಆಮಿಷವೊಡ್ಡಿ ನೂರಾರು ಮಹಿಳೆಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗಿ ಕೃತ್ಯದ ವಿಡಿಯೋ ಮಾಡಿಟ್ಟುಕೊಂಡಿರುವ ಆರೋಪದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬಂದಿದೆ. ಈಗಾಗಲೇ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಕೊಲೆ ಬೆದರಿಕೆ, ಗನ್‌ ತೋರಿಸಿ ಅತ್ಯಾಚಾರ ನಡೆಸಿರುವುದು, ಲೈಂಗಿಕ ಕಿರುಕುಳ ನೀಡಿರುವುದು, ದೂರು ನೀಡದಂತೆ ಬೆದರಿಕೆ, ಅಪಹರಣ ಸೇರಿದಂತೆ ವಿವಿಧ ಸೆಕ್ಸನ್‌ ಅಡಿ ದೂರುಗಳು ದಾಖಲಾಗಿವೆ.

ಕಳೆದ ಒಂದು ವಾರದ ಹಿಂದೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್‌ ಐಟಿ ರಚಿಸಿದ್ದು, ತನಿಖೆ ಆರಂಭಿಸಿರುವ ಎಸ್‌ ಐಟಿ ಈಗಾಗಲೇ ಪ್ರಜ್ವಲ್‌ ತಂದೆ ಹಾಗೂ ಜೆಡಿಎಸ್‌ ಹಿರಿಯ ನಾಯಕ ಎಚ್‌ ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಈ ನಡುವೆ ಪ್ರಕರಣ ದಾಖಲಾಗುವ ಮುನ್ನವೇ ಏ. 27ರಂದೇ ದೇಶ ತೊರೆದು ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ವಿರುದ್ಧ ಎಸ್‌ ಐಟಿ ಲುಕ್‌ ಔಟ್‌ ನೋಟಿಸ್‌ ಹೊರಡಿಸಿದೆ.

ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಕುಟುಂಬದ ರಾಜಕೀಯ ಮತ್ತು ಅಧಿಕಾರದ ಪ್ರಭಾವ ಹಾಗೂ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಹಾಸನದ ನೂರಾರು ಸಂತ್ರಸ್ತೆಯರ ಪೈಕಿ ಕೆಲವೇ ಮಂದಿ ದೂರು ನೀಡಲು ಮುಂದೆ ಬಂದಿದ್ದಾರೆ. ಸಾಕಷ್ಟು ಸಂತ್ರಸ್ತೆಯರಿಗೆ ದೂರು ನೀಡುವ ಮನಸ್ಸಿದ್ದರೂ ಪ್ರಭಾವಿ ಕುಟುಂಬದ ದಬ್ಬಾಳಿಕೆ ಮತ್ತು ಅಟ್ಟಹಾಸದ ಭಯದಿಂದಾಗಿ ಹಿಂಜರಿಯುತ್ತಿದ್ದಾರೆ. ಅವರ ನೆರವಿಗಾಗಿ ಸಹಾಯವಾಣಿ ಆರಂಭಿಸಬೇಕು ಎಂದು ರಾಜ್ಯ ಮಹಿಳಾ ಆಯೋಗ ಮತ್ತು ವಿವಿಧ ಮಹಿಳಾ ಪರ ಸಂಘಟನೆಗಳು ಒತ್ತಾಯಿಸಿದ್ದವು.

ಆ ಹಿನ್ನೆಲೆಯಲ್ಲಿ ಇದೀಗ ಎಸ್‌ ಐಟಿ ಸಹಾಯವಾಣಿ ಆರಂಭಿಸಿದ್ದು, ಸಂತ್ರಸ್ತೆಯರು ಯಾವುದೇ ಭಯವಿಲ್ಲದೆ, ಆತಂಕ ಬಿಟ್ಟು ದೂರು ನೀಡಲು ಮುಂದೆ ಬರಬೇಕು ಮತ್ತು ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಬೇಕು ಎಂದು ಮಹಿಳಾ ಸಂಘಟನೆಗಳು ಕೂಡ ಕರೆ ನೀಡಿವೆ.

Read More
Next Story