ಪೆನ್‌ಡ್ರೈವ್‌ ಪ್ರಕರಣ | ಮೂರು ದಿನ ಎಸ್‌ಐಟಿ ವಶಕ್ಕೆ: ರಾಜಕೀಯ ಸೇಡಿನ ಪ್ರಕರಣ ಎಂದ ಎಚ್‌ ಡಿ ರೇವಣ್ಣ


ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನು ಎಸ್‌ಐಟಿ ಭಾನುವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರನ್ನು ವಿಚಾರಣೆಗಾಗಿ ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

ಈ ನಡುವೆ, ಎಸ್‌ಐಟಿ ವಶದಲ್ಲಿ ನ್ಯಾಯಾಧೀಶರ ಮನೆಗೆ ತೆರಳುವಾಗ, ಶಾಸಕ ಎಚ್‌ ಡಿ ರೇವಣ್ಣ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಷಢ್ಯಂತ್ರದ ಪ್ರಕರಣ ಎಂದು ಅವರು ಹೇಳಿದ್ದಾರೆ.

ಶನಿವಾರ(ಏ.4) ಸಂಜೆ ಎಸ್‌ ಐಟಿ ರೇವಣ್ಣ ಅವರನ್ನು ಅವರ ತಂದೆ, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಮನೆಯಿಂದ ವಶಕ್ಕೆ ಪಡದಿತ್ತು.

ಆ ಬಳಿಕ ಭಾನುವಾರ ಸಂಜೆ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಧೀಶರ ಮುಂದೆ ಹಾಜರಪಡಿಸಲು ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಾಯಿತು.

ಈ ವೇಳೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಚ್‌ ಡಿ ರೇವಣ್ಣ, "ಇದು ರಾಜಕೀಯ ಷಢ್ಯಂತ್ರ. ಯಾವುದೇ ಸಾಕ್ಷಿ, ಪುರಾವೆಗಳಿಲ್ಲದೆ ರಾಜಕೀಯ ಸೇಡಿಗಾಗಿ ಈ ಪ್ರಕರಣ ಹೂಡಿ ಸಿಲುಕಿಸಿದ್ದಾರೆ. ಇದು ದುರುದ್ದೇಶದ ಸುಳ್ಳು ಪ್ರಕರಣ" ಎಂದು ಹೇಳಿದ್ದಾರೆ.

ಎಸ್‌ ಐಟಿ ರೇವಣ್ಣ ಅವರ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ವಹಿಸುವಂತೆ ಎಸ್‌ಐಟಿ ಮಾಡಿದ ಮನವಿಯನ್ನು ಆಲಿಸಿದ ನ್ಯಾಯಾಧೀಶರು ಮೂರು ದಿನಗಳ ಅವಧಿಗೆ(ಏ.8 ರವರೆಗೆ) ಎಸ್‌ಐಟಿ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

Read More
Next Story