ಹಾಸನ ಪೆನ್‌ ಡ್ರೈವ್‌ ಪ್ರಕರಣ | ತನಿಖೆಗೆ ಎಸ್‌ಐಟಿ: ಸಿಎಂ ಸಿದ್ದರಾಮಯ್ಯ ಘೋಷಣೆ, ಆರೋಪಿ ಪ್ರಜ್ವಲ್ ಜರ್ಮನಿಗೆ ಪರಾರಿ?
x

ಹಾಸನ ಪೆನ್‌ ಡ್ರೈವ್‌ ಪ್ರಕರಣ | ತನಿಖೆಗೆ ಎಸ್‌ಐಟಿ: ಸಿಎಂ ಸಿದ್ದರಾಮಯ್ಯ ಘೋಷಣೆ, ಆರೋಪಿ ಪ್ರಜ್ವಲ್ ಜರ್ಮನಿಗೆ ಪರಾರಿ?


ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಹಾಸನ ಪೆನ್‌ಡ್ರೈವ್‌ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರಾತ್ರಿ ಘೋಷಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಘೋಷಣೆಗೂ ಮುನ್ನವೇ ಶನಿವಾರ ಬೆಳಗಿನ ಜಾವವೇ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

"ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ." ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ʼxʼ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತೆಯರು, ಮಾಧ್ಯಮದವರು, ನಟಿಯರು, ಸಾಮಾನ್ಯ ಗೃಹಿಣಿಯರು ಸೇರಿದಂತೆ ಸಾವಿರಾರು ಮಹಿಳೆಯರ ಮೇಲೆ ತನ್ನ ಪ್ರಭಾವ ಮತ್ತು ಅಧಿಕಾರ ಬಳಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳು ಮತ್ತು ಫೋಟೋಗಳನ್ನು ಒಳಗೊಂಡ ಪೆನ್‌ ಡ್ರೈವ್‌ಗಳು ಹಾಸನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸಾಮಾನ್ಯ ಕೈ ಸೇರಿದ್ದವು. ಬಳಿಕ ಪೆನ್‌ ಡ್ರೈವ್‌ಗಳಲ್ಲಿನ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ಒಬ್ಬ ಜನಪ್ರತಿನಿಧಿ ಹೀಗೆ ಸಾವಿರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದೇ ಅಲ್ಲದೆ, ಅವರೊಂದಿಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಅವರ ಖಾಸಗೀತನ, ಮಹಿಳಾ ಘನತೆ ಮತ್ತು ಸಾಮಾಜಿಕ ಬದುಕನ್ನು ಹರಾಜು ಹಾಕಿದ ವಿಕೃತಿಯನ್ನು ಕೇಳಿ ರಾಜ್ಯ ಮಾತ್ರವಲ್ಲದೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಹಿಂದೆಂದೂ ಕಂಡುಕೇಳರಿಯದ ಪ್ರಮಾಣದ ಸೆಕ್ಸ್‌ ಸ್ಕ್ಯಾಂಡಲ್‌ ಇದು ಎಂಬ ಮಾತುಗಳು ಕೇಳಿಬಂದಿದ್ದವು.


ಹಾಸನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಹಾಲಿ ಸಂಸದರೂ ಆಗಿರುವ ಆರೋಪಿ, ತನ್ನ ಅಧಿಕಾರವಧಿಯಲ್ಲಿ ತನ್ನ ಸಂಪರ್ಕಕ್ಕೆ ಬಂದ ಮಹಿಳಾ ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತೆಯರು, ಮಾಧ್ಯಮದವರು, ನಟಿಯರು, ಸಾಮಾನ್ಯ ಗೃಹಿಣಿಯರನ್ನು ತನ್ನ ಪ್ರಭಾವ ಬಳಸಿ, ಬೆದರಿಸಿ, ಆಮಿಷವೊಡ್ಡಿ ಲೈಂಗಿಕ ವಿಕೃತಿಗೆ ಬಳಸಿಕೊಂಡಿದ್ದಾನೆ. ಕೃತ್ಯವನ್ನು ತಾನೇ ವಿಡಿಯೋ ಮಾಡಿಟ್ಟುಕೊಂಡಿದ್ದು, ಆ ವಿಡಿಯೋ, ಚಿತ್ರಗಳು ಕಳೆದ ಒಂದು ವರ್ಷದ ಹಿಂದೆಯೇ ಮತ್ತೊಬ್ಬರ ಕೈಸೇರಿದ್ದವು ಎನ್ನಲಾಗುತ್ತಿದೆ. ಇದೀಗ ಚುನಾವಣಾ ಸಂದರ್ಭದಲ್ಲಿ ಸಾವಿರಾರು ವಿಡಿಯೋಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಾಕಿ, ಹಾಸನ ಕ್ಷೇತ್ರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿತ್ತು.

ಮಹಿಳಾ ಆಯೋಗದ ಸಕಾಲಿಕ ಕ್ರಮ

ಪೆನ್‌ ಡ್ರೈವ್‌ ಸೆಕ್ಸ್‌ ಸ್ಕ್ಯಾಂಡಲ್‌ ಹೊರಬೀಳುತ್ತಲೇ ಎಚ್ಚೆತ್ತ ರಾಜ್ಯ ಮಹಿಳಾ ಆಯೋಗ, ಪ್ರಭಾವಿ ರಾಜಕೀಯ ಕುಟುಂಬದ ಯುವ ಮುಖಂಡನೇ ಇಡೀ ಪ್ರಕರಣದ ಸೂತ್ರಧಾರ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನೊಂದ ಮಹಿಳೆಯರ ಘನತೆ ಮತ್ತು ಬದುಕು ಕಾಪಾಡಲು ಕೂಡಲೇ ವಿಶೇಷ ತನಿಖೆ ತಂಡ ರಚಿಸಿ, ತನಿಖೆಗೆ ಆದೇಶಿಸಿ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದಿತ್ತು. ಅಲ್ಲದೆ, ಸಂತ್ರಸ್ತ ಮಹಿಳೆಯೊಬ್ಬರ ಸಾಮಾಜಿಕ ಜಾಲತಾಣ ಹೇಳಿಕೆ ಉಲ್ಲೇಖಿಸಿ ನಿರ್ದಿಷ್ಟ ಪ್ರಕರಣದ ವಿಷಯದಲ್ಲಿ ತನಿಖೆ ನಡೆಸಿ ಮಹಿಳೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸುವಂತೆ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಆಯೋಗ ಪತ್ರ ಬರೆದಿತ್ತು.

ಅಲ್ಲದೆ, ಪ್ರಕರಣದ ಸಂತ್ರಸ್ತೆ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಅಧಿಕೃತ ದೂರನ್ನೂ ದಾಖಲಿಸಿದ್ದರು. ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ ಒಕ್ಕೂಟ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಕೂಡ ದೂರು ನೀಡಿದ್ದವು.

ಆದರೆ, ಮಹಿಳಾ ಆಯೋಗದ ಪತ್ರದ ಕುರಿತು ʼದ ಫೆಡರಲ್‌ ಕರ್ನಾಟಕʼದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಜೀತಾ ಮೊಹಮ್ಮದ್‌, "ಮಹಿಳಾ ಆಯೋಗದ ಪತ್ರ ತಲುಪಿದೆ. ಆದರೆ, ಸದ್ಯ ಚುನಾವಣಾ ಕರ್ತವ್ಯದ ಒತ್ತಡದಲ್ಲಿದ್ದೇವೆ. ಹಾಗಾಗಿ ಮುಂದಿನ ಸೋಮವಾರ(ಏ.೨೯ )ದ ನಂತರ ಈ ಬಗ್ಗೆ ಗಮನ ಹರಿಸಲಾಗುವುದು" ಎಂದು ಪ್ರತಿಕ್ರಿಯಿಸಿದ್ದರು.

ಸರ್ಕಾರದ ವಿಳಂಬ ಧೋರಣೆಯೇ ಸಹಕಾರಿಯಾಯಿತೆ?

ಆದರೆ, ಸರ್ಕಾರ ಆಯೋಗ ಪತ್ರ ಬರೆದ ನಾಲ್ಕು ದಿನಗಳ ಬಳಿಕ ಎಸ್‌ ಐಟಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಸರ್ಕಾರದ ತೀರ್ಮಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದರೂ, ಈ ಕ್ಷಣದವರೆಗೆ ಎಸ್‌ಐಟಿ ರಚಿಸಲಾಗಿಲ್ಲ. ಈ ನಡುವೆ ಆರೋಪಿ ಎಂದು ಸರ್ಕಾರ ಗುರುತಿಸಿರುವ(ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ) ಸಂಸದ ಪ್ರಜ್ವಲ್‌ ರೇವಣ್ಣ, ಶುಕ್ರವಾರ ಹಾಸನ ಕ್ಷೇತ್ರದ ಚುನಾವಣೆ ಮುಗಿಯುತ್ತಿದ್ದಂತೆ ಶನಿವಾರ ಬೆಳಗಿನ ಜಾವ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಪರಾರಿಯಾಗಿರುವುದಾಗಿ ಪೊಲೀಸ್‌ ಮೂಲಗಳು ಹೇಳುತ್ತಿವೆ.

"ಆಯೋಗದ ಪತ್ರದ ಬೆನ್ನಲ್ಲೇ ಪ್ರಕರಣದ ಅಗಾಧತೆ ಮತ್ತು ಭಾಗಿಯಾದವರ ರಾಜಕೀಯ ಪ್ರಭಾವ ಮತ್ತು ಬಲಾಢ್ಯತೆ ಅರಿತು ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಿದ್ದರೆ, ಬಹುಶಃ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಪ್ರಭಾವಿ ಯುವ ಮುಖಂಡ ಪರಾರಿಯಾಗುವ ಸಾಧ್ಯತೆ ಇರುತ್ತಿರಲಿಲ್ಲ. ಆದರೆ, ಸರ್ಕಾರ ವಿಷಯದ ಗಂಭೀರತೆ ಅರಿತು ತ್ವರಿತ ಕ್ರಮ ಜರುಗಿಸುವಲ್ಲಿ ಮಾಡಿದ ವಿಳಂಬದಿಂದಾಗಿ ಆರೋಪಿ ಪರಾರಿಯಾಗಲು ಅನುಕೂಲವಾಗಿದೆ" ಎಂದು ಈ ಬಗ್ಗೆ ದನಿ ಎತ್ತಿರುವ ಸಂಘಟನೆಗಳಲ್ಲಿ ಒಂದಾಗಿರುವ ʼಜನವಾದಿʼ ಮಹಿಳಾ ಸಂಘಟನೆಯ ಕೆ ಎಸ್‌ ವಿಮಲಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

"ಪ್ರಕರಣದಲ್ಲಿ ಕೆಲವು ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಾವು ಎಸ್‌ ಐಟಿ ತನಿಖೆಯನ್ನು ಒಪ್ಪುವುದಿಲ್ಲ. ಬದಲಾಗಿ ಈ ಪ್ರಕರಣದ ನ್ಯಾಯಾಂಗ ತನಿಖೆಗೇ ನಾವು ಆಗ್ರಹಿಸುತ್ತೇವೆ. ಸರ್ಕಾರದ ನಿಧಾನಗತಿಯ ಧೋರಣೆ ಮತ್ತು ಉಪೇಕ್ಷೆಯಲ್ಲಿಯೇ ಎಸ್‌ ಐಟಿ ತನಿಖೆ ಸುಮ್ಮನೇ ಕಣ್ಣೊರೆಸುವ ತಂತ್ರ ಎಂಬಂತಹ ಅನುಮಾನಗಳಿವೆ. ಅದರಲ್ಲೂ ಆರೋಪಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಕೇಳಿದ ಬಳಿಕ ಅಂತಹ ಅನುಮಾನಗಳು ಇನ್ನಷ್ಟು ಗಟ್ಟಿಯಾಗಿವೆ. ಹಾಗಾಗಿ ನಮಗೆ ಈ ತನಿಖೆಯಲ್ಲಿ ನಂಬಿಕೆ ಇಲ್ಲ" ಎಂದು ಅವರು ಹೇಳಿದರು.

"ರಾಜ್ಯ ಪೊಲೀಸ್‌ ಇಲಾಖೆ ಇಂತಹದ್ದೊಂದು ಸೂಕ್ಷ್ಮ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕಿತ್ತು. ದೂರು ದಾಖಲಾಗಿ ಎಫ್‌ ಐಆರ್‌ ದಾಖಲಾದ ಬಳಿಕವೂ ಸ್ಥಳೀಯ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೆ ಆತ ಸಂಸದನಾಗಿರುವುದರಿಂದ ಪೊಲೀಸರ ಬೆಂಗಾವಲಿನಲ್ಲೇ ಇರುತ್ತಾನೆ. ಆದರೂ ಆತನ ವಿರುದ್ಧ ಇಂತಹದ್ದೊಂದು ಗಂಭೀರ ಆರೋಪ ಕೇಳಿಬಂದಿರುವ ಹೊತ್ತಿನಲ್ಲೂ ಪೊಲೀಸರು ಆತನನ್ನು ಪರಾರಿಯಾಗಲು ಹೇಗೆ ಬಿಟ್ಟರು? ಎಂಬುದು ಪ್ರಶ್ನೆ. ಇದು ರಾಜ್ಯ ಪೊಲೀಸ್‌ ಇಲಾಖೆಯ ಸಂಪೂರ್ಣ ವೈಫಲ್ಯ. ಪೊಲೀಸ್‌ ಅಧಿಕಾರಿಗಳೂ ಆತನ ಪರಾರಿಯಲ್ಲಿ ಸಹಕರಿಸಿದ ಗಂಭೀರ ಅನುಮಾನಗಳಿವೆ" ಎಂದು ಪ್ರಕರಣದ ಕುರಿತು ಎರಡು ದಿನಗಳ ಹಿಂದೆಯೇ ಹಾಸನ ಮತ್ತು ಹೊಳೆನರಸೀಪುರದಲ್ಲಿ ದೂರು ದಾಖಲಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್)‌ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು.

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, "ಇಂಥ ಆಘಾತಕಾರಿ ಪ್ರಕರಣದಲ್ಲಿ ಸಂಸದನ ಹೆಸರು ಕೇಳಿಬಂದ ಕ್ಷಣದಿಂದಲೇ ಪೊಲೀಸ್‌ ಇಲಾಖೆ ಆತನ ಚಲನವಲನದ ಮೇಲೆ ಕಣ್ಣಿಡಬೇಕಿತ್ತು. ಅದರಲ್ಲೂ ಹಾಸನದ ಪೊಲೀಸ್‌ ವರಿಷ್ಠಾಧಿಕಾರಿಗಳು ಹೆಚ್ಚು ನಿಗಾ ಇಡಬೇಕಿತ್ತು. ಆದರೆ, ಇದು ದುರಂತ. ಭ್ರಷ್ಟ ಮತ್ತು ಆರೋಪಿಗಳೊಂದಿಗೆ ಪಾಲುದಾರ ಅಧಿಕಾರಿಗಳಿಂದಾಗಿ ಇಂತಹ ಆರೋಪಿ ಪರಾರಿಯಾಗಲು ಕಾರಣವಾಗಿದೆ. ಆದರೆ, ನಮ್ಮ ಸಂಘಟನೆ ಈ ವಿಷಯದಲ್ಲಿ ಹೋರಾಟ ತೀವ್ರಗೊಳಿಸಲಿದೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ವೈಫಲ್ಯವನ್ನು ಮುಂದಿಟ್ಟುಕೊಂಡು ನೊಂದ ಮಹಿಳೆಯರ ಪರ ಹೋರಾಟ ಮುಂದುವರಿಸಲಿದೆ" ಎಂದು ಹೇಳಿದರು.

ಸಾವಿರಾರು ಮಹಿಳೆಯರ ಬದುಕು ಮತ್ತು ಘನತೆಯ ಪ್ರಶ್ನೆಯಾಗಿರುವ ಮತ್ತು ಅತ್ಯಂತ ಹೇಯ ಲೈಂಗಿಕ ಹಗರಣದ ಅಗಾಧತೆಯನ್ನು ಪರಿಗಣಿಸಿ ತುರ್ತು ಕ್ರಮಕ್ಕೆ ಮುಂದಾಗುವ ಬದಲು, ಸರ್ಕಾರ ವಿಳಂಬ ಧೋರಣೆಯ ಆ ಮೂಲಕ ಆರೋಪಿ ಪರಾರಿಯಾಗಲು ಪರೋಕ್ಷವಾಗಿ ಸಹಕರಿಸಿದೆ ಎಂಬ ಗಂಭೀರ ಅನುಮಾನಗಳನ್ನು ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ವ್ಯಕ್ತಪಡಿಸಿವೆ.‌

Read More
Next Story