
ಪೆನ್‌ಡ್ರೈವ್ ಪ್ರಕರಣ | ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಕದ ತಟ್ಟಿದ ಭವಾನಿ ರೇವಣ್ಣ
ಹಾಸನ ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಭವಾನಿ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಮೂರನೇ ಆರೋಪಿಯಾಗಿದ್ದು, ಎಸ್‌ಐಟಿ ಈಗಾಗಲೇ ನೋಟಿಸ್ ನೀಡಿ ಬಂಧನಕ್ಕೆ ಜಾಲ ಬೀಸಿದೆ. ಕಳೆದ ಶುಕ್ರವಾರ ಅಧೀನ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ವಜಾ ಆಗಿದೆ. ಆ ಹಿನ್ನೆಲೆಯಲ್ಲಿ ಇದೀಗ ಅವರು ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಭವಾನಿ ರೇವಣ್ಣ ಪರ ವಕೀಲ ಗಿರೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿ ಸ್ವೀಕರಿಸಿದ್ದು, ಕೇಸ್ ನಂಬರ್ ನೀಡಿದ ಬಳಿಕ ಪೀಠಕ್ಕೆ ಅರ್ಜಿ ರವಾನೆಯಾಗುತ್ತದೆ. ಸೋಮವಾರ ಬೆಳಿಗ್ಗೆ 11:30ಕ್ಕೆ ಭವಾನಿ ರೇವಣ್ಣ ಪರ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದೇ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಿತ್ತು. ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಶುಕ್ರವಾರ ಭವಾನಿ ರೇವಣ್ಣ ಜಾಮೀನು ಅರ್ಜಿ ತಿರಸ್ಕಾರವಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದು, ಎಸ್‌ಐಟಿ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸುತ್ತಿದೆ. ಶನಿವಾರ ಹೊಳೆನರಸೀಪುರ ನಿವಾಸದಲ್ಲಿ ಸಂಜೆಯ ತನಕ ಕಾದರೂ ಸಹ ಭವಾನಿ ರೇವಣ್ಣ ವಿಚಾರಣೆಗೆ ಆಗಮಿಸಿಲ್ಲ. ಅವರ ಬಂಧನಕ್ಕಾಗಿಯೇ ಎಸ್‌ಐಟಿ 4 ವಿಶೇಷ ತಂಡಗಳನ್ನು ರಚನೆ ಮಾಡಿದೆ. ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದಲ್ಲಿದ್ದು, ಅವರ ವಿಚಾರಣೆ ಸಹ ನಡೆಯುತ್ತಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದ ಬಳಿಕ ಎಚ್.ಡಿ. ರೇವಣ್ಣ ಕುಟುಂಬ ಹೊಳೆನರಸೀಪುರ ನಿವಾಸದತ್ತ ಮುಖ ಹಾಕಿಲ್ಲ. ರೇವಣ್ಣ ಅವರು ಹಾಸನಕ್ಕೆ ಹಲವು ಬಾರಿ ಭೇಟಿ ನೀಡಿದರೂ, ಹೊಳೆನರಸೀಪುರಕ್ಕೆ ಹೋಗದೆ ಬೆಂಗಳೂರಿನ ನಿವಾಸಕ್ಕೆ ವಾಪಸ್ ಆಗುತ್ತಿದ್ದಾರೆ.