ಆದ್ಯತೆ ಮೇರೆಗೆ ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ಪಾವತಿ: ಡಿ.ಕೆ. ಶಿವಕುಮಾರ್
x

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌ ನೇತೃತ್ವದಲ್ಲಿ ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು

ಆದ್ಯತೆ ಮೇರೆಗೆ ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ಪಾವತಿ: ಡಿ.ಕೆ. ಶಿವಕುಮಾರ್


ಆದ್ಯತೆ ಮೇರೆಗೆ ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ಪಾವತಿ ಮಾಡಲಾಗುವುದು. ಸಣ್ಣ ಬಿಲ್ ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಬಿಜೆಪಿ ಕಾಲದಲ್ಲಿ ಅವರು ನನ್ನ ಇಲಾಖೆಯೊಂದರಲ್ಲಿಯೇ ರೂ.1.20 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳಿಗೆ ಆದೇಶ ನೀಡಿ ಹೋಗಿದ್ದು ಕೆಲಸ ನಡೆಯುತ್ತಿದೆ. ಪ್ರಸ್ತುತ ರೂ.6 ಸಾವಿರ ಕೋಟಿಯಷ್ಟು ಮಾತ್ರ ಬಿಲ್ ನೀಡಲು ಅವಕಾಶವಿದೆ. ಕೇಂದ್ರದಿಂದ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ” ಎಂದರು.

ಖರ್ಗೆ ಭೇಟಿ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರ ಕೇಳಿದಾಗ, "ನಾನು ಖರ್ಗೆ ಅವರನ್ನು ಭೇಟಿ ಮಾಡದೇ ಬಿಜೆಪಿ ಕಚೇರಿಗೆ ಭೇಟಿ ನೀಡಲೇ?. ಅವರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು, ನಾನು ರಾಜ್ಯದ ಅಧ್ಯಕ್ಷ. ಅವರು ನಮ್ಮ ರಾಜ್ಯಕ್ಕೆ ಬಂದಾಗ ಹೋಗಿ ಭೇಟಿ ಮಾಡಿ ಗೌರವ ನೀಡುವುದು ನಮ್ಮ ಕೆಲಸ. ಪಕ್ಷದ ವಿಚಾರಗಳು, ನೂತನ ಕಾಂಗ್ರೆಸ್ ಕಚೇರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು, ಈ ತಿಂಗಳಿನಲ್ಲಿಯೇ ದಿನಾಂಕ ನೀಡಿ ಎಂದು ಮನವಿ ಮಾಡಲು ಹೋಗಿದ್ದೆ” ಎಂದರು.

ಬಿಬಿಎಂಪಿ ಸರ್ಕಾರಿ ಕಚೇರಿಗಳಿಗೆ ತೆರಿಗೆ ಬಾಕಿ ಬಗ್ಗೆ ನೋಟಿಸ್ ನೀಡಿರುವ ಬಗ್ಗೆ, “ಹೌದು ಹಣ ಸಂಗ್ರಹ ಮಾಡಬೇಕಲ್ಲವೇ. ಬಿಬಿಎಂಪಿ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಸರ್ಕಾರಿ ಕಚೇರಿಯಾದರೂ ಒಂದಷ್ಟು ಬಿಲ್ ಗಳನ್ನು ಕಟ್ಟಲೇ ಬೇಕು. ವಿದ್ಯುತ್ ಬಿಲ್ ಸೇರಿದಂತೆ ಇತರೇ ಬಿಲ್ ಗಳನ್ನು ಕಟ್ಟಲೇಬೇಕು. ಈ ವಿಚಾರ ಕಳೆದ 20- 30 ವರ್ಷಗಳಿಂದ ನಡೆಯುತ್ತಿದೆ” ಎಂದರು.

ರಾಜಭವನ, ವಿಧಾನಸೌಧಗಳು ಈ ವ್ಯಾಪ್ತಿಗೆ ಬರುತ್ತವೆಯೇ ಎಂದಾಗ, “ಹೌದು ಎಲ್ಲರೂ ತೆರಿಗೆ ಪಾವತಿ ಮಾಡಲೇಬೇಕು” ಎಂದರು.

ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ರೂ.150 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಮರು ಪ್ರಶ್ನಿಸಿದಾಗ, “ಎಲ್ಲವನ್ನು ಸಂಗ್ರಹ ಮಾಡಲಾಗುವುದು. ಯಾವುದಕ್ಕೂ ನಾವು ವಿನಾಯಿತಿ ನೀಡಬಾರದು. ಎಲ್ಲರೂ ತೆರಿಗೆ ಕಟ್ಟಲೇಬೇಕು. ವಿದ್ಯುತ್ ಪೂರೈಕೆದಾರರಿಗೆ ನಾವು ಬಿಲ್ ನೀಡದೇ ಇದ್ದರೇ ಶೇ 18 ರಷ್ಟು ಬಡ್ಡಿ ತೆರಬೇಕಾಗುತ್ತದೆ” ಎಂದರು.

Read More
Next Story