ಪೆನ್‌ಡ್ರೈವ್‌ ಪ್ರಕರಣ | ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ
x

ಪೆನ್‌ಡ್ರೈವ್‌ ಪ್ರಕರಣ | ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ


ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜಾತ್ಯತೀತ ಜನತಾದಳ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪೆನ್‌ ಡ್ರೈವ್ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್‌ ಡಿ ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರದ್ದೇ ಪಕ್ಷದ ಶಾಸಕ ಹಾಗೂ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣುಗೌಡ ಕಂದಕೂರ ಪತ್ರ ಬರೆದಿದ್ದರು. ಪಕ್ಷದ ಹಿತದೃಷ್ಟಿಯಿಂದ ಪ್ರಜ್ವಲ್‌ ವಿರುದ್ದ ಕ್ರಮ ತೆಗೆದುಕೊಂಡು ಪಕ್ಷದಿಂದ ಹೊರಹಾಕಿ. ಪಕ್ಷದ ನೈತಿಕತೆ ಹೆಚ್ಚಿಸಿ ಎನ್ನುವ ಒತ್ತಾಯವನ್ನು ಅವರು ಮಾಡಿದ್ದರು.

ಹಾಸನದಲ್ಲಿ ಹಲವಾರು ಮಹಿಳೆಯರ ಮೇಲೆ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ಧಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ದೂರು ಕೂಡ ದಾಖಲಾಗಿದ್ದು, ಮೊಕದ್ದಮೆ ದಾಖಲಿಸಿ ಹಾಸನ ಪೊಲೀಸರು ತನಿಖೆ ಆರಂಭಿಸಿದ್ದರು. ಅಲ್ಲದೇ ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ತನಿಖೆಗೆ ವಹಿಸಿದೆ. ಹಿರಿಯ ಪೊಲೀಸ್‌ ಅಧಿಕಾರಿ ಬಿ.ಕೆ. ಸಿಂಗ್‌ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, ಐಪಿಎಸ್‌ ಅಧಿಕಾರಿಗಳಾದ ಸೀಮಾ ಲಾಟ್ಕರ್‌ ಹಾಗೂ ಡಾ.ಸುಮನಾ ಪನ್ನೇಕರ್‌ ಅವರು ಸಮಿತಿಯಲ್ಲಿದ್ದಾರೆ. ಈ ಎಸ್‌ ಐಟಿ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದೆ.

ಏನಿದು‌ ಪ್ರಜ್ವಲ್ ಪ್ರಕರಣ?

ಲೋಕಸಭಾ ಚುನಾವಣೆ ಕಾವು ಪಡೆಯುತ್ತಿರುವ ಹೊತ್ತಿನಲ್ಲೇ ಹಾಸನ ಸಂಸದ ಹಾಗೂ ಬಿಜೆಪಿ-ಜೆಡಿಎಸ್‌ ಹಾಲಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಸುಮಾರು 3 ಸಾವಿರದಷ್ಟು ಲೈಂಗಿಕ ಹಗರಣದ ವಿಡಿಯೋಗಳು ವೈರಲ್‌ ಆಗಿದ್ದವು. ಚುನಾವಣೆ ವೇಳೆ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳನ್ನು ಪೆನ್‌ ಡ್ರೈವ್‌ ನಲ್ಲಿ ತುಂಬಿಸಿ ಹಾಸನದಲ್ಲಿ ಹಂಚಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಮಹಿಳಾ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಹೆಂಗಸರನ್ನು ಸಂಸದ ಪ್ರಜ್ವಲ್‌ ರೇವಣ್ಣ ಅವರು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ, ಸಂತ್ರಸ್ತೆ ಮಹಿಳೆಯೊಬ್ಬರು ಪ್ರಜ್ವಲ್‌ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ. ಅಲ್ಲದೆ, ರಾಜ್ಯ ಮಹಿಳಾ ಆಯೋಗ ಕೂಡ ಮುಖ್ಯಮಂತ್ರಿ ಹಾಗೂ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದು ತನಿಖೆಗೆ ಎಸ್‌ ಐಟಿ ರಚಿಸುವಂತೆ ಸೂಚಿಸಿತ್ತು.

ಮತ್ತೊಂದು ಬೆಳವಣಿಗೆಯಲ್ಲಿ ಭಾನುವಾರ ಹಾಸನದ ಹೊಳೆನರಸೀಪುರದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ದೂರು ನೀಡಿದ್ದು, ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದಾರೆ.

ವಿದೇಶಕ್ಕೆ ಪ್ರಜ್ವಲ್ ಪರಾರಿ

ತಮ್ಮ ಆಘಾತಕಾರಿ ಲೈಂಗಿಕ ಹಗರಣದ ವಿಡಿಯೋಗಳು ಹೊರಬಂದು, ದೂರುಗಳು ದಾಖಲಾಗಿ, ತನಿಖೆಗೆ ಮಹಿಳಾ ಆಯೋಗ ಒತ್ತಾಯಿಸುತ್ತಿದ್ದಂತೆ ಸಂಸದ ಪ್ರಜ್ವಲ್‌ ರೇವಣ್ಣ ಮತದಾನದ ಮಾರನೇ ದಿನ ರಾತ್ರೋರಾತ್ರಿ ಜರ್ಮನಿಗೆ ಪರಾರಿಯಾಗಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರು, ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಿರುವುದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪ್ರಕರಣದ ಕುರಿತು ರಾಜ್ಯ ಸರ್ಕಾರ ಎಸ್‌ ಐಟಿ ರಚಿಸಿದೆ. ಎಸ್‌ ಐಟಿ ತನಿಖೆ ನಡೆಸಿ ವರದಿ ನೀಡಲಿ. ವರದಿಯಲ್ಲಿ ಪ್ರಜ್ವಲ್‌ ತಪ್ಪಿತಸ್ಥ ಎಂಬುದು ಸಾಬೀತಾದರೆ ಅವರ ವಿರುದ್ಧ ಪಕ್ಷ ಮುಲಾಜಿಲ್ಲದೆ ಕ್ರಮ ಜರುಗಿಸಲಿದೆ ಎಂದೂ ಸೋಮವಾರ ಬೆಳಿಗ್ಗೆ ಶಿವಮೊಗ್ಗದಲ್ಲಿ ಹೇಳಿದ್ದರು.

ಈ ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ತಮ್ಮ ಹೇಳಿಕೆ ಬದಲಿಸಿರುವ ಎಚ್‌ ಡಿ ಕುಮಾರಸ್ವಾಮಿ ಅವರು, ಭಾನುವಾರ ತಮ್ಮ ತಂದೆ, ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡರದೊಂದಿಗೆ ಚರ್ಚಿಸಿದ ಬಳಿಕ ಪ್ರಜ್ವಲ್‌ ಅವರನ್ನು ಉಚ್ಚಾಟಿಸಲು ತೀರ್ಮಾನಿಸಲಾಗಿತ್ತು ಎಂದು ಹೇಳಿದ್ದಾರೆ.

Read More
Next Story