
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಎಸ್‌ಐಟಿ ತಂಡಕ್ಕೆ ಸಿಗದ ರೇವಣ್ಣ; ಹೋಮ ಮಾಡಿ ದಂಪತಿ ಬೆಂಗಳೂರಿಗೆ ಶಿಫ್ಟ್
ಮನೆ ಕೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಯಾಗಿರುವ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಎಸ್‌ಐಟಿಯಿಂದ ನೋಟಿಸ್ ಜಾರಿಯಾಗುತ್ತಲೇ, ಹೊಳೆನರಸೀಪುರದ ತಮ್ಮ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೋಮ, ವಿಶೇಷ ಪೂಜೆ ನೆರವೇರಿಸಿ ದೇವರ ಮೊರೆ ಹೋಗಿದ್ದಾರೆ.
ಪ್ರಕರಣದ ಆರೋಪಿಗಳಾಗಿರುವ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಮನೆ ಬಾಗಿಲಿಗೆ ಎಸ್‌ಐಟಿ ತಂಡ ಮಂಗಳವಾರ ನೋಟೀಸ್ ಅಂಟಿಸಿತ್ತು. ಅದರಂತೆ ಬುಧವಾರ ಹೊಳೆನರಸೀಪುರಕ್ಕೆ ಬಂದು ಸ್ಥಳ ಮಹಜರು ನಡೆಸಲು ನಿರ್ಧರಿಸಿತ್ತು. ಆದರೆ, ರೇವಣ್ಣ ದಂಪತಿ ಬುಧವಾರ ಬೆಳಿಗ್ಗೆಯೇ ಪೂಜೆ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. ಹಾಗಾಗಿ ಎಸ್‌ಐಟಿ ತಂಡ ಅವರ ಮನೆಗೆ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಕುಟುಂಬದ ಸದಸ್ಯರ ಹೆಸರಿನಲ್ಲಿ; ವಿಶೇಷವಾಗಿ ಅವರ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಪೂಜೆ ನೆರವೇರಿಸಿದರು. ರೇವಣ್ಣ ಮತ್ತು ಅವರ ಪತ್ನಿ ಭವಾನಿ ತಮ್ಮ ನಿವಾಸದಲ್ಲಿ ಹೋಮದಲ್ಲಿ ಪಾಲ್ಗೊಳ್ಳುವ ಮೊದಲು ಹರದನಹಳ್ಳಿಯ ದೇವೇಶ್ವರ ದೇವಸ್ಥಾನ ಮತ್ತು ಹೊಳೆನರಸೀಪುರ ಪಟ್ಟಣದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಾಲ್ವರು ಪುರೋಹಿತರ ತಂಡ ಶತ್ರು ಸಂಹಾರ ಹಾಗೂ ಶಾಂತಿ ಹೋಮಗಳನ್ನು ನೆರವೇರಿಸಿದ್ದು, ರೇವಣ್ಣ ದಂಪತಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದ ಅಸಮಾಧಾನಗೊಂಡಿರುವ ರೇವಣ್ಣ ಅವರು ತಮ್ಮ ಆಪ್ತರು ಹಾಗೂ ಪಕ್ಷದ ಹಿರಿಯ ನಾಯಕರ ಜತೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಅವರ ಸಹೋದರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಪೆನ್ ಡ್ರೈವ್ ಹಗರಣದಿಂದ ಅಸಮಾಧಾನಗೊಂಡಿದ್ದು, ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರಿಂದ ತುಂಬಿ ತುಳುಕುತ್ತಿದ್ದ ಹೊಳೆನರಸೀಪುರದ ಹಾಸನ-ಮೈಸೂರು ರಸ್ತೆಯಲ್ಲಿರುವ ಅವರ ನಿವಾಸವು ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ವೀಡಿಯೊಗಳು ಹೊರಬಂದಾಗಿನಿಂದ ನಿರ್ಜನವಾಗಿದೆ. ಪ್ರಕರಣ ಹೊರ ಬಂದಾಗಿನಿಂದ ಬಳಿಕ ಜೆಡಿಎಸ್‌ನ ಯಾವ ನಾಯಕರೂ ಅವರ ನಿವಾಸಕ್ಕೆ ಭೇಟಿ ನೀಡಿಲ್ಲ.
ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಬಂದಿದ್ದ ರೇವಣ್ಣ, ಬುಧವಾರ ಎಲ್ಲ ವಿಧಿವಿಧಾನಗಳು ಮುಗಿಯುವವರೆಗೂ ತಮ್ಮ ನಿವಾಸದಿಂದ ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ 2 ಗಂಟೆ ಸುಮಾರಿಗೆ ರೇವಣ್ಣ ಮತ್ತು ಭವಾನಿ ಬೆಂಗಳೂರಿಗೆ ತೆರಳಲು ಕಾರು ಹತ್ತಿದ್ದಾರೆ. ತಮ್ಮ ನಿವಾಸದ ಹೊರಗೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಮಾಧ್ಯಮದವರನ್ನು ನೋಡಿದ ರೇವಣ್ಣ, ಪ್ರಕರಣದ ತನಿಖೆಗೆ ರಚಿತವಾಗಿರುವ ವಿಶೇಷ ತನಿಖಾ ತಂಡದಿಂದ ತನಿಖೆ ಎದುರಿಸುವುದಾಗಿ ಹೇಳಿದರು.
ಇದು ತಮ್ಮ ವಿರುದ್ಧ ನಡೆದಿರುವ ಷಡ್ಯಂತ್ರವಾಗಿದ್ದು, ಮುಂದಿನ ಕ್ರಮವನ್ನು ಶೀಘ್ರವೇ ನಿರ್ಧರಿಸುವುದಾಗಿ ಹೇಳಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನನ್ನಲ್ಲಿದೆ ಎಂದು ಅವರು ಹೇಳಿದರು.